ಅಕಾಲಿಕ ಮಳೆಗೆ ಬೆಚ್ಚಿದ ರಾಷ್ಟ್ರ ರಾಜಧಾನಿ
ಹೊಸದಿಲ್ಲಿ: ದೆಹಲಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಶನಿವಾರ ಮುಂಜಾನೆ ವ್ಯಾಪಕವಾಗಿ ಗುಡುಗು ಸಹಿತ ಮಳೆಯಾಗಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಆತಂಕ ಸೃಷ್ಟಿಸಿದೆ.
"ಇಡೀ ದೆಹಲಿ ಮತ್ತು ದೆಹಲಿ ಎನ್‌ಸಿಆರ್ ಪ್ರದೇಶದಲ್ಲಿ ಅಂದರೆ ಗುರುಗ್ರಾಮ, ಫರೀದಾಬಾದ್, ಮನೇಸರ್, ಬಲ್ಲಭಗೃಹ್, ಸುತ್ತಮುತ್ತಲ ಪ್ರದೇಶಗಳಾದ ಕರ್ನಾಲ್, ಪಾಣಿಪತ್, ಗನ್ನೂರು, ಸೋನಿಪತ್, ಖಾರ್ಕೋಡ, ಝಜ್ಜಾರ್. ಸೊಹಾನ, ಪಲ್ವಾಲ್, ಹರ್ಯಾಣದ ನುಹ್, ಉತ್ತರ ಪ್ರದೇಶದ ಬರೂತ್, ಭಾಗ್‌ಪಥ್ ಮತ್ತು ರಾಜಸ್ಥಾನದ ತಿಝಾರಾದಲ್ಲಿ ಗುಡುಗು ಸಹಿತ ತೀವ್ರ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಟ್ವೀಟ್ ಮಾಡಿದೆ.
ದೆಹಲಿಯ ವಿವಿಧ ಭಾಗಗಳಲ್ಲಿ ಮಳೆ ಅಬ್ಬರಿಸಿದ್ದು, ತಾಪಮಾನ ಮತ್ತಷ್ಟು ಕುಸಿದಿದೆ. ನಿರಾಶ್ರಿತರು ರಾತ್ರಿ ತಂಗುದಾಣಗಳ ಮೊರೆ ಹೋಗಬೇಕಾಯಿತು. ಜನವರಿ 9ರವರೆಗೂ ಮೋಡ ಮುಸುಕಿದ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಮುನ್ಸೂಚನಾ ಇಲಾಖೆ ಅಂದಾಜಿಸಿದೆ.
ಏತನ್ಮಧ್ಯೆ ರಾಷ್ಟ್ರ ರಾಜಧಾನಿಯಲ್ಲಿ ಲಘು ಮಳೆಯಾದ ಬೆನ್ನಲ್ಲೇ ಶುಕ್ರವಾರ ವಾಯು ಗುಣಮಟ್ಟ ಕಳಪೆಯಿಂದ ತೀವ್ರ ಕಳಪೆ ವರ್ಗಕ್ಕೆ ಕುಸಿದಿದೆ. ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 273ರಲ್ಲಿದೆ ಎಂದು ಸಿಸ್ಟಮ್ ಆಫ್ ಏರ್ ಕ್ವಾಲಿಟಿ ಆ್ಯಂಡ್ ವೆದರ್ ಫೋರ್ ಕಾಸ್ಟಿಂಗ್ ರೀಸರ್ಚ್ (ಎಸ್‌ಎಎಫ್‌ಎಆರ್) ಹೇಳಿದೆ.