×
Ad

ಪರೀಕ್ಷೆ ಹೆಚ್ಚಿಸುವಂತೆ 9 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸೂಚನೆ

Update: 2022-01-06 23:44 IST

ಹೊಸದಿಲ್ಲಿ, ಜ. 6: ಕೋವಿಡ್ ಸೋಂಕಿತರು ಸೋಂಕನ್ನು ಇತರರಿಗೆ ಹರಡದಂತೆ ಖಾತರಿ ನೀಡಲು ಕೋವಿಡ್ ಪರೀಕ್ಷೆಯನ್ನು ತೀವ್ರಗೊಳಿಸುವಂತೆ ಕೇಂದ್ರ ಸರಕಾರ 9 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳನ್ನು ಆಗ್ರಹಿಸಿದೆ. ‌

ತಮಿಳುನಾಡು, ಪಂಜಾಬ್, ಒಡಿಶಾ, ಉತ್ತರಪ್ರದೇಶ, ಉತ್ತರಾಖಂಡ, ಮಿಝೋರಾಂ, ಮೇಘಾಲಯ, ಜಮ್ಮು ಹಾಗೂ ಕಾಶ್ಮೀರ, ಬಿಹಾರ್ಗೆ ರವಾನಿಸಲಾದ ಪತ್ರದಲ್ಲಿ ಕೇಂದ್ರ ಆರೋಗ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಆರ್ತಿ ಅಹುಜಾ, ಕೋವಿಡ್ ಪ್ರಕರಣಗಳ ಸಂಖ್ಯೆ ಹಾಗೂ ಪಾಸಿಟಿವಿಟಿ ದರ ಏರಿಕೆಯಾಗುತ್ತಿರುವ ನಡುವೆ ಕೋವಿಡ್ ಪರೀಕ್ಷೆಯಲ್ಲಿ ಗಣನೀಯವಾಗಿ ಇಳಿಕೆಯಾಗುತ್ತಿರುವುವ ಬಗ್ಗೆ ಬೆಟ್ಟು ಮಾಡಿದ್ದಾರೆ. ಅಲ್ಲದೆ, ಇದು ಕಳವಳಕಾರಿ ವಿಚಾರ ಎಂದಿದ್ದಾರೆ. 

ಸಾಕಷ್ಟು ಪರೀಕ್ಷೆಗಳ ಕೊರತೆಯಿಂದ ಸಮುದಾಯದಲ್ಲಿ ಸೋಂಕಿನ ನಿಜವಾದ ಮಟ್ಟವನ್ನು ಗುರುತಿಸುವಲ್ಲಿ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ವಿಫಲವಾಗಿವೆ ಎಂದು ಅಹುಜಾ ಅವರು ಜನವರಿ 5ರಂದು ರವಾನಿಸಿದ ಪತ್ರದಲ್ಲಿ ಹೇಳಿದ್ದಾರೆ. ಕೋವಿಡ್ನ ರೂಪಾಂತರಿ ಒಮೈಕ್ರಾನ್ ಪ್ರಕರಣಗಳ ಸಂಖ್ಯೆ ಏರುತ್ತಿದೆ ಹಾಗೂ ಅತ್ಯಧಿಕ ಸಂಖ್ಯೆಯ ಲಸಿಕೀಕರಣದ ಹೊರತಾಗಿಯೂ ಬಹುತೇಕ ದೇಶಗಳಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳ ಸಂಖ್ಯೆ ಬಹುಪಟ್ಟು ಅಧಿಕವಾಗುತ್ತಿದೆ. ಕೋವಿಡ್ ಪರಿಸ್ಥಿತಿ ಯಾವುದೇ ರೀತಿಯಲ್ಲಿ ಹದಗೆಡುವುದನ್ನು ತಡೆಯಲು ಎಚ್ಚರಿಕೆ ಹಾಗೂ ಪ್ರಯತ್ನವನ್ನು ಮುಂದುವರಿಸುವ ಅಗತ್ಯತೆ ಇದೆ ಎಂದು ಅವರು ಹೇಳಿದ್ದಾರೆ. 

‘‘ಒಮೈಕ್ರಾನ್ನ ಅನಿರೀಕ್ಷಿತ ಹಾಗೂ ತೀವ್ರ ಹರಡುವ ನಡವಳಿಕೆ, ಲಕ್ಷಣ ರಹಿತ ಪ್ರಕರಣಗಳ ಬಗ್ಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ಗಮನದಲ್ಲಿ ಇರಿಸಿಕೊಂಡು ಪರೀಕ್ಷೆ ತ್ವರಿತಗೊಳಿಸುವುದು ಸೋಂಕಿತ ವ್ಯಕ್ತಿಯು ವೈರಸ್ ಅನ್ನು ಇತರರಿಗೆ ಹರಡದಂತೆ ತಡೆಯಲು ನೆರವಾಗುತ್ತದೆ ’’ ಎಂದು ಅವರು ಹೇಳಿದ್ದಾರೆ. ಆತಂಕಕ್ಕೆ ಕಾರಣವಾಗಿರುವ ಪ್ರಕರಣಗಳ ಸಂಖ್ಯೆ ಹಾಗೂ ಪಾಸಿಟಿವಿಟಿ ದರ ಏರಿಕೆಯ ನಡುವೆ ಈ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೋವಿಡ್ ಪರೀಕ್ಷೆಯ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗುತ್ತಿರುವುದನ್ನು ಗಮನಿಸಲಾಗಿದೆ ಎಂದು ಅಹುಜಾ ಹೇಳಿದ್ದಾರೆ. ಪರೀಕ್ಷಾ ಸಾಧನಗಳು ಸಾಕಷ್ಟು ಲಭ್ಯವಿರುವ ಬಗ್ಗೆ ಪರಿಶೀಲನೆ ನಡೆಸುವಂತೆ, ಖಾತರಿ ನೀಡುವಂತೆ ಹಾಗೂ ಪರೀಕ್ಷಾ ಸೌಲಭ್ಯ ನಿಯಮಿತವಾಗಿ ಲಭ್ಯವಾಗಲು ಸೌಲಭ್ಯ ರೂಪಿಸುವಂತೆ ಅವರು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News