×
Ad

ಪ್ರಧಾನಿ ಪಂಜಾಬ್ ಭೇಟಿ ವೇಳೆ ಭದ್ರತಾ ಲೋಪ: ಪಂಜಾಬ್, ಹರ್ಯಾಣ ಹೈಕೋರ್ಟ್ ನೆರವಿಗೆ ಐಜಿ ಮಟ್ಟದ ತಂಡ

Update: 2022-01-08 23:26 IST

ಹೊಸದಿಲ್ಲಿ, ಜ. 8: ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 5ರಂದು ಪಂಜಾಬ್ಗೆ ಭೇಟಿ ನೀಡಿದ ಸಂದರ್ಭ ಸಂಭವಿಸಿದ ಭದ್ರತಾ ಲೋಪಕ್ಕೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಳ್ಳಲು ಹಾಗೂ ಸಂರಕ್ಷಿಸಲು ಪಂಜಾಬ್ ಹಾಗೂ ಹರ್ಯಾಣ ಉಚ್ಚ ನ್ಯಾಯಾಲಯದ ಮಹಾ ನೋಂದಣಾಧಿಕಾರಿಗೆ ನೆರವು ನೀಡಲು ಐಜಿ ಮಟ್ಟದ ತಂಡವೊಂದನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ರೂಪಿಸಿದೆ. ಎನ್ಐಎಯ ಪ್ರಧಾನ ನಿರ್ದೇಶಕರು ಇದಕ್ಕೆ ಸಂಬಂಧಿಸಿ ಶುಕ್ರವಾರ ಆದೇಶವೊಂದನ್ನು ನೀಡಿದ್ದಾರೆ. ‌

ತಂಡವೊಂದನ್ನು ರೂಪಿಸುವಂತೆ ಎನ್ಐಎಯ ಡಿಜಿ ಕುಲದೀಪ್ ಸಿಂಗ್ ಅವರಿಗೆ ಗೃಹ ಸಚಿವಾಲಯ ಸೂಚಿಸಿತ್ತು. ಅನಂತರ ತಂಡ ರೂಪಿಸುವಂತೆ ಡಿಜಿ ಲಿಖಿತ ಆದೇಶ ನೀಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಐಜಿಪಿ ಸಂತೋಷ್ ರಸ್ತೋಗಿ ಅವರನ್ನು ಈ ತಂಡಕ್ಕೆ ನಿಯೋಜಿಸಲಾಗಿದೆ. ಡಿಐಜಿ ಮಟ್ಟದ ಮೂವರು ಅಧಿಕಾರಿಗಳು ಸೇರಿದಂತೆ ಇತರ 7 ಮಂದಿ ಅಧಿಕಾರಿಗಳನ್ನು ತಂಡ ಒಳಗೊಂಡಿದೆ ಎಂದು ಮೂಲಗಳು ತಿಳಿಸಿವೆ. ತನಿಖೆಯಲ್ಲಿ ರಸ್ತೋಗಿ ಅವರಿಗೆ ಡಿಐಜಿಗಳಾದ ವಿಧಿ ಕುಮಾರ್ ಬಿಧಿ, ಕಲಿರಾಜ್ ಮಹೇಶ್ ಕುಮಾರ್, ಅಮಿತ್ ಕುಮಾರ್ ಹಾಗೂ ಪೊಲೀಸ್ ಅಧೀಕ್ಷಕರಾದ ಅಮಿತ್ ಸಿಂಗ್, ತೇಜಿಂದರ್ ಸಿಂಗ್ ಹಾಗೂ ಶಂಕರ್ ಬಿ ರೈಮೇಧಿ ನೆರವು ನೀಡಲಿದ್ದಾರೆ.

ಪಂಜಾಬ್ನ ಫಿರೋಝ್ಪುರಕ್ಕೆ ಜನವರಿ 5ರಂದು ಭೇಟಿ ನೀಡಿದ ಸಂದರ್ಭ ಪ್ರಧಾನ ಮಂತ್ರಿ ಅವರ ಭದ್ರತೆಯ ಹೊಣೆ ಹೊತ್ತ ಪಂಜಾಬ್ನ 12ಕ್ಕೂ ಉನ್ನತ ಪೊಲೀಸ್ ಅಧಿಕಾರಿಗಳು ಸೇರಿದಂತೆ ಪಂಜಾಬ್ ಪೊಲೀಸ್ ಮಹಾನಿರ್ದೇಶಕ ಸಿದ್ಧಾರ್ಥ ಚಟ್ಟೋಪಾಧ್ಯಾಯ ಹಾಗೂ ಪಂಜಾಬ್ ಎಡಿಜಿಪಿ, ಪಾಟಿಯಾಲ ಐಜಿಪಿ ಹಾಗೂ ಫಿರೋಝ್ಪುರ ಡಿಐಜಿಗೆ ಕೇಂದ್ರ ಗೃಹ ಸಚಿವಾಲಯ ರೂಪಿಸಿದ ಮೂವರು ಸದಸ್ಯರ ಸಮಿತಿ ಸಮನ್ಸ್ ನೀಡಿದ ಗಂಟೆಗಳ ಬಳಿಕ ಈ ಬೆಳವಣಿಗೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News