​ಗೋವಾ: ಬಿಜೆಪಿ ವಿರುದ್ಧ ರೂಪುಗೊಳ್ಳುತ್ತಿದೆ ಮಹಾಮೈತ್ರಿ

Update: 2022-01-09 01:53 GMT
ಸಾಂದರ್ಭಿಕ ಚಿತ್ರ

ಬೆಳಗಾವಿ: ಗೋವಾ ವಿಧಾನಸಭಾ ಚುನಾವಣೆಗೆ ದಿನಾಂಕ ಪ್ರಕಟವಾಗುತ್ತಿದ್ದಂತೆ ಆಡಳಿತಾರೂಢ ಬಿಜೆಪಿ ವಿರುದ್ಧ ಸಮಾನ ಮನಸ್ಕ ರಾಜಕೀಯ ಪಕ್ಷಗಳ ಮಹಾಮೈತ್ರಿ ರೂಪುಗೊಳ್ಳುವಿಕೆ ವೇಗ ಪಡೆದಿದೆ.

ಫೆ.14ರಂದು ಮತದಾನ ನಡೆಯಲಿದೆ. ಗೋವಾದಲ್ಲಿ ಟಿಎಂಸಿ, ಎಂಜಿಪಿ, ಗೋವಾ ಫಾರ್ವರ್ಡ್ ಮತ್ತು ಕಾಂಗ್ರೆಸ್ ಪಕ್ಷಗಳು ಜತೆ ಸೇರಿ ಬಿಜೆಪಿಯನ್ನು ಸದೆಬಡಿಯಲು ಮಹಾಮೈತ್ರಿ ರೂಪುಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ನಡೆಸಿವೆ.

ಟಿಎಂಸಿಯ ಗೋವಾ ಉಸ್ತುವಾರಿ ಮಹೂವಾ ಮೈತ್ರಾ ಈ ಸಂಬಂಧ ಮಾಡಿರುವ ಟ್ವೀಟನ್ನು ಕಾಂಗ್ರೆಸ್, ಜಿಎಫ್‌ಪಿ ಮತ್ತು ಎಂಜಿಪಿಗೆ ಟ್ಯಾಗ್ ಮಾಡಿದ್ದು, "ಉಳಿದ ಪಕ್ಷಗಳು ಖಾತರಿ ನೀಡಿದಲ್ಲಿ, ಎಐಟಿಸಿ ಗೋವಾದಲ್ಲಿ ಬಿಜೆಪಿಯನ್ನು ಸೋಲಿಸಲು ಎಲ್ಲ ಪ್ರಯತ್ನಗಳನ್ನು ಮಾಡಲಿದೆ. ಈ ಹಿಂದೆ ಈ ಸಾಧನೆಯನ್ನು ಮಾಡಿರುವ ಟಿಎಂಸಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗೋವಾದಲ್ಲಿ ಕೂಡ ಒಂದು ಹೆಜ್ಜೆ ಮುಂದಿಡಲು ಸಿದ್ಧ ಎನ್ನುವುದು ಕಾಂಗ್ರೆಸ್ ನಾಯಕತ್ವವನ್ನು ಎಚ್ಚರಗೊಳಿಸಿದೆ" ಎಂದು ವಿವರಿಸಿದ್ದಾರೆ.

ಈಗಾಗಲೇ ಕಾಂಗ್ರೆಸ್‌ನ ಮಿತ್ರ ಪಕ್ಷವಾದ ಗೋವಾ ಫಾರ್ವರ್ಡ್ ಪಾರ್ಟಿ ಟ್ವೀಟ್ ಮಾಡಿ, ಬಿಜೆಪಿಯನ್ನು ಸೋಲಿಸುವ ಸಲುವಾಗಿ ಕಾಂಗ್ರೆಸ್, ಎಂಜಿಪಿ, ಟಿಎಂಸಿ ಮತ್ತು ಜಿಎಫ್‌ಪಿಯಂಥ ಸಮಾನ ಮನಸ್ಕಪಕ್ಷಗಳ ಜಂಟಿ ವಿರೋಧ ಪಕ್ಷ ರೂಪುಗೊಳ್ಳುವ ಅಗತ್ಯವಿದೆ ಎಂದು ಪ್ರತಿಪಾದಿಸಿದೆ.

ಕಾಂಗ್ರೆಸ್‌ನ ಗೋವಾ ಉಸ್ತುವಾರಿ ಪಿ.ಚಿದಂಬರಂ, ಟಿಎಂಸಿ ಉಸ್ತುವಾರಿ ಮೊಹುವಾ ಮೈತ್ರಾ ಮತ್ತು ಎಂಜಿಪಿ ಹಾಗೂ ಗೋವಾ ಫಾರ್ವರ್ಡ್ ಪಕ್ಷದ ಮುಖಂಡರು ಮಹಾಮೈತ್ರಿಯನ್ನು ಆದಷ್ಟು ಬೇಗನೇ ಅಂತಿಮಪಡಿಸಲು ಉತ್ಸುಕರಾಗಿದ್ದಾರೆ ಎಂದು ಹೇಳಲಾಗಿದೆ.

ಮೈತ್ರಾ ಅವರ ಟ್ವೀಟ್ ಬಗ್ಗೆ ಪ್ರತಿಕ್ರಿಯಿಸಿರುವ ಪಿ.ಚಿದಂಬರಂ, "ಗೋವಾದಲ್ಲಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಶಕ್ತವಾಗಿದೆ ಎಂಬ ನಂಬಿಕೆ ನನ್ನದು. ಆದರೆ ಯಾವುದೇ ಪಕ್ಷಗಳು ಕಾಂಗ್ರೆಸ್‌ಗೆ ಬೆಂಬಲ ನೀಡುವುದಾದರೆ ಬೇಡ ಎಂದು ಏಕೆ ಹೇಳಬೇಕು. ಅಧಿಕೃತವಾಗಿ ಟಿಎಂಸಿಯಿಂದ ಯಾವ ಆಫರ್ ಬರುತ್ತದೆ ನೋಡೋಣ" ಎಂದು ಹೇಳಿದ್ದಾರೆ.

ಟಿಎಂಸಿಯಿಂದ ಅಧಿಕೃತ ಆಫರ್ ಬಂದಲ್ಲಿ, ಟಿಎಂಸಿ ಮತ್ತು ಎಂಜಿಪಿ ಜತೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಹಿಂದೇಟು ಹಾಕುವುದಿಲ್ಲ ಎಂದು ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.

ಚುನಾವಣಾ ಪೂರ್ವ ಮೈತ್ರಿ ನಡೆಯುವುದಾದಲ್ಲಿ ಪಕ್ಷಗಳ ಮುಖಂಡರು ಸ್ಥಾನ ಹಂಚಿಕೆ ಮಾಡಿಕೊಳ್ಳುವ ಸಂಬಂಧವೂ ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳು ಹೇಳಿವೆ. ಏತನ್ಮಧ್ಯೆ ಕಾಂಗ್ರೆಸ್ ಪಕ್ಷ ಗೋವಾದಲ್ಲಿ ಪ್ರಮುಖ ಒಂಬತ್ತು ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರು ಘೋಷಿಸಿದ್ದು, 31 ಸ್ಥಾನಗಳು ಬಾಕಿ ಇವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News