ಗರ್ಭಿಣಿಯರು ಮತ್ತು ವಿಕಲಾಂಗ ಸರಕಾರಿ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಬಹುದು: ಸಚಿವ ಜಿತೇಂದ್ರ ಸಿಂಗ್
ಹೊಸದಿಲ್ಲಿ, ಜ.9: ಕೋವಿಡ್ ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರಿ ಇಲಾಖೆಗಳ ಗರ್ಭಿಣಿಯರು ಮತ್ತು ಅಂಗವಿಕಲ ಉದ್ಯೋಗಿಗಳಿಗೆ ಕಚೇರಿಗೆ ಹಾಜರಾಗುವುದರಿಂದ ವಿನಾಯಿತಿ ನೀಡಲಾಗಿದೆ ಎಂದು ಕೇಂದ್ರ ಸಹಾಯಕ ಸಿಬ್ಬಂದಿ ಸಚಿವ ಜಿತೇಂದ್ರ ಸಿಂಗ್ ಅವರು ರವಿವಾರ ಇಲ್ಲಿ ತಿಳಿಸಿದರು. ಆದಾಗ್ಯೂ ಅವರು ಕರ್ತವ್ಯಕ್ಕೆ ಲಭ್ಯರಿರಬೇಕು ಮತ್ತು ಮನೆಯಿಂದಲೇ ಕೆಲಸ ಮಾಡಬೇಕಾಗುತ್ತದೆ ಎಂದರು.
ಕೋವಿಡ್ ಕಂಟೈನ್ಮೆಂಟ್ ವಲಯದಲ್ಲಿ ವಾಸವಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಕಂಟೈನ್ಮೆಂಟ್ ವಲಯವನ್ನು ಡಿ-ನೋಟಿಫೈ ಮಾಡುವವರೆಗೆ ಕಚೇರಿಗೆ ಬರುವುದರಿಂದ ವಿನಾಯಿತಿಯನ್ನು ನೀಡಲಾಗಿದೆ ಎಂದು ಸಿಂಗ್ ತಿಳಿಸಿದರು.
ಅಧೀನ ಕಾರ್ಯದರ್ಶಿಗಿಂತ ಕೆಳಗಿನ ಸರಕಾರಿ ನೌಕರರ ಭೌತಿಕ ಹಾಜರಾತಿಯನ್ನು ಶೇ.50ಕ್ಕೆ ನಿರ್ಬಂಧಿಸಲಾಗಿದೆ ಮತ್ತು ಉಳಿದ ಶೇ.50ರಷ್ಟು ನೌಕರರು ಮನೆಯಿಂದಲೇ ಕೆಲಸ ಮಾಡಲಿದ್ದಾರೆ. ಸಂಬಂಧಿಸಿದ ಎಲ್ಲ ಇಲಾಖೆಗಳು ನೂತನ ನಿಯಮಗಳಿಗೆ ಅನುಗುಣವಾಗಿ ರೋಸ್ಟರ್ ಗಳನ್ನು ಸಿದ್ಧಪಡಿಸಲಿವೆ ಎಂದರು.
ಆದಾಗ್ಯೂ ಕಚೇರಿಗೆ ಹಾಜರಾಗದೆ ಮನೆಯಿಂದಲೇ ಕೆಲಸ ಮಾಡುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಎಲ್ಲ ಸಮಯದಲ್ಲಿಯೂ ದೂರವಾಣಿ ಮತ್ತು ಇತರ ವಿದ್ಯುನ್ಮಾನ ಸಂವಹನ ವಿಧಾನಗಳಲ್ಲಿ ಲಭ್ಯರಿರುತ್ತಾರೆ ಎಂದು ಸಿಂಗ್ ತಿಳಿಸಿದರು.
ಕೊರೋನ ವೈರಸ್ ತ್ವರಿತವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಅಧಿಕೃತ ಸಭೆಗಳನ್ನು ಸಾಧ್ಯವಾದಷ್ಟು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕವೇ ನಡೆಸುವಂತೆ ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯವು ಆದೇಶವನ್ನು ಹೊರಡಿಸಿದೆ. ಅತ್ಯಂತ ಅಗತ್ಯವಲ್ಲದಿದ್ದರೆ ಸಂದರ್ಶಕರೊಂದಿಗೆ ವೈಯಕ್ತಿಕ ಭೇಟಿಯನ್ನು ತಪ್ಪಿಸಬೇಕು ಎಂದು ಅವರು ಹೇಳಿದರು.
ಕಚೇರಿ ಆವರಣಗಳಲ್ಲಿ ದಟ್ಟಣೆಯನ್ನು ತಪ್ಪಿಸಲು ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಬೆಳಿಗ್ಗೆ 9:30ರಿಂದ ಸಂಜೆ 5:30ರವರೆಗೆ ಮತ್ತು ಬೆಳಿಗ್ಗೆ 10 ಗಂಟೆಯಿಂದ ಸಂಜೆ 6ರವರೆಗೆ,ಹೀಗೆ ಎರಡು ಪ್ರತ್ಯೇಕ ಕೆಲಸದ ಅವಧಿಗಳನ್ನು ನಿಗದಿಗೊಳಿಸಲಾಗಿದೆ. ಕೈಗಳನ್ನು ಪದೇ ಪದೇ ತೊಳೆದುಕೊಳ್ಳುವುದು,ಸ್ಯಾನಿಟೈಜೇಷನ್, ಮಾಸ್ಕ್ ಅಥವಾ ಮುಖ ಕವಚ ಧರಿಸುವುದು ಮತ್ತು ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವುದು ಸೇರಿದಂತೆ ಕೋವಿಡ್ ಶಿಷ್ಟಾಚಾರಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಸೂಚಿಸಲಾಗಿದೆ.
ಕೆಲಸದ ಸ್ಥಳದಲ್ಲಿ,ವಿಶೇಷವಾಗಿ ಆಗಾಗ್ಗೆ ಸ್ಪರ್ಶಿಸುವ ಮೇಲ್ಮೈಗಳ ಸ್ವಚ್ಛತೆ ಮತ್ತು ನಿರ್ಮಲೀಕರಣವನ್ನು ಖಚಿತಪಡಿಸಿಕೊಳ್ಳುವುದೂ ಅಗತ್ಯವಾಗಿದೆ ಎಂದು ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ. ನೂತನ ಮಾರ್ಗಸೂಚಿಗಳು ಜ.31ರವರೆಗೆ ಜಾರಿಯಲ್ಲಿರುತ್ತವೆ. ಆಗಾಗ್ಗೆ ನಿಯಮಿತವಾಗಿ ಪುನರ್ಪರಿಶೀಲನೆಯನ್ನು ನಡೆಸಲಾಗುತ್ತದೆ ಮತ್ತು ಪರಿಸ್ಥಿತಿಯನ್ನು ಅವಲಂಬಿಸಿ ಮಾರ್ಗಸೂಚಿಗಳನ್ನು ಪರಿಷ್ಕರಿಸಲಾಗುವುದು ಎಂದೂ ಸಿಂಗ್ ತಿಳಿಸಿದರು.