'ವೈಯಕ್ತಿಕ ಕಾರಣ' ನೀಡಿ ಬಿಹಾರ ಬಿಜೆಪಿ ಶಾಸಕಿ ದಿಢೀರ್ ರಾಜೀನಾಮೆ

Update: 2022-01-10 02:10 GMT
 ಶಾಸಕಿ ರಶ್ಮಿ ವರ್ಮಾ

ಪಾಟ್ನಾ: ನರ್ಕತಿಯಾಗಂಜ್ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಶಾಸಕಿ ರಶ್ಮಿ ವರ್ಮಾ, "ವೈಯಕ್ತಿಕ ಕಾರಣ" ದಿಂದ ರಾಜ್ಯ ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಆದರೆ ವಿವಾದ ಇತ್ಯರ್ಥಪಡಿಸಲಾಗಿದ್ದು, ವರ್ಮಾ ತಮ್ಮ ರಾಜೀನಾಮೆ ವಾಪಾಸು ಪಡೆಯಲಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಮತ್ತು ಬೆಟ್ಟಿಯಾ ಸಂಸದ ಡಾ.ಸಂಜಯ್ ಜೈಸ್ವಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಿಹಾರ ವಿಧಾನಸಭಾ ಸ್ಪೀಕರ್ ವಿಜಯ್ ಕುಮಾರ್ ಸಿನ್ಹಾ ಅವರ ಕಚೇರಿಗೆ ವರ್ಮಾ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ವಿಧಾನಸಭಾ ಆವರಣವನ್ನು ಕೋವಿಡ್-19 ನಿರ್ಬಂಧಗಳ ಹಿನ್ನೆಲೆಯಲ್ಲಿ ಮುಚ್ಚಲಾಗಿದೆ. ವರ್ಮಾ ಅವರ ರಾಜೀನಾಮೆಯನ್ನು ಸ್ಪೀಕರ್ ಇನ್ನೂ ಸ್ವೀಕರಿಸಿಲ್ಲ ಎಂದು ಅಸೆಂಬ್ಲಿ ಸೆಕ್ರೆಟ್ರಿಯೇಟ್ ಮೂಲಗಳು ಸ್ಪಷ್ಟಪಡಿಸಿವೆ.

ಸದನದ ಸದಸ್ಯತ್ವ ತೊರೆಯಲು ವೈಯಕ್ತಿಕ ಕಾರಣವನ್ನು ಉಲ್ಲೇಖಿಸಿ ಒಂದು ವಾಕ್ಯದ ರಾಜೀನಾಮೆ ಪತ್ರವನ್ನು ವರ್ಮಾ ಸಲ್ಲಿಸಿದ್ದಾರೆ. ಇದಕ್ಕೂ ಮುನ್ನ ಅವರು ರಾಜೀನಾಮೆ ನಿರ್ಧಾರವನ್ನು ಸ್ಪೀಕರ್‌ಗೆ ಮೌಖಿಕವಾಗಿ ತಿಳಿಸಿದ್ದರು.

"ಕೆಲ ಕೌಟುಂಬಿಕ ಸಮಸ್ಯೆಗಳಿಂದಾಗಿ ಅವರು ಶಾಸಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ಜತೆ ನಾನು ಮಾತನಾಡಿದ್ದು, ಅವರು ಬೆಟ್ಟಿಯಾಗೆ ಆಗಮಿಸುತ್ತಿದ್ದಾರೆ. ಈ ರಾಜೀನಾಮೆಯ ಹಿಂದೆ ಯಾವುದೇ ರಾಜಕೀಯ ಅರ್ಥ ಇಲ್ಲ" ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ಶಾಸಕಿಯ ಸಹೋದರ ರಾಯ್ ಅನೂಪ್ ಪ್ರಸಾದ್, ಉತ್ತರ ಪ್ರದೇಶದ ಶಿಕ್ಷಕರ ಅರ್ಹತಾ ಪರೀಕ್ಷೆ (ಯುಪಿಟಿಇಟಿ) ಪ್ರಶ್ನೆಪತ್ರಿಕೆ ಹಗರಣದಲ್ಲಿ ಸಿಲುಕಿಕೊಂಡಿದ್ದಾನೆ. ಪ್ರಸಾದ್‌ನನ್ನು ಜನವರಿ 4ರಂದು ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ ಸಿಬ್ಬಂದಿ ಬಂಧಿಸಿದ್ದರು.

ವರ್ಮಾ ರಾಜೀನಾಮೆ ರಾಜಕೀಯ ವಲಯದಲ್ಲಿ ಊಹಾಪೋಹಕ್ಕೆ ಕಾರಣವಾಗಿದೆ. 2020ರ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ಸೇರಿದ್ದ ಇವರಿಗೆ ಪಶ್ಚಿಮ ಚಂಪರಣ್ ಜಿಲ್ಲೆಯ ನರ್ಕತಿಯಾಗಂಜ್‌ನಿಂದ ಟಿಕೆಟ್ ನೀಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News