ಪಂಚರಾಜ್ಯ ಚುನಾವಣೆಗಳು: ದ್ವೇಷಭಾಷಣ, ಸುಳ್ಳುಸುದ್ದಿಗಳ ವಿರುದ್ಧ ಕ್ರಮ ಕೈಗೊಳ್ಳಲಿರುವ ಚು.ಆಯೋಗ

Update: 2022-01-09 17:51 GMT

ಹೊಸದಿಲ್ಲಿ, ಜ.9: ದ್ವೇಷಭಾಷಣಗಳ ಕುರಿತು ರಾಜಕೀಯ ಪಕ್ಷಗಳಿಗೆ ಎಚ್ಚರಿಕೆಯನ್ನು ನೀಡಿರುವ ಚುನಾವಣಾ ಆಯೋಗವು, ಉ.ಪ್ರದೇಶ, ಉತ್ತರಾಖಂಡ, ಪಂಜಾಬ್, ಮಣಿಪುರ ಮತ್ತು ಗೋವಾ ಸೇರಿದಂತೆ ಐದು ರಾಜ್ಯಗಳಲ್ಲಿ ನ್ಯಾಯಯುತ ವಿಧಾನಸಭಾ ಚುನಾವಣೆಗಳು ನಡೆಯುವಂತಾಗಲು ತಾನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಗಳ ಮೇಲೆ ನಿಕಟ ನಿಗಾಯಿರಿಸುವುದಾಗಿ ತಿಳಿಸಿದೆ. ಚುನಾವಣೆಗಳು ಫೆ.10 ಮತ್ತು ಮಾ.7ರ ನಡುವೆ ನಡೆಯಲಿವೆ.

ತಮ್ಮ ಬೆಂಬಲಿಗರು ದ್ವೇಷಭಾಷಣಗಳಲ್ಲಿ ಮತ್ತು ಸುಳ್ಳುಸುದ್ದಿಗಳ ಪ್ರಸಾರದಲ್ಲಿ ತೊಡಗದಂತೆ ರಾಜಕೀಯ ಪಕ್ಷಗಳು ಮತ್ತು ಅವುಗಳ ಅಭ್ಯರ್ಥಿಗಳು ನೋಡಿಕೊಳ್ಳಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಮುಖ್ಯ ಚುನಾವಣಾ ಆಯುಕ್ತ ಸುಶೀಲಚಂದ್ರ ಅವರು,ಚುನಾವಣಾ ವಾತಾವರಣವು ಕಲುಷಿತಗೊಳ್ಳದಂತೆ ನೋಡಿಕೊಳ್ಳಲು ಸಾಮಾಜಿಕ ಮಾಧ್ಯಮಗಳಲ್ಲಿನ ಪೋಸ್ಟ್ ಗಳ ಮೇಲೆ ಕಟ್ಟುನಿಟ್ಟಿನ ನಿಗಾಯಿರಿಸಲಾಗುತ್ತಿದೆ ಎಂದು ಹೇಳಿದರು.

ಇತ್ತೀಚಿಗೆ ಹರಿದ್ವಾರದಲ್ಲಿ ನಡೆದ ಧರ್ಮಸಂಸದ್ನಲ್ಲಿ ಮಾಡಲಾಗಿದ್ದ ದ್ವೇಷಭಾಷಣಗಳ ಕುರಿತು ವಿವಾದಗಳ ಹಿನ್ನೆಲೆಯಲ್ಲಿ ಸುಶೀಲಚಂದ್ರ ಅವರ ಈ ಎಚ್ಚರಿಕೆ ಹೊರಬಿದ್ದಿದೆ.
ಚುನಾವಣೆ ಸಂದರ್ಭದಲ್ಲಿ ಎಲ್ಲ ಪ್ರಮುಖ ರಾಷ್ಟ್ರೀಯ ಮತ್ತು ಪ್ರಾದೇಶಿಕ ಸುದ್ದಿವಾಹಿನಿಗಳಲ್ಲಿ ಚುನಾವಣೆಗೆ ಸಂಬಂಧಿಸಿದ ಎಲ್ಲ ಸುದ್ದಿಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುವುದು ಎಂದು ತಿಳಿಸಿದ ಸುಶೀಲ್ ಚಂದ್ರ,ಯಾವುದೇ ಅಹಿತಕರ ಘಟನೆ ಅಥವಾ ಯಾವುದೇ ಕಾನೂನು/ನಿಯಮದ ಉಲ್ಲಂಘನೆ ಗಮನಕ್ಕೆ ಬಂದರೆ ತಕ್ಷಣ ಕ್ರಮವನ್ನು ಕೈಗೊಳ್ಳಲಾಗುವುದು. ನಿಗಾ ವರದಿಗಳನ್ನು ಸಂಬಂಧಿಸಿದ ಮುಖ್ಯ ಚುನಾವಣಾಧಿಕಾರಿಗಳಿಗೂ ಕಳುಹಿಸಲಾಗುವುದು. ಅವರು ಪ್ರತಿಯೊಂದನ್ನೂ ಪರಿಶೀಲಿಸಿ ಕ್ರಮಾನುಷ್ಠಾನ/ಸ್ಥಿತಿಗತಿ ವರದಿಯನ್ನು ಸಲ್ಲಿಸುತ್ತಾರೆ ಎಂದರು.

ಸಾಮಾಜಿಕ ಮಾಧ್ಯಮಗಳ ದುರುಪಯೋಗದ ಘಟನೆಗಳು ಮತ್ತು ಪಾವತಿ ಸುದ್ದಿಗಳ ಪಿಡುಗು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಆಯೋಗದ ಬಲವಾದ ಮನವೊಲಿಕೆಯ ಪರಿಣಾಮವಾಗಿ ಪ್ರಮುಖ ಸಾಮಾಜಿಕ ಮಾಧ್ಯಮ ವೇದಿಕೆಗಳು 2019,ಮಾರ್ಚ್ ನಲ್ಲಿ ತಾವು ರೂಪಿಸಿದ್ದ ಸ್ವಯಂಪ್ರೇರಿತ ನೀತಿ ಸಂಹಿತೆಯನ್ನು ಪಾಲಿಸಲು ಒಪ್ಪಿಕೊಂಡಿವೆ. ಇದು ಈ ಚುನಾವಣೆಗಳಿಗೆ ಮತ್ತು ಇತರ ಚುನಾವಣೆಗಳಿಗೂ ಅನ್ವಯಿಸುತ್ತದೆ ಎಂದು ಚುನಾವಣಾ ಆಯೋಗವು ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News