ಮಣಿಪುರ: ಐಇಡಿ ಸ್ಫೋಟ; ಅಸ್ಸಾಂ ರೈಫಲ್ಸ್ ನ ಯೋಧ ಹುತಾತ್ಮ
ಇಂಫಾಲ, ಜ. 6: ಮಣಿಪುರದ ಥೌಬಾಲ್ ಜಿಲ್ಲೆಯ ಲಿಲೋಂಗ್ನಲ್ಲಿ ಉಗ್ರರು ಇರಿಸಿದ್ದೆಂದು ಶಂಕಿಸಲಾದ ಸುಧಾರಿತ ಸ್ಪೋಟಕ ಸಾಧನ (ಐಇಡಿ) ಬುಧವಾರ ಸ್ಫೋಟಗೊಂಡ ಪರಿಣಾಮ 16ನೇ ಅಸ್ಸಾಂ ರೈಫಲ್ಸ್ ನ ಯೋಧ ಸಾವನ್ನಪ್ಪಿದ್ದಾರೆ. ಇನ್ನೊಬ್ಬರು ಗಾಯಗೊಂಡಿದ್ದಾರೆ. ಇಂಫಾಲ್-ಮೊರೆಹ್ ರಾಷ್ಟ್ರೀಯ ಹೆದ್ದಾರಿಯ ಸಂಗೋಮ್ಸಂಗ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಐಇಡಿ ಸ್ಫೋಟಗೊಂಡ ಸಂದರ್ಭ ಅಸ್ಸಾಂ ರೈಫಲ್ಸ್ ನ ತಂಡ ಎಂದಿನಂತೆ ಆ ಪ್ರದೇಶದಲ್ಲಿ ಗಸ್ತು ಕರ್ತವ್ಯದಲ್ಲಿ ನಿರತವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. 16ನೇ ಅಸ್ಸಾಂ ರೈಫಲ್ಸ್ ತಂಡ ಕರ್ತವ್ಯ ಮುಗಿಸಿ ಸಾಮಾನ್ಯವಾಗಿ ವಿಶ್ರಾಂತಿ ತೆಗೆದುಕೊಳ್ಳುತ್ತಿರುವ ಸ್ಥಳದಲ್ಲಿ ಈ ಐಇಡಿ ಇರಿಸಲಾಗಿತ್ತು. ಬಹುಶಃ 16ನೇ ಅಸ್ಸಾಂ ರೈಫಲ್ಸ್ ತಂಡವನ್ನು ಗುರಿಯಾಗಿರಿಸಿ ಈ ಸ್ಪೋಟಕ ಇರಿಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ಮೃತಪಟ್ಟ ಯೋಧನನ್ನು ಅರುಣಾಚಲಪ್ರದೇಶದ ಎಲ್ ವಾಂಗ್ಶು (30) ಎಂದು ಹಾಗೂ ಗಾಯಗೊಂಡ ಯೋಧನನ್ನು ತ್ರಿಪುರಾದ ಪಿಂಕು ದಾಸ್ (25) ಎಂದು ಗುರುತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಥೌಬಾಲ್ ಎಸ್ಪಿ ನೇತೃತ್ವದ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಪ್ರದೇಶವನ್ನು ಸುತ್ತುವರಿದು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಆದರೆ, ಯಾರೊಬ್ಬರನ್ನೂ ಬಂಧಿಸಿರುವ ಬಗ್ಗೆ ವರದಿಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.