×
Ad

ಬಿಜೆಪಿ ಶಾಸಕನ ಕೆನ್ನೆಗೆ ಬಾರಿಸಿದ ರೈತ: ʼಅವರು ಪ್ರೀತಿಯಿಂದ ತಟ್ಟಿದ್ದುʼ ಎಂದು ಸಮಜಾಯಿಷಿ ನೀಡಿದ ಶಾಸಕ !

Update: 2022-01-08 13:43 IST

ಲಕ್ನೋ: ರೈತನೊಬ್ಬ ಉನ್ನಾವೋ ಬಿಜೆಪಿ ಶಾಸಕ ಪಂಕಜ್ ಗುಪ್ತಾ ಅವರ ಕೆನ್ನೆಗೆ ಬಾರಿಸುತ್ತಿರುವ ವೀಡಿಯೋವೊಂದು ವೈರಲ್ ಆದ ಬೆನ್ನಿಗೇ ಸ್ಪಷ್ಟೀಕರಣ ನೀಡಿರುವ ಶಾಸಕ ʼಆತ ಕೆನ್ನೆಗೆ ತಟ್ಟಿದರು ಅಷ್ಟೇʼ ಎಂದು ಹೇಳಿದ್ದಾರೆ.

ಒಟ್ಟು 21 ಸೆಕೆಂಡ್ ಅವಧಿಯ ಈ ವೀಡಿಯೋ ಕ್ಲಿಪ್ ಮೂರು ದಿನಗಳ ಹಿಂದೆ ತೆಗೆದಿದ್ದೆನ್ನಲಾಗಿದ್ದು ಪ್ರತಿಮೆ ಅನಾವರಣ ಕಾರ್ಯಕ್ರಮವೊಂದರ ಭಾಗವಾಗಿ ಶಾಸಕ ವೇದಿಕೆಯಲ್ಲಿ ಕುಳಿತಿದ್ದ ಸಂದರ್ಭ ವೃದ್ಧನೊಬ್ಬ ಅವರ ಹತ್ತಿರಕ್ಕೆ ಬಂದು ಕೆನ್ನೆಗೆ ಬಾರಿಸಿದಂತೆ ಕಾಣಿಸುತ್ತದೆ. ಆಗ ಒಂದಿಬ್ಬರು ವ್ಯಕ್ತಿಗಳು ಆತನನ್ನು ಸುತ್ತುವರಿದು ಆತನನ್ನು ಪ್ರಶ್ನಿಸಿ ಆತನನ್ನು ವೇದಿಕೆಯ ಕೆಳಕ್ಕೆ ತರುತ್ತಾರೆ. ಆತ ಹೀಗೇಕೆ ಮಾಡಿದನೆಂದು ತಿಳಿದು ಬಂದಿಲ್ಲ.

ಈ ವಿಚಾರವನ್ನೇ ಎತ್ತಿಕೊಂಡು ಟ್ವೀಟ್ ಮಾಡಿದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್,"ಕೆನ್ನೆಗೆ ಬಾರಿಸಿದ್ದು ಶಾಸಕರಿಗಲ್ಲ, ಬದಲು ಬಿಜೆಪಿ ನೇತೃತ್ವದ ಯೋಗಿ ಆದಿತ್ಯನಾಥ್ ಸರಕಾರದ ಕೆಟ್ಟ ನೀತಿಗಳು, ಆಡಳಿತ ಮತ್ತು ಸರ್ವಾಧಿಕಾರದ ಆಳ್ವಿಕೆಗೆ" ಎಂದು ಬರೆದಿದ್ದಾರೆ.

ಇದೀಗ ಶಾಸಕ  ಆತ ತನ್ನ ಕೆನ್ನೆಗೆ ತಟ್ಟಿದ ಅಷ್ಟೇ ಎಂದು ಹೇಳಿದರೆ ಆ ವೃದ್ಧ ಪ್ರತಿಕ್ರಿಯಿಸಿ "ನಾನು ಅವರಿಗೆ ಹೊಡೆದಿಲ್ಲ. ಅವರ ಹತ್ತಿರಕ್ಕೆ ಬಂದು ಬೇಟಾ ಎನ್ನುತ್ತಾ ಏನನ್ನೋ ಹೇಳಿದೆ" ಎಂದಿದ್ದಾರೆ.

ತರುವಾಯ ಶಾಸಕ ಇನ್ನೊಂದಿಷ್ಟು ಸ್ಪಷ್ಟೀಕರಣ ನೀಡಿ "ವಿಪಕ್ಷಗಳು ರಾಜಕೀಯ ಲಾಭ ಗಿಟ್ಟಿಸಲು ಹೀಗೆ ಮಾಡುತ್ತಿವೆ, ಅವರಿಗೆ  ವಿವಾದವೆಬ್ಬಿಸಲು ಬೇರೆ ಯಾವುದೇ ವಿಷಯವಿಲ್ಲ, ರೈತರು ಪ್ರಧಾನಿಯ ವಿರುದ್ಧ ಇದ್ದಾರೆ ಎಂದು ತೋರ್ಪಡಿಸಲು ಅವರು ಯತ್ನಿಸುತ್ತಿದ್ದಾರೆ. ಆ ವ್ಯಕ್ತಿ ನನ್ನ ತಂದೆಯ ಹಾಗೆ" ಎಂದಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News