ಅಸ್ಸಾಂ ರೈಫಲ್ಸ್ ಬೆಂಗಾವಲು ವಾಹನದ ಮೇಲೆ ದಾಳಿ ಪ್ರಕರಣ: ಮಾಹಿತಿ ನೀಡುವವರಿಗೆ 4ರಿಂದ 8 ಲಕ್ಷ ರೂ. ಬಹುಮಾನ
ಹೊಸದಿಲ್ಲಿ, ಜ. 6: ಮಣಿಪುರದಲ್ಲಿ ಕಳೆದ ನವೆಂಬರ್ ನಲ್ಲಿ ಅಸ್ಸಾಂ ರೈಫಲ್ಸ್ ನ ಕರ್ನಲ್ ಹಾಗೂ ಅವರ ಕುಟುಂಬದವರು ಸಾವನ್ನಪ್ಪಲು ಕಾರಣವಾದ ದಾಳಿಯಲ್ಲಿ ಪಾಲ್ಗೊಂಡ ಶಂಕಿತ ಉಗ್ರರ ಬಗ್ಗೆ ‘‘ಮಹತ್ವದ ಮಾಹಿತಿ’’ ನೀಡಿದವರಿಗೆ 4ರಿಂದ 8 ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಗುರುವಾರ ಘೋಷಿಸಿದೆ.
2021 ನವೆಂಬರ್ 13ರಂದು ನಡೆದ ದಾಳಿಯಲ್ಲಿ ನಿಷೇಧಿತ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್ಎ) ಹಾಗೂ ಮಣಿಪುರ ನಾಗಾ ಪೀಪಲ್ಸ್ ಫ್ರಂಟ್ (ಎಂಎನ್ಪಿಎಫ್)ನ 10 ಶಂಕಿತ ಉಗ್ರರು ಭಾಗಿಯಾಗಿದ್ದರು. ಶಂಕಿತರ ಬಂಧನ ಅಥವಾ ವಶಕ್ಕೆ ಕಾರಣವಾಗುವ ‘‘ಮಹತ್ವದ ಮಾಹಿತಿ’’ ನೀಡುವ ಯಾವುದೇ ವ್ಯಕ್ತಿಗೆ ಬಹುಮಾನ ನೀಡಲಾಗುವುದು ಎಂದು ಎನ್ಐಎ ವಕ್ತಾರ ಹೇಳಿದ್ದಾರೆ.
ಕಳೆದ ವರ್ಷ ನವೆಂಬರ್ 13ರಂದು ಪಿಎಲ್ಎ ಹಾಗೂ ಎಂಎನ್ಪಿಎಫ್ನ ಶಂಕಿತ ಉಗ್ರರು ಮಣಿಪುರದ ಚುರಚಾಂಡುಪುರ ಜಿಲ್ಲೆಯ ಸಿಂಗ್ನಾಘಾಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಭಾರತ-ಮ್ಯಾನ್ಮಾರ್ ರಸ್ತೆಯಲ್ಲಿರುವ ಸಿಲಾಸಿಹ್ ಗ್ರಾಮದ ಸಮೀಪ ಅಸ್ಸಾಂ ರೈಫಲ್ಸ್ ನ ಬೆಂಗಾವಲು ವಾಹನಗಳ ಮೇಲೆ ದಾಳಿ ನಡೆಸಿತ್ತು. ಈ ದಾಳಿಯಿಂದ ಕಮಾಂಡಿಂಗ್ ಅಧಿಕಾರಿ ಕರ್ನಲ್ ವಿಪ್ಲವ್ ತ್ರಿಪಾಠಿ, ಅವರ ಪತ್ನಿ ಹಾಗೂ ಪುತ್ರ ಸೇರಿದಂತೆ ಅಸ್ಸಾಂ ರೈಫಲ್ಸ್ ನ ಐವರು ಸಾವನ್ನಪ್ಪಿದ್ದರು.