ಚುನಾವಣಾ ರ‍್ಯಾಲಿಗೆ ಪರಿಸ್ಥಿತಿ ಅನುಕೂಲಕರವಾಗಿಲ್ಲ: ಚುನಾವಣಾ ಆಯೋಗಕ್ಕೆ ತಿಳಿಸಿದ ವಿ.ಕೆ. ಪೌಲ್
ಹೊಸದಿಲ್ಲಿ, ಜ. 6: ದೇಶದಲ್ಲಿ ಪ್ರಸಕ್ತ ಇರುವ ಕೋವಿಡ್ ಪರಿಸ್ಥಿತಿ ದೊಡ್ಡ ಮಟ್ಟದ ರ್ಯಾಲಿಗಳು ಹಾಗೂ ರೋಡ್ ಶೋಗಳಿಗೆ ಅನುಕೂಲಕರವಾಗಿಲ್ಲ ಎಂದು ನೀತಿ ಆಯೋಗದ ಸದಸ್ಯ ಹಾಗೂ ಕೋವಿಡ್ ಕ್ಷಿಪ್ರ ಪಡೆಯ ವರಿಷ್ಠ ವಿ.ಕೆ. ಪೌಲ್ ಅವರು ಚುನಾವಣಾ ಆಯೋಗಕ್ಕೆ ತಿಳಿಸಿದ್ದಾರೆ. ಆದರೆ, ರಾಜಕೀಯ ಪಕ್ಷಗಳು ತಮ್ಮ ಸ್ವಂತ ಇಚ್ಛೆಯಿಂದ ಇಂತಹ ದೊಡ್ಡ ಮಟ್ಟದ ರ್ಯಾಲಿಗಳು ಹಾಗೂ ರೋಡ್ಶೋಗಳನ್ನು ನಿಲ್ಲಿಸಬೇಕು ಎಂಬ ನಿಲುವನ್ನು ಚುನಾವಣಾ ಆಯೋಗ ತಳೆದಿದೆ. ಆ ಮೂಲಕ ಇಂತಹ ಕಾರ್ಯಕ್ರಮಗಳನ್ನು ನಿಲ್ಲಿಸಲು ಚುನಾವಣಾ ಆಯೋಗ ಕ್ರಮಕೈಗೊಳ್ಳಲು ಸಾಧ್ಯವಿಲ್ಲ ಎಂಬ ಸೂಚನೆಯನ್ನು ನೀಡಿದೆ.
ಈ ಹಿಂದೆ ಚುನಾವಣಾ ಆಯೋಗ ವಿಧಾನ ಸಭೆ ಚುನಾವಣೆಗೆ ಉತ್ತಮ ಸಿದ್ಧತೆ ಮಾಡಿಕೊಳ್ಳಿ ಹಾಗೂ ಲಸಿಕೆ ನೀಡಿಕೆಯನ್ನು ಹೆಚ್ಚಿಸಿ ಎಂದು ಚುನಾವಣೆ ನಡೆಯಲಿರುವ 5 ರಾಜ್ಯಗಳಾದ ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ, ಪಂಜಾಬ್ ಹಾಗೂ ಮಣಿಪುರಕ್ಕೆ ತಿಳಿಸಿತ್ತು. ಆದರೆ ಈಗ ಒಮೈಕ್ರಾನ್ ತೀವ್ರವಾಗಿ ಹರಡುತ್ತಿರುವುದರಿಂದ ಚುನಾವಣೆ ನಡೆಸುವ ಬಗ್ಗೆ ಆತಂಕ ಎದುರಾಗಿದೆ.
ಚುನಾವಣಾ ಆಯೋಗ ಕೂಡ ಸಿಬ್ಬಂದಿ ಸಂಖ್ಯೆ ಹೆಚ್ಚಿಸಲು, ಎಲ್ಲ ಅಧಿಕಾರಿಗಳು ಲಸಿಕೆ ಪಡೆದುಕೊಳ್ಳಲು ಹಾಗೂ ಮತದಾನ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳುತ್ತಿದೆ. ಅಲ್ಲದೆ, ಚುನಾವಣಾ ಆಯೋಗ ಇತ್ತೀಚೆಗೆ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರನ್ನು ಭೇಟಿಯಾಗಿತ್ತು. ದೇಶದಲ್ಲಿ ಕೋವಿಡ್ ಪರಿಸ್ಥಿತಿ ಬಗ್ಗೆ ಅವರೊಂದಿಗೆ ಚರ್ಚೆ ನಡೆಸಿತ್ತು.