ಚುನಾವಣಾ ಕಣ: ನಮ್ಮ ಬೇಡಿಕೆಗಳಿನ್ನೂ ಈಡೇರಿಲ್ಲ, ಬಿಜೆಪಿಗೆ ಕಠಿಣ ಸ್ಥಿತಿ ಎದುರಾಗಲಿದೆ ಎಂದ ರೈತ ನಾಯಕರು
ಹೊಸದಿಲ್ಲಿ, ಜ.9: ಚುನಾವಣಾ ಆಯೋಗವು ಪಂಜಾಬ್ ಮತ್ತು ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ಚುನಾವಣಾ ದಿನಾಂಕಗಳನ್ನು ಘೋಷಿಸಿರುವ ಹಿನ್ನೆಲೆಯಲ್ಲಿ ರೈತ ನಾಯಕರು,ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ)ಗೆ ಕಾನೂನು ಖಾತರಿ ಮತ್ತು ಕೇಂದ್ರ ಸಂಪುಟದಿಂದ ಸಚಿವ ಅಜಯ್ ಮಿಶ್ರಾ ಅವರ ಉಚ್ಚಾಟನೆಯ ಬೇಡಿಕೆಗಳನ್ನು ಕೇಂದ್ರವು ಇನ್ನೂ ಈಡೇರಿಸಿಲ್ಲ,ಹೀಗಾಗಿ ಚುನಾವಣೆಯಲ್ಲಿ ಬಿಜೆಪಿ ಕಠಿಣ ಸ್ಥಿತಿಯನ್ನು ಎದುರಿಸಬೇಕಿದೆ ಎಂದು ಹೇಳಿದ್ದಾರೆ.
ಬಾಕಿಯಿರುವ ಬೇಡಿಕೆಗಳ ಪ್ರಗತಿ ಪರಿಶೀಲನೆ ಮತ್ತು ಭವಿಷ್ಯದ ಕ್ರಮದ ಬಗ್ಗೆ ನಿರ್ಧಾರವನ್ನು ಕೈಗೊಳ್ಳಲು 44 ರೈತ ಸಂಘಟನೆಗಳ ಒಕ್ಕೂಟವಾಗಿರುವ ಸಂಯುಕ್ತ ಕಿಸಾನ ಮೋರ್ಚಾ (ಎಸ್ಕೆಎಂ) ಜ.15ರಂದು ಸಭೆ ಸೇರಲಿದೆ ಎಂದು ಅವರು ತಿಳಿಸಿದರು.
ರೈತರ ಆಂದೋಲನದ ಸಂದರ್ಭ ಬಿಜೆಪಿ ಜನರ ಒಲವನ್ನು ಕಳೆದುಕೊಂಡಿದೆ,ಹೀಗಾಗಿ ಪಂಜಾಬ ಮತ್ತು ಉ.ಪ್ರದೇಶಗಳಂತಹ ಕೃಷಿ ಪ್ರಧಾನ ರಾಜ್ಯಗಳಲ್ಲಿ ಬಿಜೆಪಿಗೆ ಚುನಾವಣಾ ಹೋರಾಟ ಕಷ್ಟವಾಗಲಿದೆ ಎಂದು ರೈತ ನಾಯಕ ಹಾಗೂ ಎಸ್ಕೆಎಂ ಸದಸ್ಯ ಅಭಿಮನ್ಯು ಸಿಂಗ್ ಕೋಹರ್ ಹೇಳಿದರು.
ಚುನಾವಣಾ ಆಯೋಗವು ಚುನಾವಣಾ ದಿನಾಂಕಗಳನ್ನು ಪ್ರಕಟಿಸಿರುವುದರಿಂದ ಯಾವುದೇ ಹೊಸ ಕಾರ್ಯವನ್ನು ಮಾಡುವಂತಿಲ್ಲ ಮತ್ತು ರೈತರ ಕೆಲವು ಪ್ರಮುಖ ಬೇಡಿಕೆಗಳು ಈಗಲೂ ಬಾಕಿಯಿವೆ ಎಂದು ಹೇಳಿದ ಅವರು,ಪ್ರತಿಭಟನೆಯ ಸಂದರ್ಭ ರೈತರ ವಿರುದ್ಧ ದಾಖಲಾದ ಪ್ರಕರಣಗಳನ್ನು ಹಿಂದೆಗೆದುಕೊಳ್ಳುವುದಾಗಿ ಪಂಜಾಬ ಸರಕಾರವು ಈಗಾಗಲೇ ಪ್ರಕಟಿಸಿದೆ. ಹರ್ಯಾಣ ಸರಕಾರವೂ 2021,ಡಿ.23ರಂದು ಈ ಸಂಬಂಧ ಆದೇಶವನ್ನು ಹೊರಡಿಸಿದೆ ಎಂದರು.
ರೈತರ ಪ್ರತಿಭಟನೆಯು ಪರಿಣಾಮವನ್ನು ಬೀರಿದೆ ಮತ್ತು ಅವರ ಸಮಸ್ಯೆಗಳು ಚುನಾವಣೆಗಳಲ್ಲಿ, ವಿಶೇಷವಾಗಿ ಪಂಜಾಬ್ ಮತ್ತು ಉ.ಪ್ರದೇಶಗಳಲ್ಲಿ ನಿರ್ಣಾಯಕವಾಗಿರಲಿವೆ ಎಂದು ಹೇಳಿರುವ ಬಿಕೆಯು,ಎಂಎಸ್ಪಿ ಮತ್ತು ಕೇಂದ್ರ ಸಚಿವ ಅಜಯ ಮಿಶ್ರಾ ಉಚ್ಚಾಟನೆಯ ವಿಷಯಗಳು ಚುನಾವಣೆಗಳಲ್ಲಿ ಬಿಜೆಪಿಯನ್ನು ಹಳ್ಳ ಹಿಡಿಸಲಿವೆ ಎಂದು ಹೇಳಿದೆ. ಮಿಶ್ರಾರ ಪುತ್ರ ಆಶಿಷ್ ಮಿಶ್ರಾ ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ.
ಕೇಂದ್ರವು ಹೇಗೆ ಕಾರ್ಯ ನಿರ್ವಹಿಸಬೇಕೋ ಹಾಗೆ ಮಾಡುತ್ತಿಲ್ಲ,ಲಖಿಂಪುರ ಖೇರಿ ಪ್ರಕರಣದಲ್ಲಿಯೂ ಅದು ಇದೇ ರೀತಿ ನಡೆದುಕೊಂಡಿದೆ ಎಂದು ಆರೋಪಿಸಿದ ಬಿಕೆಯು ವಕ್ತಾರ ಸೌರಭ ಉಪಾಧ್ಯಾಯ ಅವರು,ಕೇಂದ್ರವು ಮಿಶ್ರಾರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕಿತ್ತು. ತಾರತಮ್ಯವು ಸ್ಪಷ್ಟವಾಗಿದೆ. ಎಂಎಸ್ಪಿ ಇನ್ನೊಂದು ಪ್ರಮುಖ ವಿಷಯವಾಗಿದ್ದು,ಅದು ರಾಜ್ಯಗಳಲ್ಲಿ ಚುನಾವಣೆಗಳ ಮೇಲೆ ಪರಿಣಾಮವನ್ನು ಬೀರಲಿದೆ. ಉ.ಪ್ರದೇಶ ಮತ್ತು ಪಂಜಾಬ್ ಗಳಲ್ಲಿ ಅದು ಖಂಡಿತ ಪರಿಣಾಮವನ್ನುಂಟು ಮಾಡಲಿದೆ. ಸರಕಾರವು ರೈತರ ಬೇಡಿಕೆಗಳನ್ನು ಒಪ್ಪಿಕೊಂಡರೆ ಮಾತ್ರ ಎಂಎಸ್ಪಿಗೆ ಕಾನೂನು ಖಾತರಿ ನೀಡುವುದರಿಂದ ಅದಕ್ಕೆ ಲಾಭವಾಗಲಿದೆ. ಮರೆತುಹೋಗಿದ್ದ ರೈತರು ಕೇಂದ್ರಕ್ಕೆ ದೊಡ್ಡ ಸಮಸ್ಯೆಯಾಗಿದ್ದಾರೆ ಮತ್ತು ದಿಲ್ಲಿಯ ಗಡಿಗಳಲ್ಲಿ ರೈತರ ಪ್ರತಿಭಟನೆಯಿಂದಾಗಿ ಮಾತ್ರ ಇದು ಸಾಧ್ಯವಾಗಿದೆ ಎಂದರು.