ಚಂಡೀಗಢದಲ್ಲಿ ʼಒಂದು ಮತದಲ್ಲಿʼ ಬಿಜೆಪಿ ಮೇಯರ್ ಆಯ್ಕೆ: 'ಪ್ರಜಾಪ್ರಭುತ್ವದ ಕೊಲೆʼ ಎಂದ ಆಮ್ ಆದ್ಮಿ ಪಕ್ಷ
ಚಂಡೀಗಢ: ಇಲ್ಲಿನ ಮೇಯರ್ ಚುನಾವಣೆಯಲ್ಲಿ ಅಕ್ರಮ ನಡೆದಿದ್ದು, ಪ್ರಜಾಪ್ರಭುತ್ವದ ಕಗ್ಗೊಲೆ ನಡೆದಿದೆಯೆಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.
ಅತಿಹೆಚ್ಚು ಕೌನ್ಸಿಲರ್ ಗಳನ್ನು ಹೊಂದಿದ ಎಎಪಿಯನ್ನು ಬಿಟ್ಟು ಬಿಜೆಪಿಯ ಅಭ್ಯರ್ಥಿ ಮೇಯರ್ ಆಯ್ಕೆ ನಡೆದಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಮೇಯರ್ ಆಯ್ಕೆಗೆ ಎಎಪಿಯ ಅಂಜು ಕತ್ಯಾಲ್ ಹಾಗೂ ಬಿಜೆಪಿಯ ಸರಬ್ಜಿತ್ ಕೌರ್ ಸ್ಪರ್ಧಿಸಿದ್ದರು. ಒಂದು ಮತದ ವ್ಯತ್ಯಾಸದಲ್ಲಿ ಬಿಜೆಪಿ ಅಭ್ಯರ್ಥಿ ಮೇಯರ್ ಹುದ್ದೆಗೆ ಆಯ್ಕೆಯಾಗಿದ್ದಾರೆ.
28 ಮತಗಳಲ್ಲಿ ಎರಡೂ ಅಭ್ಯರ್ಥಿಗಳು ತಲಾ 14 ಮತಗಳನ್ನು ಪಡೆದು ಸಮಬಲ ಸಾಧಿಸಿದ್ದರೂ, ಎಎಪಿಯ ಅಭ್ಯರ್ಥಿಗೆ ಬಿದ್ದ ಒಂದು ಮತವನ್ನು ಅಸಿಂಧುಗೊಳಿಸಿ ಬಿಜೆಪಿ ಅಭ್ಯರ್ಥಿಯನ್ನು ವಿಜಯಶಾಲಿ ಎಂದು ಪರಿಗಣಿಸಲಾಗಿದೆ.
ಈ ಪ್ರಕ್ರಿಯೆ ಎಎಪಿಗೆ ಆಘಾತ ಉಂಟು ಮಾಡಿದೆ. ಈ ಕುರಿತು ಟ್ವೀಟ್ ಮಾಡಿರುವ ಎಎಪಿ, ಪ್ರಜಾಪ್ರಭುತ್ವದ ಅನಿರೀಕ್ಷಿತ ಸಾವಾಗಿದೆ. ಎಎಪಿ ಹೆಚ್ಚು ಸೀಟುಗಳನ್ನು ಗೆದ್ದರೂ ಜಿಲ್ಲಾಧಿಕಾರಿ ಅಕ್ರಮವಾಗಿ ಬಿಜೆಪಿಯ ಮೇಯರ್‌ಅನ್ನು ಆಯ್ಕೆ ಮಾಡಿದ್ದಾರೆ. ಜಿಲ್ಲಾಧಿಕಾರಿ ಕಛೇರಿ ಎದುರು ಎಎಪಿ ನಾಯಕರುಗಳು ಕಾಯುವಂತೆ ಮಾಡಿ ಈಗ ಅವರನ್ನು ಭೇಟಿಯಾಗಲು ಜಿಲ್ಲಾಧಿಕಾರಿ ನಿರಾಕರಿಸುತ್ತಿದೆ ಎಂದು ಆರೋಪಿಸಿದೆ.
ಎಎಪಿ ಪಂಜಾಬ್ ಶಾಸಕ ಜರ್ನೈಲ್ ಸಿಂಗ್ ಕೂಡಾ ಈ ಕುರಿತು ಪ್ರತಿಕ್ರಿಯಿಸಿದ್ದು, ಪ್ರಜಾಪ್ರಭುತ್ವದ ಕೊಲೆ ಪ್ರಯತ್ನ ಇದು ಎಂದಿದ್ದಾರೆ.
ಬಿಜೆಪಿಗೆ ಕಡಿಮೆ ಸೀಟ್ ಬಂದ ಬಳಿಕ ಕಾಂಗ್ರೆಸ್ ಕೌನ್ಸಿಲರ್‌ಗಳು ಬಿಜೆಪಿಯನ್ನು ಸೇರಿಕೊಂಡಿದ್ದಾರೆ. ಅದಾಗ್ಯೂ, ಮತಗಳು ಸಾಕಾಗದಾಗ ಬಿಜೆಪಿ ಅಧಿಕಾರಶಾಹಿಯ ಬೆಂಬಲ ಪಡೆದಿದೆ. ಸರಿಯಾದ ಮತಗಳನ್ನು ತಪ್ಪಾಗಿ ನಿರೂಪಿಸುವ ಮೂಲಕ ಪ್ರಜಾಪ್ರಭುತ್ವವನ್ನು ಕೊಲ್ಲುವ ಪ್ರಯತ್ನವಾಗಿದೆ ಎಂದು ಅವರು ಹೇಳಿದ್ದಾರೆ.
ಬಿಜೆಪಿಯ ಗೆಲುವು ಕಾಂಗ್ರೆಸ್ ಹಾಗೂ ಬಿಜೆಪಿಯ ಒಳ ಒಪ್ಪಂದವನ್ನು ಸಾಬೀತುಪಡಿಸಿದೆ ಎಂದು ಅವರು ಹೇಳಿದ್ದಾರೆ. ಕಳೆದ ವಾರ ಘೋಷಣೆಯಾದ ಚಂಡೀಗಢ ನಗರಸಭೆ ಚುನಾವಣೆಯಲ್ಲಿ 35 ಸ್ಥಾನಗಳಲ್ಲಿ ಎಎಪಿ 14 ಸ್ಥಾನ ಗೆದ್ದರೆ, ಬಿಜೆಪಿ 12, ಕಾಂಗ್ರೆಸ್ 8 ಹಾಗೂ ಅಕಾಲಿದಳ ಒಂದು ಸ್ಥಾನದಲ್ಲಿ ಗೆಲವು ಸಾಧಿಸಿತ್ತು.
ಮೇಯರ್ ಆಯ್ಕೆ ಮತದಾನದಲ್ಲಿ ಏಳು ಕಾಂಗ್ರೆಸ್ ಶಾಸಕರು ಹಾಗೂ ಅಕಾಲಿದಳದ ಸದಸ್ಯರು ಹೊರಗುಳಿದಿದ್ದರಿಂದ 28 ಮತಗಳು ಮಾತ್ರ ಚಲಾವಣೆಯಾದವು. ಓರ್ವ ಕಾಂಗ್ರೆಸ್ ಸದಸ್ಯ ಹಾಗೂ ಬಿಜೆಪಿ ಸಂಸದರ ಮತ ಬಿಜೆಪಿ ಅಭ್ಯರ್ಥಿ ಪರ ಬಿದ್ದವು.