ಕಝಕಿಸ್ತಾನ: ಪ್ರತಿಭಟನಾಕಾರರನ್ನು ಗುಂಡಿಕ್ಕಿ ಕೊಲ್ಲಲು ಆದೇಶ
ಅಲ್ಮಾಟಿ, ಜ.7: ಕಝಕಿಸ್ತಾನದಲ್ಲಿ ಇತ್ತೀಚಿನ ದಿನಗಳಲ್ಲಿನ ಅಸಾಮಾನ್ಯ ಅಶಾಂತಿಯ ಬಳಿಕ ಇದೀಗ ದೇಶದಲ್ಲಿ ಸಾಂವಿಧಾನಿಕ ವ್ಯವಸ್ಥೆಯನ್ನು ಮರುಸ್ಥಾಪಿಸಲಾಗಿದೆ. ಮತ್ತಷ್ಟು ಗಲಭೆ ನಡೆದರೆ ಮುನ್ನೆಚ್ಚರಿಕೆ ನೀಡದೆ ಗುಂಡಿನ ದಾಳಿ ನಡೆಸುವಂತೆ ಭದ್ರತಾ ಪಡೆಗಳಿಗೆ ಆದೇಶಿಸಿರುವುದಾಗಿ ಕಝಕಿಸ್ತಾನ ಅಧ್ಯಕ್ಷ ಕಾಸಿಂ ಜೊಮರ್ಟ್ ಟೊಕಯೆವ್ ಹೇಳಿದ್ದಾರೆ.
ತೈಲ ಬೆಲೆ ಏರಿಕೆಯನ್ನು ವಿರೋಧಿಸಿ ಆರಂಭವಾದ ಪ್ರತಿಭಟನೆಯು ಭ್ರಷ್ಟಾಚಾರದ ವಿರುದ್ಧದ ಪ್ರತಿಭಟನೆಯಾಗಿ ಭುಗಿಲೆದ್ದಿತು. ಪ್ರತಿಭಟನಾಕಾರರ ಮತ್ತು ಭದ್ರತಾ ಪಡೆಗಳ ನಡುವಿನ ಹಿಂಸಾತ್ಮಕ ಘರ್ಷಣೆಯಲ್ಲಿ ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಯ ಹಲವರು ಮೃತಪಟ್ಟಿದ್ದರು.
20,000 ದರೋಡೆಗೋರರು ದೇಶದ ಅತೀ ದೊಡ್ಡ ನಗರ ಅಲ್ಮಾಟಿಯ ಮೇಲೆ ಆಕ್ರಮಣ ನಡೆಸಿ ಅದನ್ನು ನಾಶಗೊಳಿಸಲು ಸಂಕಲ್ಪಿಸಿದ್ದರು. ಭಯೋತ್ಪಾದಕರು ಆಸ್ತಿಗೆ ಹಾನಿ ಎಸಗುವುದನ್ನು ಮುಂದುವರಿಸಿದ್ದು ನಾಗರಿಕರ ವಿರುದ್ಧ ದಾಳಿ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಮುನ್ನೆಚ್ಚರಿಕೆ ನೀಡದೆ ಗುಂಡಿಕ್ಕಿ ಸಾಯಿಸುವಂತೆ ಆದೇಶಿಸಿದ್ದೇನೆ ಎಂದು ಟಿವಿ ವಾಹಿನಿಯಲ್ಲಿ ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಹೇಳಿದ್ದಾರೆ.
ಇದಕ್ಕೂ ಮುನ್ನ ಮಾಧ್ಯಮದವರಿಗೆ ಮಾಹಿತಿ ನೀಡಿದ್ದ ಕಝಕಿಸ್ತಾನದ ಆಂತರಿಕ ಇಲಾಖೆ, 26 ಸಶಸ್ತ್ರ ಕ್ರಿಮಿನಲ್‌ಗಳನ್ನು ಹತ್ಯೆ ಮಾಡಲಾಗಿದ್ದು 18 ಮಂದಿ ಗಾಯಗೊಂಡಿದ್ದಾರೆ. 3,000ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ . ದೇಶದಾದ್ಯಂತ ತಪಾಸಣೆಯನ್ನು ಬಿಗಿಗೊಳಿಸಲಾಗಿದ್ದು 70 ಚೆಕ್ ಪೋಸ್ಟ್ ಗಳು 24 ಗಂಟೆಯೂ ಕಾರ್ಯನಿರ್ವಹಿಸುತ್ತಿವೆ. ಗುರುವಾರದ ಹಿಂಸಾಚಾರದಲ್ಲಿ ಭದ್ರತಾ ಪಡೆಯ 18 ಯೋಧರು ಮೃತಪಟ್ಟಿದ್ದಾರೆ ಎಂದಿದೆ.
ಶುಕ್ರವಾರ ಬೆಳಿಗ್ಗೆ ಅಲ್ಮಾಟಿ ನಗರದ ಕೇಂದ್ರ ಪ್ರದೇಶದಲ್ಲಿ ಗುಂಡಿನ ಸದ್ದು ಕೇಳಿಸಿದೆ. ಮೃತಪಟ್ಟವರ ಸಂಖ್ಯೆ ಸರಕಾರ ಮಾಹಿತಿ ನೀಡಿದ್ದಕ್ಕಿಂತಲೂ ಹೆಚ್ಚಿರಬಹುದು. ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆ ಎಂದು ಸರಕಾರ ಹೇಳಿರುವ ಉಪಕ್ರಮ ದೇಶದ ಹಲವು ಪ್ರದೇಶಗಳಿಗೆ ವಿಸ್ತರಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.