×
Ad

ಚತ್ತೀಸ್ ಗಢ: ಮುಸ್ಲಿಮರೊಂದಿಗೆ ವ್ಯವಹರಿಸದಂತೆ ಪ್ರತಿಜ್ಞೆ ಮಾಡುವ ವೀಡಿಯೊ ವೈರಲ್

Update: 2022-01-08 22:11 IST

ರಾಯ್‌ ಪುರ: ರಾಯ್‌ಪುರದಿಂದ ಸುಮಾರು 350 ಕಿಮೀ ಉತ್ತರಕ್ಕೆ ಛತ್ತೀಸ್‌ಗಢದ ಅಂಬಿಕಾಪುರ ಜಿಲ್ಲೆಯಲ್ಲಿ ಎರಡು ಗ್ರಾಮಗಳ ನಡುವೆ ನಡೆದ ಜಗಳವು ಕೋಮು ತಿರುವು ಪಡೆದುಕೊಂಡಿದೆ.  ಈ ನಡುವೆ ಗ್ರಾಮವೊಂದರಲ್ಲಿ ನಡೆದಿದೆ ಎನ್ನಲಾದ ಸಭೆಯ ವಿಡಿಯೋ ಒಂದು ವೈರಲ್‌ ಆಗಿದ್ದು, ಅದರಲ್ಲಿ ಗ್ರಾಮಸ್ಥರು ಮುಸ್ಲಿಮರನ್ನು ಬಹಿಷ್ಕರಿಸುವ ಪ್ರತಿಜ್ಞೆಯನ್ನು ತೆಗೆದುಕೊಳ್ಳುವುದು ಕಂಡುಬಂದಿದೆ.

ಪ್ರಕರಣದ ಕುರಿತಂತೆ ಶುಕ್ರವಾರ ಏಳು ಆರೋಪಿಗಳನ್ನು ಬಂಧಿಸಲಾಗಿದೆ ಎಂದು  ಅಂಬಿಕಾಪುರದ ಹೆಚ್ಚುವರಿ ಎಸ್ಪಿ ವಿವೇಕ್ ಶುಕ್ಲಾ  ತಿಳಿಸಿದ್ದಾರೆ, ಪೊಲೀಸರು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು,  ಸ್ಥಳೀಯ ಗುಪ್ತಚರ ಜಾಲವನ್ನು ಬಲಪಡಿಸಿದ್ದಾರೆ ಎಂದು ಅವರು ಹೇಳಿರುವುದಾಗಿ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಆರಾ ಗ್ರಾಮದಿಂದ ಕೆಲವು ಮುಸ್ಲಿಂ ಯುವಕರು ಹೊಸ ವರ್ಷದ ಪಿಕ್ನಿಕ್‌ಗೆ ಹೊರಟ ಬಳಿಕ ಈ ಘರ್ಷಣೆಗಳು ಆರಂಭಗೊಂಡಿದೆ.  ಕುಂದಿಕಲಾ ಗ್ರಾಮದ ನಿವಾಸಿಗಳೊಂದಿಗೆ ಆರಾ ಗ್ರಾಮದ ಯುವಕರಿಗೆ ಮಾತಿನ ಚಕಮಕಿ ನಡೆದಿದೆ. ಸಿಟ್ಟಿಗೆದ್ದ ಆರಾ ಯುವಕರು ಕೆಲವು ಮನೆಗಳಿಗೆ ನುಗ್ಗಿದ್ದು, ಕುಂದಿಕಲಾ  ಸ್ಥಳೀಯರಿಗೆ ಥಳಿಸಿ, ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದರು ಎಂದು ಆರೋಪಿಸಲಾಗಿದೆ.

ಘಟನೆಯ ಸೂಕ್ಷ್ಮತೆಯನ್ನು ಅರಿತು ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಎಫ್‌ಐಆರ್‌ ದಾಖಲಿಸಿ ಆರು ಮಂದಿಯನ್ನು ಬಂಧಿಸಿದ್ದರು. ಆದರೆ ಅವರಿಗೆ ಬೇಗನೇ ಜಾಮೀನು ಸಿಕ್ಕಿದೆ.   ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ. 

ಈ ಪ್ರತಿಭಟನೆಯ ನಂತರ ಜನವರಿ 5 ರಂದು ಮುಸ್ಲಿಮರಿಗೆ ಬಹಿಷ್ಕಾರ ಹಾಕಲು ತೀರ್ಮಾನಿಸಿದ ಸಭೆ ನಡೆದಿದೆ.  ವೈರಲ್ ವೀಡಿಯೊದಲ್ಲಿ ಗ್ರಾಮಸ್ಥರು ಮುಸ್ಲಿಮರಿಂದ ಏನನ್ನೂ ಖರೀದಿಸುವುದಿಲ್ಲ ಹಾಗೂ ಅವರಿಗೆ ಏನನ್ನೂ ಮಾರಾಟ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ.
 
ಹೊರಗಿನ ಕೆಲವರು ಗ್ರಾಮಕ್ಕೆ ಬಂದಿದ್ದು, ಮುಸ್ಲಿಮರನ್ನು ಬಹಿಷ್ಕರಿಸುವ ಪ್ರತಿಜ್ಞೆಯನ್ನು ತೆಗೆದುಕೊಳ್ಳುವಂತೆ ಸಾರ್ವಜನಿಕವಾಗಿ ನಿವಾಸಿಗಳನ್ನು ಕೇಳಿಕೊಂಡಿರುವುದಾಗಿ ನಮ್ಮ ಗಮನಕ್ಕೆ ಬಂದಿದೆ. ನಾವು ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದೇವೆ ಎಂದು ಹೆಚ್ಚುವರಿ ಎಸ್ಪಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News