ಕೋವಿಡ್ 3ನೇ ಅಲೆ ಪೆಬ್ರವರಿ 1-15ರ ನಡುವೆ ಉತ್ತುಂಗಕ್ಕೆ ತಲುಪಲಿದೆ: ಮದ್ರಾಸ್ ಐಐಟಿ ವಿಶ್ಲೇಷಣೆ
ಹೊಸದಿಲ್ಲಿ, ಜ. 8: ಕೋವಿಡ್ ಹರಡುವುದನ್ನು ಸೂಚಿಸುವ ಭಾರತದ ಆರ್-ನಾಟ್ ಮೌಲ್ಯ ಈ ವಾರ 4 ದಾಖಲಾಗಿದೆ. ಇದು ಅತಿ ಹೆಚ್ಚು ಸೋಂಕು ಹರಡುವ ದರವನ್ನು ಸೂಚಿಸುತ್ತದೆ ಎಂದು ಹೇಳಿರುವ ಮದ್ರಾಸ್ ಐಐಟಿಯ ಪ್ರಾಥಮಿಕ ವಿಶ್ಲೇಷಣೆ, ಕೋವಿಡ್ ಮೂರನೇ ಅಲೆ ಫೆಬ್ರವರಿ 1 ಹಾಗೂ 15ರ ನಡುವೆ ಉತ್ತುಂಗ ಸ್ಥಿತಿಗೆ ತಲುಪುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಿದೆ.
ಆರ್-ನಾಟ್ ಅಥವಾ ಆರ್0 ಓರ್ವ ಸೋಂಕಿತ ವ್ಯಕ್ತಿಯು ಸೋಂಕನ್ನು ಹರಡಬಹುದಾದ ವ್ಯಕ್ತಿಗಳ ಸಂಖ್ಯೆಯನ್ನು ಸೂಚಿಸುತ್ತದೆ. ಈ ಸಂಖ್ಯೆ 1ಕ್ಕಿಂತ ಕೆಳಗೆ ಇಳಿದರೆ ಸಾಂಕ್ರಾಮಿಕ ರೋಗ ಅಂತ್ಯಗೊಳ್ಳುತ್ತದೆ ಎಂದು ಪರಿಗಣಿಸಲಾಗುತ್ತದೆ. ಮದ್ರಾಸ್ ಐಐಟಿಯ ಕಂಪ್ಯೂಟೇಶನಲ್ ಮಾಡಲೆಂಗ್ ನ ಮೂಲಕ ಮಾಡಿದ ಪ್ರಾಥಮಿಕ ವಿಶ್ಲೇಷಣೆಯಲ್ಲಿ ಕಳೆದ ವಾರ (ಡಿಸೆಂಬರ್ 25ರಿಂದ ಡಿಸೆಂಬರ್ 31)ದ ವರೆಗೆ ದೇಶಾದ್ಯಂತ ಆರ್ ನಾಟ್ ವೌಲ್ಯ 2.9ರ ಸಮೀಪಕ್ಕೆ ಬಂದಿತ್ತು.
ಈ ವಾರ (ಜನವರಿ 1-6) ಆ ಸಂಖ್ಯೆ 4 ಕ್ಕೆ ಏರಿಕೆಯಾಗಿದೆ. ಆರ್-ನಾಟ್ ಮೂರು ಅಂಶಗಳನ್ನು ಆಧರಿಸಿದೆ, ಒಂದು ಹರಡುವ ಸಾಧ್ಯತೆ, ಎರಡನೇಯದು ಸಂಪರ್ಕ ದರ ಹಾಗೂ ಮೂರನೆಯದು ಸೋಂಕು ತಗಲುವ ನಿರೀಕ್ಷಿತ ಮಧ್ಯಂತರ ಸಮಯ ಎಂದು ಮದ್ರಾಸ್ ಐಐಟಿಯ ಗಣಿತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಜಯಂತ್ ಝಾ ಅವರು ವಿವರಿಸಿದ್ದಾರೆ.
‘‘ಕ್ವಾರಂಟೈನ್ ಕ್ರಮಗಳು ಅಥವಾ ನಿರ್ಬಂಧದಿಂದ ಈಗ ಸಂಪರ್ಕ ದರ ಇಳಿಕೆಯಾಗುವ ಸಾಧ್ಯತೆ ಇದೆ. ಅನಂತರ ಆರ್ ನಾಟ್ ಪ್ರಕರಣಗಳಲ್ಲಿ ಇಳಿಕೆಯಾಗಬಹುದು. ಆದುದರಿಂದ ಕಳೆದ ಕೇವಲ ಎರಡು ವಾರಗಳನ್ನು ಆಧರಿಸಿದ ನಮ್ಮ ಪ್ರಾಥಮಿಕ ವಿಶ್ಲೇಷಣೆ ಮೂಲಕ ಈ ಸಂಖ್ಯೆಯನ್ನು ಹೇಳಬಹುದು. ಆದರೆ, ಸಾಮಾಜಿಕವಾಗಿ ಸೇರುವಿಕೆಗೆ ಹಾಗೂ ಇತರ ಎಲ್ಲ ಅಂಶಗಳಿಗೆ ಸಂಬಂಧಿಸಿ ಯಾವ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂಬ ಆಧಾರದ ಮೇಲೆ ಈ ಸಂಖ್ಯೆಗಳು ಬದಲಾಗುವ ಸಾಧ್ಯತೆ ಇರುತ್ತದೆೆ’’ ಎಂದು ಅವರು ಹೇಳಿದ್ದಾರೆ.
ಒಮೈಕ್ರಾನ್ ರೂಪಾಂತರಿಯಿಂದ ಕೋವಿಡ್ ಸೋಂಕಿನ ಪ್ರಕರಣಗಳು ಅತಿಯಾಗಿ ಏರಿಕೆಯಾಗುತ್ತಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ಹೇಳಿತ್ತು. ಇದು ದೇಶದ ಆರ್ ನಾಟ್ ಮೌಲ್ಯ 2.69 ಹಾಗೂ ಕೋವಿಡ್ ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಉತ್ತುಂಗದ ಸಂದರ್ಭ ದಾಖಲಾದ 1.69ಕ್ಕಿಂತ ಹೆಚ್ಚು ಎಂಬುದರ ಬಗ್ಗೆ ಬೆಳಕು ಬೀರಿದೆ ಎಂದು ಝಾ ಹೇಳಿದ್ದಾರೆ.