ಬಂಧಿತ 'ಬುಲ್ಲಿ ಬಾಯ್' ಆ್ಯಪ್ ಸೃಷ್ಟಿಕರ್ತ ನೀರಜ್ ಬಿಷ್ಣೋಯಿಯಿಂದ ಆತ್ಮಹತ್ಯೆ ಯತ್ನ
ಹೊಸದಿಲ್ಲಿ: ಮುಸ್ಲಿಂ ಮಹಿಳೆಯರನ್ನು ’ಹರಾಜು’ ಬಳಸಿಕೊಂಡಿದ್ದ ಬುಲ್ಲಿ ಬಾಯ್ ಆ್ಯಪ್‌ನ ಸೃಷ್ಟಿಕರ್ತ ನೀರಜ್ ಬಿಷ್ಣೋಯಿ ದೆಹಲಿ ಪೊಲೀಸ್ ಕಸ್ಟಡಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದಾನೆ ಎಂದು ದೆಹಲಿ ಪೊಲೀಸರು ಬಹಿರಂಗಪಡಿಸಿದ್ದಾರೆ.
ಇಂಟೆಲಿಜೆನ್ಸ್ ಫ್ಯೂಶನ್ ಆ್ಯಂಡ್ ಸ್ಟ್ರಾಟಜಿಕ್ ಆಪರೇಶನ್ (ಐಎಫ್‌ಎಸ್‌ಓ) ವಿಶೇಷ ಘಟಕದ ಡಿಸಿಪಿ ಕೆಪಿಎಸ್ ಮಲ್ಹೋತ್ರಾ ಈ ಬಗ್ಗೆ ಹೇಳಿಕೆ ನೀಡಿ, ಆರೋಪಿ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಸ್ಪಷ್ಟಪಡಿಸಿದ್ದಾರೆ.
"ಮುಸ್ಲಿಂ ಮಹಿಳೆಯರನ್ನು ಹರಾಜು ಮಾಡಿದ ’ಸುಲ್ಲಿ ಡೀಲ್’ ಆ್ಯಪ್ ಸೃಷ್ಟಿಕರ್ತನ ಬಗ್ಗೆ ತನಗೆ ತಿಳಿದಿದೆ ಎಂದು ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಮುಂಬೈ ಪೊಲೀಸರು ಬಂಧಿಸಿರುವ ಶ್ವೇತಾ ಸಿಂಗ್ ಅವರ ಬಳಕೆ ಖಾತೆಯನ್ನೂ ಬಳಸಿಕೊಂಡಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಮಲ್ಹೋತ್ರಾ ವಿವರಿಸಿದ್ದಾರೆ.
ಭೋಪಾಲ್‌ನ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ಎರಡನೇ ವರ್ಷದ ಬಿ-ಟೆಕ್ ವಿದ್ಯಾರ್ಥಿಯಾಗಿರುವ ನೀರಜ್ (21)ನನ್ನು ದೆಹಲಿ ಪೊಲೀಸರು ಅಸ್ಸಾಂನ ಜೋಹತ್ ಜಿಲ್ಲೆಯಲ್ಲಿ ಬಂಧಿಸಿದ್ದರು. ಆ್ಯಪ್ ಸೃಷ್ಟಿಸಲು ಬಳಸಿದ್ದ, ಗಿಟ್‌ಹಬ್‌ನಲ್ಲಿ ಹೋಸ್ಟ್ ಮಾಡಲಾದ ಸಾಧನವನ್ನು ವಶಪಡಿಸಿಕೊಳ್ಳಲಾಗಿದೆ. ಈ ಆ್ಯಪನ್ನು ಇದೀಗ ಡಿಲೀಟ್ ಮಾಡಲಾಗಿದೆ.
ಬುಲ್ಲಿ ಬಾಯ್ ಆ್ಯಪ್, ಸುಲ್ಲಿ ಡೀಲ್ಸ್‌ನ ತದ್ರೂಪಿಯಾಗಿದ್ದು, ಬಲಪಂಥೀಯ ಸಂಘಟನೆಗಳ ಕಾರ್ಯಕರ್ತರು ಮುಸ್ಲಿಂ ಮಹಿಳೆಯರ ವಿರುದ್ಧ ಬಳಸುವ ಕೊಂಕು ಪದ ಇದಾಗಿದೆ. ಬುಲ್ಲಿಬಾಯ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ನಾಲ್ಕನೇ ಆರೋಪಿ ಈತ, ಮಾಯಾಂಕ್ ರಾವಲ್ (21), ಶ್ವೇತಾ ಸಿಂಗ್ ಮತ್ತು ವಿಶಾಲ್ ಕುಮಾರ್ ಝಾ ಅವರನ್ನು ಈ ಮೊದಲು ಬಂಧಿಸಲಾಗಿತ್ತು.