ನಿಮ್ಮ ಮೌನವು ದ್ವೇಷ ತುಂಬಿದ ಧ್ವನಿಗಳನ್ನು ಉತ್ತೇಜಿಸುತ್ತವೆ: ಪ್ರಧಾನಿಗೆ ಐಐಎಮ್‌ ವಿದ್ಯಾರ್ಥಿಗಳು, ಶಿಕ್ಷಕರ ಪತ್ರ

Update: 2022-01-08 18:19 GMT

ಹೊಸದಿಲ್ಲಿ,ಜ.8: ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯ ಬಗ್ಗೆ ಮಾತನಾಡುವಂತೆ ಕೋರಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ)ನ ವಿದ್ಯಾರ್ಥಿಗಳು ಮತ್ತು ಬೋಧಕರ ಗುಂಪೊಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರವೊಂದನ್ನು ಬರೆದಿದೆ.

‘ಪ್ರಧಾನ ಮಂತ್ರಿಗಳೇ,ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯ ಬಗ್ಗೆ ನಿಮ್ಮ ವೌನವು ನಮ್ಮ ದೇಶದ ಬಹುಸಾಂಸ್ಕೃತಿಕ ಸ್ವರೂಪವನ್ನು ಗೌರವಿಸುವ ನಮಗೆಲ್ಲರಿಗೆ ನಿರಾಶೆಯನ್ನುಂಟು ಮಾಡಿದೆ. ನಿಮ್ಮ ಮೌನವು ದ್ವೇಷ ತುಂಬಿದ ಧ್ವನಿಗಳಿಗೆ ಇನ್ನಷ್ಟು ಧೈರ್ಯವನ್ನು ನೀಡುತ್ತದೆ ಹಾಗೂ ನಮ್ಮ ದೇಶದ ಏಕತೆ ಮತ್ತು ಸಮಗ್ರತೆಗೆ ಬೆದರಿಕೆಯನ್ನು ಒಡ್ಡುತ್ತದೆ ಎಂದು ಪತ್ರದಲ್ಲಿ ಹೇಳಲಾಗಿದೆ.

ಐಐಎಂ-ಅಹ್ಮದಾಬಾದ್ ಮತ್ತು ಐಐಎಂ-ಬೆಂಗಳೂರಿನ 13 ಬೋಧಕರು ಸೇರಿದಂತೆ 183 ಜನರು ಸಹಿ ಹಾಕಿರುವ ಪತ್ರದಲ್ಲಿ ಧರ್ಮ ಮತ್ತು ಜಾತಿಗಳ ಗುರುತುಗಳ ಆಧಾರದಲ್ಲಿ ಸಮುದಾಯಗಳ ವಿರುದ್ಧ ಹಿಂಸಾಚಾರಕ್ಕೆ ಕರೆಗಳು ಸ್ವೀಕಾರಾರ್ಹವಲ್ಲ ಎಂದು ತಿಳಿಸಲಾಗಿದೆ.

ಅಸಹಿಷ್ಣುತೆಯ ಹಲವಾರು ಘಟನೆಗಳು ದೇಶದಲ್ಲಿ ವರದಿಯಾಗಿದ್ದು,ಮುಸ್ಲಿಮರ ವಿರುದ್ಧ ಹಿಂಸಾಚಾರಕ್ಕೆ ಕರೆ ನೀಡಿದ್ದ ಪ್ರಚೋದನಾತ್ಮಕ ಭಾಷಣಗಳು,ಕ್ರಿಸ್ಮಸ್ ಆಚರಣೆಗೆ ವ್ಯತ್ಯಯಗಳು ಮತ್ತು ಕ್ರೈಸ್ತರ ಮೇಲಿನ ದಾಳಿಗಳು ಇತ್ತೀಚಿನ ಘಟನೆಗಳಾಗಿವೆ.

‘ನಮ್ಮ ದೇಶದಲ್ಲಿ ಈಗ ಭೀತಿಯ ಭಾವನೆ ತುಂಬಿದೆ. ಇತ್ತೀಚಿನ ದಿನಗಳಲ್ಲಿಚರ್ಚ್‌ಗಳು ಸೇರಿದಂತೆ ಆರಾಧನಾ ಸ್ಥಳಗಳನ್ನು ಧ್ವಂಸಗೊಳಿಸಲಾಗುತ್ತಿದೆ ಮತ್ತು ನಮ್ಮ ಮುಸ್ಲಿಂ ಸೋದರರು ಹಾಗೂ ಸೋದರಿಯರ ವಿರುದ್ಧ ಶಸ್ತ್ರಗಳನ್ನು ಕೈಗೆತ್ತಿಕೊಳ್ಳುವಂತೆ ಕರೆಗಳನ್ನು ನೀಡಲಾಗುತ್ತಿದೆ. ಇವೆಲ್ಲವನ್ನೂ ನಿರ್ಭಯದಿಂದ ಮತ್ತು ಸೂಕ್ತ ಕ್ರಮದ ಭೀತಿಯಿಲ್ಲದೆ ನಡೆಸಲಾಗುತ್ತಿದೆ’ ಎಂದು ಹೇಳಿರುವ ಪತ್ರವು,ದೇಶವನ್ನು ವಿಭಜಿಸಲು ಪ್ರಯತ್ನಿಸುತ್ತಿರುವ ಶಕ್ತಿಗಳ ವಿರುದ್ಧ ದೃಢವಾಗಿ ನಿಲ್ಲುವಂತೆ ಪ್ರಧಾನಿಯನ್ನು ಆಗ್ರಹಿಸಿದೆ.

‘ಒಂದು ದೇಶವಾಗಿ ನಮ್ಮ ಜನರ ವಿರುದ್ಧ ದ್ವೇಷವನ್ನು ಹುಟ್ಟು ಹಾಕುವುದರಿಂದ ನಮ್ಮ ಮನಸ್ಸುಗಳನ್ನು ಮತ್ತು ಹೃದಯಗಳನ್ನು ವಿಮುಖಗೊಳಿಸುವಂತೆ ನಾವು ನಿಮ್ಮ ನಾಯಕತ್ವವನ್ನು ಕೇಳಿಕೊಳ್ಳುತ್ತಿದ್ದೇವೆ. ಸಮಾಜವು ಸೃಜನಶೀಲತೆ,ನವೀನತೆ ಮತ್ತು ಬೆಳವಣಿಗೆಯ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸಬಹುದು ಅಥವಾ ಸಮಾಜವು ನಮ್ಮಿಳಗೆ ಒಡಕನ್ನು ಸೃಷ್ಟಿಸಬಹುದು ಎಂದು ನಾವು ಭಾವಿಸಿದ್ದೇವೆ. ಜಗತ್ತಿಗೆ ಅಂತರ್ಗತತೆ ಮತ್ತು ವೈವಿಧ್ಯತೆಯ ಮಾದರಿಯಾಗಿ ಭಾರತವನ್ನು ನಿರ್ಮಿಸಲು ನಾವು ಬಯಸಿದ್ದೇವೆ ’ ಎಂದು ಪತ್ರದಲ್ಲಿ ಹೇಳಲಾಗಿದೆ.

ಐಐಎಂ-ಬೆಂಗಳೂರಿನ ಪ್ರಾಧ್ಯಾಪಕರಾದ ದೀಪಕ್ ಮಲ್ಘಾಣ,‌ ಹೇಮಾ ಸ್ವಾಮಿನಾಥನ್, ರಾಜಲಕ್ಷ್ಮಿ ವಿ.ಮೂರ್ತಿ,ಪ್ರತೀಕ್ ರಾಜ್ ಮತ್ತು ದಲ್ಹಿಯಾ ಮಣಿ ಅವರು ಈ ಪತ್ರವನ್ನು ಸಿದ್ಧಗೊಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News