ಸಿಡಿಎಸ್ ಸೇವಾವಧಿ ವಿಸ್ತರಣೆಗೆ ಇನ್ನೂ ನಿರ್ಧರಿಸಿಲ್ಲ: ಪಾಕ್ ಪ್ರಧಾನಿ ಇಮ್ರಾನ್ ಖಾನ್‌

Update: 2022-01-07 15:53 GMT
ಪಾಕ್ ಪ್ರಧಾನಿ ಇಮ್ರಾನ್ ಖಾನ್‌ 

ಇಸ್ಲಮಾಬಾದ್, ಜ.7: ಪಾಕಿಸ್ತಾನದ ಸೇನಾ ಸಿಬಂದಿ ಮುಖ್ಯಸ್ಥ(ಸಿಡಿಎಸ್) ಜನರಲ್ ಖಮರ್ ಜಾವೆದ್ ಬಾಜ್ವಾ ಅವರ ಸೇವಾವಧಿ ವಿಸ್ತರಿಸುವ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಸಿಡಿಎಸ್ ಸೇವಾವಧಿ ವಿಸ್ತರಣೆಯ ವಿವಾದಾತ್ಮಕ ವಿಷಯದ ಕುರಿತ ಸುದ್ಧಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ‘ಈಗಿನ್ನೂ 2022 ಆರಂಭವಾಗಿದೆ. ನವೆಂಬರ್ ಬರಲು ಇನ್ನೂ ಬಹಳ ಸಮಯವಿದೆ. ಈಗಲೇ ಸಿಡಿಎಸ್ ಸೇವಾವಧಿ ವಿಸ್ತರಣೆ ವಿಷಯದ ಬಗ್ಗೆ ಯಾಕೆ ತಲೆಬಿಸಿ ಮಾಡಿಕೊಳ್ಳಬೇಕು’ ಎಂದರು. ಜನರಲ್ ಬಾಜ್ವಾ ಅವರ ಸೇವಾವಧಿ 2022ರ ನವೆಂಬರ್ 28ಕ್ಕೆ ಮುಕ್ತಾಯಗೊಳ್ಳುತ್ತದೆ.

ಇಮ್ರಾನ್ ಖಾನ್ ಅವರ ಆಪ್ತ ಎನಿಸಿಕೊಂಡಿರುವ ಜ ಬಾಜ್ವಾ ಸೇವಾವಧಿ 2019ರ ನವೆಂಬರ್ 29ಕ್ಕೆ ಮುಕ್ತಾಯವಾಗಿತ್ತು. ಆದರೆ ಸೇವಾವಧಿಯನ್ನು 3 ವರ್ಷ ವಿಸ್ತರಿಸಿ ಇಮ್ರಾನ್ ಖಾನ್ ಆದೇಶ ಜಾರಿಗೊಳಿಸಿದ್ದರು. ಈ ಮಧ್ಯೆ, ಸಿಡಿಎಸ್ ಸೇವಾವಧಿ ವಿಸ್ತರಣೆಗೆ ಸಂಬಂಧಿಸಿದ ಯಾವುದೇ ಕಾನೂನು ಇಲ್ಲದಿರುವುದರಿಂದ ಈ ಆದೇಶ ಅಸಿಂಧು ಎಂದು ಪಾಕ್ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಆದರೆ ಈ ಕುರಿತ ಕಾನೂನನ್ನು ಸಂಸತ್ತಿನಲ್ಲಿ ಅಂಗೀಕರಿಸುವುದಾಗಿ ಸರಕಾರ ವಾಗ್ದಾನ ನೀಡಿದ್ದ ಹಿನ್ನೆಲೆಯಲ್ಲಿ 6 ವಾರ ಕಾಲಾವಕಾಶ ನೀಡಲಾಗಿತ್ತು. ಬಳಿಕ ಪ್ರಮುಖ ವಿರೋಧ ಪಕ್ಷಗಳ ಬೆಂಬಲ ಪಡೆಯುವಲ್ಲಿ ಸಫಲವಾದ ಸರಕಾರ, ಮೂರೂ ಸೇನಾ ಪಡೆಗಳ ಮುಖ್ಯಸ್ಥರು ಹಾಗೂ ಸಿಡಿಎಸ್ ನಿವೃತ್ತಿ ವಯಸ್ಸನ್ನು 60ರಿಂದ 64ಕ್ಕೆ ಏರಿಸುವ ಕಾನೂನು ಜಾರಿಗೊಳಿಸಿತ್ತು.

ಸರಕಾರ ಉರುಳಿಸುವ ವಿಷಯದಲ್ಲಿ ಪಾಕಿಸ್ತಾನ್ ಮುಸ್ಲಿಮ್ ಲೀಗ್-ನವಾರ್ ಪಕ್ಷ ಮತ್ತು ಸೇನೆಯ ನಡುವಿನ ಸಂಭಾವ್ಯ ಒಪ್ಪಂದದ ಕುರಿತ ಪ್ರಶ್ನೆಗೆ ಉತ್ತರಿಸಿದ ಇಮ್ರಾನ್ ಖಾನ್ , ವೈಯಕ್ತಿಕವಾಗಿ ತಾನು ಯಾವುದೇ ರೀತಿಯ ಒತ್ತಡದಲ್ಲಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News