ಭದ್ರತಾಲೋಪ ಪ್ರಕರಣ: ಪಂಜಾಬ್‌ ಪೊಲೀಸರಿಗೆ ಸಮನ್ಸ್ ನೀಡಲು ಕೇಂದ್ರ ಸರ್ಕಾರ ಚಿಂತನೆ; ವರದಿ

Update: 2022-01-07 08:57 GMT

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು 15 ನಿಮಿಷ ಮೇಲ್ಸೇತುವೆಯಲ್ಲಿ ಸಿಲುಕಿಕೊಂಡ ಪ್ರಕರಣವನ್ನು ಕೇಂದ್ರ ಗಂಭೀರವಾಗಿ ಪರಿಗಣಿಸಿದೆ. ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ಘಟನೆಯನ್ನು ಪ್ರಧಾನಿ ಭದ್ರತೆಯಲ್ಲಿನ ಪ್ರಮುಖ ಲೋಪ ಎಂದು ಹೇಳಿಕೊಂಡಿದೆ. 

ಘಟನೆ ಸಂದರ್ಭ ಕರ್ತವ್ಯದಲ್ಲಿದ್ದ ಹಾಗೂ ಸಂಬಂಧಪಟ್ಟ ಪಂಜಾಬ್‌ ಪೊಲೀಸ್‌ ಅಧಿಕಾರಿಗಳ ವಿರುದ್ಧ ವಿಶೇಷ ರಕ್ಷಣಾ ಕಾಯ್ದೆ (SPG) ಅಡಿಯಲ್ಲಿ ಕ್ರಮ ತೆಗೆದುಕೊಳ್ಳಲು ಕೇಂದ್ರ ಚಿಂತಿಸುತ್ತಿದೆ ಎಂದು indianexpress.com ವರದಿ ಮಾಡಿದೆ. 

ಪ್ರಕರಣವನ್ನು ಪಂಜಾಬ್‌ ಸರ್ಕಾರ ಗಂಭೀರವಾಗಿ ಪರಿಗಣಿಸಿ ತನಿಖೆಗೆ ಉನ್ನತ ಸಮಿತಿಯೊಂದನ್ನು ರಚಿಸಿದಾಗ್ಯೂ, ಪಂಜಾಬ್‌ ಪೊಲೀಸ್‌ ಅಧಿಕಾರಿಗಳನ್ನು ಎಸ್‌ಪಿಜಿ ಕಾಯ್ದೆಯಡಿ ದಿಲ್ಲಿಗೆ ಬರುವಂತೆ ಸಮನ್ಸ್‌ ನೀಡಲು ಕೇಂದ್ರ ಬಯಸುತ್ತಿದೆ ಎಂದು ವರದಿ ಹೇಳಿದೆ. 

ಪಂಜಾಬಿನಲ್ಲಿ ನಡೆದ ಘಟನೆಯು ಎಸ್‌ಪಿಜಿ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದ್ದು, ರಾಜ್ಯ ಸರ್ಕಾರ ತನ್ನ ಶಿಷ್ಟಾಚಾರ ಪಾಲಿಸಲು ಸೋತಿದೆ. ಖಂಡಿತವಾಗಿಯೂ ಕ್ರಮ ಜರುಗಿಸಲಾಗುವುದು ಎಂದು ಕೇಂದ್ರದ ಮೂಲಗಳು ತಿಳಿಸಿರುವುದಾಗಿ ಎನ್‌ಡಿಟಿವಿ ತನ್ನ ವರದಿಯಲ್ಲಿ ಹೇಳಿದೆ. 
 
ಎಸ್‌ಪಿಜಿ ಕಾಯ್ದೆಯ 14ನೇ ವಿಧಿಯ ಪ್ರಕಾರ ಪ್ರಧಾನಮಂತ್ರಿ ಭೇಟಿ ವೇಳೆ ವಿಶೇಷ ರಕ್ಷಕ ಗುಂಪಿಗೆ ನೆರವು ನೀಡುವ ಕೆಲಸವನ್ನು ರಾಜ್ಯ ಸರ್ಕಾರವು ಮಾಡುತ್ತದೆ. ಆದರೆ, ಪಂಜಾಬ್‌ ಸರ್ಕಾರ ಇದನ್ನು ಮಾಡದೆ ಕರ್ತವ್ಯ ಲೋಪ ಎಸಗಿದೆ ಎಂದು ಮೂಲಗಳು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News