×
Ad

ಮಹಿಳಾವಾದಿ, ಶಿಕ್ಷಣತಜ್ಞೆ ಫಾತಿಮಾ ಶೇಖ್‌ ಗೆ ʼಗೂಗಲ್‌ ಡೂಡಲ್‌ʼ ಗೌರವ

Update: 2022-01-09 12:07 IST

ಹೊಸದಿಲ್ಲಿ: ಭಾರತದ ಮೊದಲ ಮುಸ್ಲಿಂ ಮಹಿಳಾ ಶಿಕ್ಷಕಿ ಎಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟಿರುವ ಶಿಕ್ಷಣ ತಜ್ಞೆ ಹಾಗೂ ಮಹಿಳಾವಾದದ ಐಕಾನ್‌ ಫಾತಿಮಾ ಶೇಖ್‌ ರವರ ಹುಟ್ಟುಹಬ್ಬದ ಸಲುವಾಗಿ ಗೂಗಲ್‌ ಇಂದು ʼಡೂಡಲ್ʼ ಮೂಲಕ ಅವರನ್ನು ಗೌರವಿಸಿದೆ. ಸಹ ಪ್ರವರ್ತಕರಾದ ಜ್ಯೋತಿರಾವ್‌ ಹಾಗೂ ಸಾವಿತ್ರಿಬಾಯಿ ಫುಲೆ ಅವರೊಂದಿಗೆ ೧೮೪೮ರಲ್ಲಿ ಫಾತಿಮಾ ಶೇಖ್‌ ಗ್ರಂಥಾಲಯಹ ಹಾಗೂ ಶಾಲೆ ತೆರದಿದ್ದು, ಇದು ಬಾಲಕಿಯರಿಗಾಗಿ ಭಾರತದಲ್ಲಿ ಸ್ಥಾಪಿಸಲ್ಪಟ್ಟ ಮೊದಲ ಶಾಲೆಯಾಗಿದೆ.

ಜನವರಿ ೯ ೧೮೩೧ರಲ್ಲಿ ಪುಣೆಯಲ್ಲಿ ಫಾತಿಮಾ ಶೇಖ್‌ ಜನಿಸಿದರು. ತನ್ನ ಸಹೋದರ ಉಸ್ಮಾನ್‌ ರೊಂದಿಗೆ ವಾಸಿಸುತ್ತಿದ್ದ ಅವರು, ಕೆಳಜಾತಿಯ ಜನರಿಗೆ ಶಿಕ್ಷಣ ನೀಡಲು ಮುಂದಾಗಿದ್ದಕ್ಕೆ ಫುಲೆ ದಂಪತಿಗಳನ್ನು ಜನರು ಹೊರಗಟ್ಟಿದ್ದ ವೇಳೆ ಫಾತಿಮಾ ಹಾಗೂ ಉಸ್ಮಾನ್‌ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ತಮ್ಮ ಮನೆಯನ್ನೇ ಬಿಟ್ಟುಕೊಟ್ಟಿದ್ದರು. ಇಲ್ಲಿ ಸಾವಿತ್ರಿಬಾಯಿ ಫುಲೆ ಮತ್ತು ಫಾತಿಮಾ ಶೇಖ್ ಅವರು ವರ್ಗ, ಧರ್ಮ ಅಥವಾ ಲಿಂಗದ ಆಧಾರದ ಮೇಲೆ ಶಿಕ್ಷಣವನ್ನು ನಿರಾಕರಿಸಲ್ಪಟ್ಟ ದಲಿತ ಮತ್ತು ಮುಸ್ಲಿಂ ಮಹಿಳೆಯರು ಮತ್ತು ಮಕ್ಕಳಿಗೆ ವಿದ್ಯೆ ಕಲಿಸಿದರು.

ದೀನ ದಲಿತರನ್ನು ಭಾರತೀಯ ಜಾತಿ ವ್ಯವಸ್ಥೆಯಿಂದ ಬಿಡುಗಡೆಗೊಳಿಸಲು ಈ ಆಂದೋಲನದ ರೂವಾರಿಯಂತೆ ಫಾತಿಮಾ ಶೇಖ್‌ ಮನೆಮನೆಗಳಿಗೆ ಜಾಗೃತಿ ಮೂಡಿಸಿದರು. ಈ ಆಂದೋಲನದಲ್ಲಿ ತೊಡಗಿಸಿಕೊಂಡವರಿಗೆ ಹಲವು ಅಡ್ಡಿ, ಆತಂಕಗಳು ಎದುರಾಗಿದ್ದರೂ ಫುಲೆ ದಂಪತಿಗಳೊಂದಿಗೆ ಫಾತಿಮಾ ಶೇಖ್‌ ತಮ್ಮ ಮಹತ್ಕಾರ್ಯವನ್ನು ಮುಂದುವರಿಸಿಕೊಂಡು ಹೋದರು.

೨೦೧೪ರಲ್ಲಿ ಭಾರತ ಸರ್ಕಾರವು ಇದುವರೆಗೂ ಮೂಲೆಗುಂಪು ಮಾಡಲಾಗಿದ್ದ ಫಾತಿಮಾ ಶೇಖ್‌ ರ ಸಾಧನೆಯನ್ನು ಜನರಿಗೆ ಪರಿಚಯಿಸುವಲ್ಲಿ ಮುಂದಡಿಯಿಟ್ಟಿತು. ಇದರ ಶೈಕ್ಷಣಿಕ ಸುಧಾರಕರೊಂದಿಗೆ ಫಾತಿಮಾ ಶೇಖ್‌ ರ ಕುರಿತಾದ ಪಠ್ಯವನ್ನೂ ಉರ್ದು ಪಠ್ಯಪುಸ್ತಕಗಳಲ್ಲಿ ಸೇರಿಸಲಾಗಿತ್ತು. 

ಇದನ್ನೂ ಓದಿ: ಮುಸ್ಲಿಂ ಸಮುದಾಯದ ಮೊದಲ ಶಿಕ್ಷಕಿ ಫಾತಿಮಾ ಶೇಖ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News