ನಕಲಿ ಸಂಶೋಧನಾತ್ಮಕ ಜರ್ನಲ್‌ಗಳ ಹಾವಳಿ ಮತ್ತು ಪ್ರೋತ್ಸಾಹ

Update: 2022-01-07 19:30 GMT

ಸಂಶೋಧನೆಯ ಪ್ರಮುಖ ಮತ್ತು ಕಡೆಯ ಹಂತ ಸಂಶೋಧನೆಯ ಫಲಿತಾಂಶಗಳನ್ನು ಪ್ರಸಾರ ಪಡಿಸಲು ಇರುವ ಜರ್ನಲ್ (ನಿಯತಕಾಲಿಕೆ)ಗಳಲ್ಲಿ ಸಂಶೋಧನಾ ಲೇಖನಗಳನ್ನು ಪ್ರಕಟಿಸುವುದು. ಆಸಕ್ತ ಮತ್ತು ಅಭ್ಯಾಸನಿರತ ಸಂಶೋಧಕರು ತಮ್ಮ ಕ್ಷೇತ್ರಗಳಲ್ಲಿ ಪ್ರಕಟವಾಗುವ ಲೇಖನಗಳನ್ನು ಓದುವ ಮತ್ತು ಅವುಗಳನ್ನು ಪರಾಮರ್ಶಿಸುವ ಮೂಲಕ ಹೊಸ ಹೊಸ ಒಳನೋಟಗಳನ್ನು ಪಡೆಯುವರು ಜೊತೆಗೆ ತಮ್ಮ ಸಂಶೋಧನೆಗಳನ್ನು ಮುಂದುವರಿಸಲು ಹೊಸ ಕ್ಷೇತ್ರಗಳ ಮತ್ತು ವಿಷಯಗಳ ಮೇಲೆ ಸಂಶೋಧನೆ ಮಾಡಲು ಜರ್ನಲ್‌ಗಳಲ್ಲಿ ಪ್ರಕಟವಾಗುವ ಲೇಖನಗಳು ಪ್ರಮುಖ ಪಾತ್ರವಹಿಸುವವು. ಜರ್ನಲ್‌ಗಳಲ್ಲಿ ಸಂಶೋಧನಾ ಲೇಖನಗಳು ಪ್ರಕಟವಾಗುವ ಪೂರ್ವ ಲೇಖನದ ಸಂಶೋಧನಾ ಉದ್ದೇಶಗಳು, ಸಂಶೋಧನೆಗೆ ಅನುಸರಿಸಿದ ಸಂಶೋಧನಾ ವಿಧಾನ, ದತ್ತಾಂಶಗಳ ಸತ್ಯಾಸತ್ಯತೆ ಮತ್ತು ಫಲಿತಾಂಶಗಳು ಸಂಶೋಧನಾ ಉದ್ದೇಶಗಳಿಗೆ ಅನುಗುಣವಾಗಿ ವಿಶ್ಲೇಷಿಸಲ್ಪಟ್ಟಿದೆಯೇ ಎನ್ನುವುದನ್ನು ವಿಷಯ ತಜ್ಞರು ವಿಮರ್ಶಿಸಿ ಸಂಶೋಧನಾ ಲೇಖನ ಪ್ರಕಟನೆಗೆ ಅರ್ಹವಾಗಿದೆಯೇ ಇಲ್ಲ ಮತ್ತಷ್ಟು ಬದಲಾವಣೆ ಮಾಡುವ ಅವಶ್ಯಕತೆ ಇದೆಯೇ ಅಥವಾ ಲೇಖನ ಪ್ರಕಟಿಸಲು ಯೋಗ್ಯವಾಗಿಲ್ಲ ಎನ್ನುವ ಕುರಿತಾಗಿ ಸವಿವರವಾದ ವರದಿಯನ್ನು ಜರ್ನಲ್‌ಗಳ ಸಂಪಾದಕರಿಗೆ ನೀಡುವರು. ತಜ್ಞರ ವರದಿ ಆಧಾರದ ಮೇಲೆ ಸಂಶೋಧನಾ ಲೇಖನಗಳನ್ನು ಜರ್ನಲ್ ಗಳಲ್ಲಿ ಪ್ರಕಟಿಸಲು ಕ್ರಮವಹಿಸಲಾಗುವುದು. ಇದನ್ನು ಪೀರ್ ರಿವ್ಯೆ (Peer Review) ಎಂದು ಕರೆಯಲಾಗುವುದು.

ಸಂಶೋಧನಾ ಲೇಖನಗಳು ಶೈಕ್ಷಣಿಕ ವಲಯದಲ್ಲಿ, ತಂತ್ರಜ್ಞಾನಗಳ ಅಭಿವೃದ್ಧಿಯಲ್ಲಿ ಮತ್ತು ನೀತಿ ನಿಯಮ ನಿರೂಪಣೆಯಲ್ಲಿ ಒಟ್ಟಾರೆ ದೇಶದ ಅಭಿವೃದ್ಧ್ದಿಯಲ್ಲಿ ಪ್ರಮುಖ ಪಾತ್ರ ವಹಿಸುವವು. ಇವುಗಳಿಗೆ ಮುಖ್ಯ ಕಾರಣ ಯಾವುದೇ ಸಂಶೋಧನಾ ಲೇಖನಗಳನ್ನು ಪ್ರಕಟಿಸುವ ಮುನ್ನ ಅದು ವಿಷಯ ತಜ್ಞರಿಂದ ಪರಿಶೀಲಿಸಲ್ಪಟ್ಟಿರುತ್ತದೆ ಎನ್ನುವುದು. ಹೀಗಾಗಿ ಪೀರ್ ರಿವ್ಯೆ ಗುಣಮಟ್ಟದ ಸಂಶೋಧನಾ ಲೇಖನಗಳ ಪ್ರಕಟನೆಯಲ್ಲಿ ಪ್ರಮುಖ ಪಾತ್ರವಹಿಸುವುದು. ಸಂಶೋಧನಾತ್ಮಕ ಜರ್ನಲ್‌ಗಳ ಗುಣಮಟ್ಟವನ್ನು ಅವುಗಳು ಅನುಸರಿಸುವ ಕಟ್ಟುನಿಟ್ಟಿನ ಪೀರ್ ರಿವ್ಯೆ, ವಿಷಯ ತಜ್ಞರಿಂದ ಕೂಡಿದ ಸಂಪಾದಕೀಯ ಮಂಡಳಿ, ಜಾಗತಿಕ ಬಿಬಿಲಿಯೊಗ್ರಾಫಿಕ್ ದತ್ತಾಂಶಗಳಾದ ವೆಬ್ ಆಫ್ ಸೈನ್ಸ್ ಮತ್ತು ಸ್ಕೋಪಸ್‌ಗಳಲ್ಲಿ ಹೆಸರಿಸಿರುವುದು, ಕಮಿಟಿ ಆನ್ ಪಬ್ಲಿಕೇಶನ್ ಎಥಿಕ್ಸ್‌ನಂತಹ ಸಂಸ್ಥೆಗಳ ಸದಸ್ಯರಾಗಿರುವುದು ಮತ್ತು ಶೈಕ್ಷಣಿಕ ಹಾಗೂ ಸಂಶೋಧನಾ ವಲಯದಲ್ಲಿನ ಜನಪ್ರಿಯತೆ ಮುಂತಾದ ಅಂಶಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಅದರೆ ಇತ್ತೀಚೆಗೆ ಅಂದರೆ ಬಹುಮುಖ್ಯವಾಗಿ ಭಾರತದಲ್ಲಿ 2010ರ ನಂತರ ವಿಶ್ವವಿದ್ಯಾನಿಲಯಗಳಲ್ಲಿ, ಸಂಶೋಧನಾ ಸಂಸ್ಥೆಗಳಲ್ಲಿ ಮತ್ತು ಕಾಲೇಜುಗಳಲ್ಲಿ ವೃತ್ತಿ ಪದೋನ್ನತಿಗೆ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) ಎಪಿಐ (ಆಕಾಡಿಮೆಕ್ ಫರ್ಪಾಮೆನ್ಸ್ ಇಂಡಿಕೇಟರ್) ಆಧಾರಿತ ಅಂಕಗಳನ್ನು ಪರಿಗಣಿಸುವ ಹೊಸ ಮಾನದಂಡಗಳನ್ನು ಜಾರಿಗೊಳಿಸಿದ ನಂತರ ಸಂಶೋಧನಾ ಪ್ರಕಟನೆಗಳನ್ನು ಕಡ್ಡಾಯಗೊಳಿಸಿ ಅವುಗಳಿಗೆ ನಿರ್ದಿಷ್ಟ ಅಂಕಗಳನ್ನು ನಿಗದಿಗೊಳಿಸಿದ ನಂತರ ಅದರಲ್ಲೂ ಐಎಸ್‌ಎಸ್‌ಎನ್ ಸಂಖ್ಯೆ ಮತ್ತು ಐಎಸ್‌ಬಿಎನ್ ಸಂಖ್ಯೆ ಹೊಂದಿರುವ ಜರ್ನಲ್ ಮತ್ತು ಪುಸ್ತಕಗಳಲ್ಲಿ ಪ್ರಕಟಿಸಿದರೆ ಮಾತ್ರ ಇವುಗಳನ್ನು ಪರಿಗಣಿಸಲಾಗುವುದು ಎನ್ನುವುದನ್ನು ಕಡ್ಡಾಯ ಮಾಡಿದ ನಂತರ ಭಾರತದಲ್ಲಿ ದೊಡ್ಡ ಮಟ್ಟದ ನಕಲಿ ಸಂಶೋಧನಾತ್ಮಕ ಜರ್ನಲ್‌ಗಳ ಹಾವಳಿ ವಿಪರೀತವಾಗಿ ಇವುಗಳನ್ನು ಪ್ರಕಟಿಸುವ ಪ್ರಕಾಶಕರು ಮತ್ತು ಜರ್ನಲ್‌ಗಳು ನಾಯಿಕೊಡೆಗಳಂತೆ ತಲೆಎತ್ತಿದ್ದವು. ಜಗತ್ತಿನಾದ್ಯಂತ ಕೂಡ ಶೈಕ್ಷಣಿಕ ವಲಯದಲ್ಲಿ ‘‘ಪ್ರಕಟಿಸು ಅಥವಾ ಅಳಿದು ಹೋಗು’’ ಸಂಸ್ಕೃತಿಯಿಂದಾಗಿ ತಕ್ಷಣ ಸಂಶೋಧನಾ ಲೇಖನಗಳನ್ನು ಪ್ರಕಟಿಸಲು ನಕಲಿ ಜರ್ನಲ್‌ಗಳನ್ನು ಅನೇಕರು ಆಯ್ದುಕೊಂಡಿರುವ ಉದಾಹರಣೆಗಳಿವೆ. ಜೊತೆಗೆ ಸಂಶೋಧನಾ ಲೇಖನಗಳನ್ನು ವೃತ್ತಿ ಪದೋನ್ನತಿಗೆ ಕಡ್ಡಾಯಗೊಳಿಸಿದ ನಂತರ ಅನೇಕ ಪ್ರಕಾಶಕರು ತಲೆಯೆತ್ತಿ ಅನೇಕ ನಕಲಿ ಸಂಶೋಧನಾತ್ಮಕ ಜರ್ನಲ್‌ಗಳನ್ನು ಪ್ರಾರಂಭಿಸಿ ವಿಶ್ವವಿದ್ಯಾನಿಲಯಗಳ ಮತ್ತು ಕಾಲೇಜುಗಳ ಅಧ್ಯಾಪಕರಗಳನ್ನು ಇಮೇಲ್‌ಗಳ ಮೂಲಕ ಸಂಪರ್ಕಿಸಿ ಇಂತಿಷ್ಟು ಹಣ ನೀಡಿದರೆ ತಕ್ಷಣ ಸಂಶೋಧನಾ ಲೇಖನಗಳನ್ನು ಪ್ರಕಟಿಸುವ ಆಮಿಷ ತೋರಿಸಿ ಅನೇಕರನ್ನು ತಮ್ಮತ್ತ ಸೆಳೆದಿದ್ದವು.

 ಮುಖ್ಯವಾಗಿ ಐಎಸ್‌ಎಸ್‌ಎನ್ ಮತ್ತು ಐಎಸ್ ಬಿಎನ್ ಸಂಖ್ಯೆ, ಜರ್ನಲ್‌ಗಳ ಗುಣಮಟ್ಟವನ್ನು ನಿರ್ಧರಿಸುವ ಮಾನದಂಡಗಳಲ್ಲ ಅವುಗಳು ಕೇವಲ ಒಂದು ನಿರ್ದಿಷ್ಟ ಜರ್ನಲ್ ಅಥವಾ ಪುಸ್ತಕವನ್ನು ಗುರುತಿಸಲು ಮತ್ತು ಒಂದು ದೇಶದಲ್ಲಿ ಪ್ರಕಟವಾಗುವ ಜರ್ನಲ್ ಗಳು ಮತ್ತು ಪುಸ್ತಕಗಳ ಸಂಖ್ಯೆಗಳನ್ನು ದಾಖಲು ಮಾಡಲು ಬಳಸುವ ವಿಧಾನವಷ್ಟೆ. ಅದರೆ ಯುಜಿಸಿ ಯಾವ ಆಧಾರದ ಮೇಲೆ ಇದನ್ನು 2010ರಲ್ಲಿ ಜರ್ನಲ್‌ಗಳ ಮತ್ತು ಪುಸ್ತಕಗಳ ಗುಣಮಟ್ಟದ ಮಾನದಂಡವಾಗಿ ಪರಿಗಣಿಸಿತು ಎನ್ನುವುದು ಇಂದಿಗೂ ಯಕ್ಷ ಪ್ರಶ್ನೆಯಾಗಿದೆ.

2010ರಲ್ಲಿ ಅಮೆರಿಕದ ಕೊಲರಾಡೋ ವಿಶ್ವವಿದ್ಯಾನಿಲಯದ ಗ್ರಂಥಪಾಲಕರಾದ ಜೆಫ್ರಿ ಬೆಲ್‌ರವರು 2010ರಲ್ಲಿ ಬಿಡುಗಡೆ ಮಾಡಿದ ‘ನಕಲಿ ಜರ್ನಲ್‌ಗಳ ಪ್ರಕಾಶಕರ ಪಟ್ಟಿ’ ಜಾಗತಿಕ ಸಂಶೋಧನಾ ವಲಯಕ್ಕೆ ನಕಲಿ ಜರ್ನಲ್‌ಗಳು ದೊಡ್ಡ ಮಟ್ಟದಲ್ಲಿ ಅಸ್ತಿತ್ವದಲ್ಲಿರುವುದನ್ನು ಪರಿಚಯಿಸಿತು. ನಂತರ ಇದು ‘ಬೆಲ್ ಲಿಸ್ಟ್’ ಎಂದು ಜನಪ್ರಿಯವಾಯಿತು. ಬೆಲ್ ಲಿಸ್ಟ್ ಪ್ರಕಾರ ಕಳಪೆ ಗುಣಮಟ್ಟದ ಸಂಶೋಧನಾ ಲೇಖನಗಳನ್ನು ಹಣಕ್ಕಾಗಿ ಪ್ರಕಟಿಸುವ ನಕಲಿ ಜರ್ನಲ್‌ಗಳು ಮತ್ತು ಪ್ರಕಾಶಕರು ಹೆಚ್ಚು ಇರುವ ದೇಶಗಳಲ್ಲಿ ಭಾರತ ಕೂಡ ಒಂದೆಂದು ತಿಳಿದುಬಂದಿತು.

2017ರಲ್ಲಿ ಪ್ರತಿಷ್ಠಿತ ನೇಚರ್ ಜರ್ನಲ್‌ನಲ್ಲಿ ಪ್ರಕಟವಾದ ‘‘ಜನರು, ಪ್ರಾಣಿಗಳು ಮತ್ತು ಹಣದ ಈ ವ್ಯರ್ಥವನ್ನು ನಿಲ್ಲಿಸಿ’’ ಲೇಖನದಲ್ಲಿ ವಿಶ್ವದಾದ್ಯಂತ ನಕಲಿ ಜರ್ನಲ್‌ಗಳಲ್ಲಿ ಪ್ರಕಟವಾದ ಅತಿ ಹೆಚ್ಚು ಲೇಖನಗಳ ಲೇಖಕರು ಭಾರತದವರು ಎನ್ನುವುದನ್ನು ನಿಖರ ದಾಖಲೆಗಳ ಮೂಲಕ ಬೆಳಕಿಗೆ ತಂದಿತು. ಈ ಲೇಖನ ಪ್ರಕಟವಾದ ನಂತರ ಅನೇಕ ದೇಶಗಳು ಇಂತಹ ನಕಲಿ ಜರ್ನಲ್‌ಗಳಲ್ಲಿ ಪ್ರಕಟಿಸುವುದನ್ನು ತಪ್ಪಿಸಲು ಅನೇಕ ಕ್ರಮಕೈಗೊಂಡವು. ಉದಾಹರಣೆಗೆ ಇಂತಹ ಪ್ರಕಾಶಕರನ್ನು ಕಪ್ಪು ಪಟ್ಟಿಗೆ ಸೇರಿಸುವುದು, ಇಂತಹ ಜರ್ನಲ್‌ಗಳಲ್ಲಿ ಪ್ರಕಟವಾದ ಲೇಖನಗಳನ್ನು ಪರಿಗಣಿಸದಿರುವುದು ಮತ್ತು ವಿಶ್ವವಿದ್ಯಾನಿಲಯದ ಅಧ್ಯಾಪಕರಿಗೆ ತಮ್ಮ ಸಂಶೋಧನಾ ಲೇಖನಗಳನ್ನು ಪ್ರಕಟಿಸಲು ಯೋಗ್ಯ ಜರ್ನಲ್‌ಗಳನ್ನು ಆಯ್ಕೆ ಮಾಡುವುದು ಹೇಗೆ ಎಂದು ತರಬೇತಿ ನೀಡುವುದು, ಇತ್ಯಾದಿ. ಭಾರತದಲ್ಲಿ ಕೂಡ ಈ ಬಗ್ಗೆ ಅನೇಕ ಚರ್ಚೆ ನಡೆದು 2017ರಲ್ಲಿ ಯುಜಿಸಿ ಇಂತಹ ನಕಲಿ ಜರ್ನಲ್‌ಗಳ ಹಾವಳಿಯನ್ನು ತಡೆಗಟ್ಟಲು, ‘ಯುಜಿಸಿ ಅನುಮೋದಿತ ಜರ್ನಲ್‌ಗಳ ಪಟ್ಟಿಯನ್ನು’ ಬಿಡುಗಡೆಗೊಳಿಸಿ ಈ ಪಟ್ಟಿಯಲ್ಲಿರುವ ಜರ್ನಲ್‌ಗಳಲ್ಲಿ ಪ್ರಕಟವಾದ ಸಂಶೋಧನಾ ಲೇಖನಗಳನ್ನು ಮಾತ್ರ ಎಪಿಐ ಆಧಾರಿತ ವೃತ್ತಿ ಪದೋನ್ನತಿಗೆ ಪರಿಗಣಿಸಲಾಗುವುದು ಎಂದು ನಿಯಮ ರೂಪಿಸಿತು. ಅದರೆ ಈ ಅನುಮೋದಿತ ಪಟ್ಟಿಯಲ್ಲಿ ಅನೇಕ ನಕಲಿ ಜರ್ನಲ್‌ಗಳು ಸೇರಿರುವುದು ಪತ್ತೆ ಹಚ್ಚಲಾಗಿ ಯುಜಿಸಿ ನವೆಂಬರ್ 2018ರಲ್ಲಿ ಈ ಅನುಮೋದಿತ ಪಟ್ಟಿಯನ್ನು ವಾಪಸ್ ಪಡೆದು ‘ಯುಜಿಸಿ-ಕೇರ್ ಲಿಸ್ಟ್ ಆಫ್ ಕ್ವಾಲಿಟಿ ಜರ್ನಲ್’ ಎನ್ನುವ ಹೊಸ ಪಟ್ಟಿಯನ್ನು ಬಿಡುಗಡೆ ಮಾಡಿತು. 2018 ನವೆಂಬರ್‌ನಿಂದ ‘‘ಯುಜಿಸಿ ಕೇರ್ ಲಿಸ್ಟ್’’ ಎಂದು ಅಸ್ತಿತ್ವದಲ್ಲಿದೆ. ಯಾವುದೇ ವಿಶ್ವವಿದ್ಯಾನಿಲಯದ, ಕಾಲೇಜುಗಳ ಮತ್ತು ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನೇಮಕಾತಿಗೆ ಮತ್ತು ವೃತ್ತಿ ಪದೋನ್ನತಿಗೆ ಸಂಬಂಧಿಸಿದಂತೆ ‘ಯುಜಿಸಿ-ಕೇರ್ ಲಿಸ್ಟ್’ನಲ್ಲಿ ನಮೂದಾಗಿರುವ ಜರ್ನಲ್‌ಗಳಲ್ಲಿ ಪ್ರಕಟಿಸಿರುವ ಸಂಶೋಧನಾ ಲೇಖನಗಳನ್ನು ಮಾತ್ರ ಪರಿಗಣಿಸುವ ನಿಯಮ ಜಾರಿಗೊಳಿಸಿದೆ.

ಯುಜಿಸಿಯ 2018ರ ನೇಮಕಾತಿಯ ನಿಯಮಾವಳಿಯಲ್ಲಿ ಕೂಡ ಪೀರ್ ರಿವ್ಯೆ ಅಥವಾ ಯುಜಿಸಿ-ಕೇರ್ ಲಿಸ್ಟ್ ಒಳಗೊಂಡಿರುವ ಜರ್ನಲ್‌ಗಳಲ್ಲಿ ಪ್ರಕಟವಾದ ಲೇಖನಗಳನ್ನು ಮಾತ್ರ ನೇಮಕಾತಿ ಅಥವಾ ಪದೋನ್ನತಿಗೆ ಪರಿಗಣಿಸಲು ನಿಯಮ ರೂಪಿಸಲಾಗಿದೆ. ಇತ್ತೀಚೆಗೆ ಕಾಲೇಜು ಶಿಕ್ಷಣ ಇಲಾಖೆ ಮೊದಲ ಬಾರಿಗೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ಪ್ರಾಧ್ಯಾಪಕರಿಗೆ ಪ್ರಾಧ್ಯಾಪಕರ ಹುದ್ದೆಗೆ ಪದೋನ್ನತಿ ನೀಡಲು ಅರ್ಹ ಸಹಾಯಕ ಪ್ರಾಧ್ಯಾಪಕರಿಂದ ಅರ್ಜಿ ಆಹ್ವಾನಿಸಿದ್ದು ಜೊತೆಗೆ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಹಾಯಕ ಪ್ರಾಧ್ಯಾಪಕರಿಗೆ ವಿವಿಧ ಹಂತದಲ್ಲಿ ಪದೋನ್ನತಿ ನೀಡಲು ಚೆಕ್ ಲಿಸ್ಟ್ ಬಿಡುಗಡೆ ಮಾಡಿದೆ. ಈ ಚೆಕ್ ಲಿಸ್ಟ್ ಪ್ರಕಾರ ಸಹಾಯಕ-ಪ್ರಾಧ್ಯಾಪಕರ ಹುದ್ದೆಗೆ ಐಎಸ್‌ಎಸ್‌ಎನ್ ಸಂಖ್ಯೆ ಹೊಂದಿರುವ ಜರ್ನಲ್‌ಗಳಲ್ಲಿ ಮೂರು ಸಂಶೋಧನಾ ಲೇಖನಗಳನ್ನು ಪ್ರಕಟಿಸಿರುವುದನ್ನು ಕಡ್ಡಾಯಗೊಳಿಸಿದೆ. ಹಾಗೆಯೇ ಪ್ರಾಧ್ಯಾಪಕರ ಹುದ್ದೆಗೆ 10 ಸಂಶೋಧನಾ ಲೇಖನಗಳನ್ನು ಕಡ್ಡಾಯಗೊಳಿಸಿದೆ. ಯುಜಿಸಿ ಕಡ್ಡಾಯವಾಗಿ ಯುಜಿಸಿ ಕೇರ್ ಲಿಸ್ಟ್ ಒಳಗೊಂಡಿರುವ ಜರ್ನಲ್‌ಗಳಲ್ಲಿ ಪ್ರಕಟಿಸಿರುವ ಸಂಶೋಧನಾ ಲೇಖನಗಳನ್ನು ಮಾತ್ರ ನೇಮಕಾತಿಗೆ ಮತ್ತು ವೃತ್ತಿ ಪದೋನ್ನತಿಗೆ ಪರಿಗಣಿಸಲು ಸ್ಪಷ್ಟ ನಿಯಮ ರೂಪಿಸಿರುವಾಗ ಇದನ್ನು ಉಲ್ಲಂಘಿಸಿ ಕಾಲೇಜು ಶಿಕ್ಷಣ ಇಲಾಖೆ ಏಕೆ ಕೇವಲ ಐಎಸ್‌ಎಸ್‌ಎನ್ ಮತ್ತು ಐಎಸ್‌ಬಿಎನ್ ಸಂಖ್ಯೆ ಹೊಂದಿರುವ ಜರ್ನಲ್‌ಗಳಲ್ಲಿ ಪ್ರಕಟಿಸಿರುವ ಲೇಖನಗಳನ್ನು ಪರಿಗಣಿಸುತ್ತಿದೆ?.

 ಐಎಸ್‌ಎಸ್‌ಎನ್ ಮತ್ತು ಐಎಸ್‌ಬಿಎನ್ ಸಂಖ್ಯೆ ಜರ್ನಲ್ ಗಳ ಗುಣಮಟ್ಟವನ್ನು ನಿರ್ಧರಿಸುವ ಮಾನದಂಡವಲ್ಲ, ಈ ಮಾನದಂಡ ಅನುಸರಿಸಿದರೆ ಯುಜಿಸಿಯ 2018ರ ನಿಯಮದ ಉಲ್ಲಂಘನೆಯಾಗುವುದಲ್ಲದೆ ನಕಲಿ ಜರ್ನಲ್‌ಗಳಿಗೆ ಮತ್ತು ಕಳಪೆ ಸಂಶೋಧನಾ ಲೇಖನಗಳ ಪ್ರಕಟನೆೆಗೆ ಕಾಲೇಜು ಶಿಕ್ಷಣ ಇಲಾಖೆಯೇ ಪ್ರೋತ್ಸಾಹ ಕೊಟ್ಟಂತಾಗುತ್ತದೆ. ಈಗಾಗಲೇ ನಕಲಿ ಜರ್ನಲ್‌ಗಳ ತೀವ್ರ ಹಾವಳಿಯಿಂದ ಭಾರತ ಜಾಗತಿಕ ಸಂಶೋಧನಾ ಕ್ಷೇತ್ರದಲ್ಲಿ ಮಂಕಾಗಿದೆ. ತಕ್ಷಣ ಕಾಲೇಜು ಶಿಕ್ಷಣ ಇಲಾಖೆ ನಕಲಿ ಜರ್ನಲ್‌ಗಳಿಗೆ ಪ್ರೋತ್ಸಾಹ ನೀಡದೆ, ಉತ್ತಮ ಸಂಶೋಧನಾ ವಾತಾವರಣವನ್ನು ಕಾಲೇಜುಗಳಲ್ಲಿ ರೂಪಿಸುವ ಮೂಲಕ ಗುಣಮಟ್ಟದ ಸಂಶೋಧನೆಗೆ ಪ್ರೋತ್ಸಾಹ ನೀಡುವಂತಾಗಬೇಕು. ಜೊತೆಗೆ ಕಾಲೇಜು ಶಿಕ್ಷಣ ಇಲಾಖೆ ವೃತ್ತಿ ಪದೋನ್ನತಿಗೆ ಸಂಬಂಧಿಸಿದಂತೆ ಒಂದು ರಾಜ್ಯ ಮಟ್ಟದ ಸಮಿತಿಯನ್ನು ರೂಪಿಸಿ ಅದಕ್ಕೆ ವೃತ್ತಿ ಪದೋನ್ನತಿಗೆ ಸಂಬಂಧಿಸಿದ ಹೊಣೆಗಾರಿಕೆಯನ್ನು ನೀಡುವ ಅಗತ್ಯತೆ ತೀರ ಇದೆ.

Writer - ವಸಂತ ರಾಜು ಎನ್. ತಲಕಾಡು

contributor

Editor - ವಸಂತ ರಾಜು ಎನ್. ತಲಕಾಡು

contributor

Similar News