ಆರೋಗ್ಯ ಸಿಬ್ಬಂದಿ, ಸಹ ಅಸ್ವಸ್ಥತೆಯ ಹಿರಿಯ ನಾಗರಿಕರಿಗೆ ಇಂದಿನಿಂದ ಬೂಸ್ಟರ್ ಡೋಸ್

Update: 2022-01-10 03:31 GMT

ಹೊಸದಿಲ್ಲಿ: ಅತ್ಯಧಿಕ ಅಪಾಯ ಸಾಧ್ಯತೆಯ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಮತ್ತು ಸಹ ಅಸ್ವಸ್ಥತೆ ಹೊಂದಿರುವ ಹಿರಿಯ ನಾಗರಿಕರಿಗೆ ಕೋವಿಡ್-19 ಬೂಸ್ಟರ್ ಡೋಸ್ ನೀಡುವ ಕಾರ್ಯಕ್ಕೆ ಇಂದು ಚಾಲನೆ ಸಿಗಲಿದೆ. ಒಂಬತ್ತು ತಿಂಗಳ ಹಿಂದೆ ಎರಡನೇ ಡೋಸ್ ಪಡೆದ ಈ ವರ್ಗದವರು ಯಾವುದೇ ಲಸಿಕಾ ಕೇಂದ್ರಕ್ಕೆ ತೆರಳಿ ಮುಂಜಾಗ್ರತಾ ಕ್ರಮವಾಗಿ ಮೂರನೇ ಡೋಸ್ ಪಡೆಯಬಹುದಾಗಿದೆ. ಸರ್ಕಾರದ ಕೋವಿನ್ ಪೋರ್ಟೆಲ್ ಮೂಲಕ ಆನ್‌ಲೈನ್‌ನಲ್ಲೂ ತಮ್ಮ ಲಸಿಕೆ ನೀಡಿಕೆ ಸ್ಲಾಟ್‌ಗಳನ್ನು ಕಾಯ್ದಿರಿಸಬಹುದಾಗಿದೆ.

"ಮುಂಜಾಗ್ರತಾ ಡೋಸ್‌ಗೆ ಆನ್‌ಲೈನ್‌ನಲ್ಲಿ ಅಪಾಯಿಂಟ್‌ಮೆಂಟ್ ನಿಗದಿಪಡಿಸಿಕೊಳ್ಳುವ ಸೌಲಭ್ಯ ಕೋವಿನ್ ಸಿಸ್ಟಮ್‌ನಲ್ಲಿ ಶನಿವಾರ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಯಾವುದೇ ಅನಾನುಕೂತೆಯಾಗದಂತೆ ತಡೆಯುವ ಸಲುವಾಗಿ ಇದನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತ" ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. "ನೇರವಾಗಿ ಲಸಿಕಾ ಕೇಂದ್ರಕ್ಕೆ ತೆರಳಿ ಲಸಿಕೆ ಪಡೆಯುವ ಅವಕಾಶವೂ ಇದೆ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಅರ್ಹ ಫಲಾನುಭವಿಗಳು ಮೂರನೇ ಡೋಸ್‌ಗಾಗಿ ಮತ್ತೆ ಕೋವಿನ್ ಪ್ಲಾಟ್‌ಫಾರಂನಲ್ಲಿ ನೋಂದಾಯಿಸಿಕೊಳ್ಳುವ ಅಗತ್ಯವಿಲ್ಲ. ನೇರವಾಗಿ ಅವರು ಮೂರನೇ ಡೋಸ್ ಕಾಯ್ದಿರಿಸಿಕೊಳ್ಳಬಹುದಾಗಿದೆ ಎಂದು ಹೇಳಿದ್ದಾರೆ.

ಈ ಸಂಬಂಧ ಕೇಂದ್ರ ಸರ್ಕಾರ ಈಗಾಗಲೇ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಈ ಪ್ರಕ್ರಿಯೆಯನ್ನು ಸುಲಲಿತವಾಗಿ ಅನುಷ್ಠಾನಗೊಳಿಸವ ಬಗ್ಗೆ ಹಲವು ಸಭೆಗಳನ್ನು ನಡೆಸಿದೆ ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ. ಮೂರನೇ ಡೋಸ್ ಹಿಂದಿನ ಎರಡು ಡೋಸ್‌ಗಳಂತೆಯೇ ಇರುತ್ತದೆ ಎಂದು ನೀತಿ ಆಯೋಗದ ಸದಸ್ಯ ವಿ.ಕೆ.ಪಾಲ್ ಹೇಳಿದ್ದಾರೆ. ಈ ಮುನ್ನ ಕೊವ್ಯಾಕ್ಸಿನ್ ಲಸಿಕೆ ಪಡೆದಿದ್ದರೆ ಮೂರನೇ ಡೋಸ್‌ನಲ್ಲೂ ಅದನ್ನೇ ಪಡೆಯಲಿದ್ದಾರೆ. ಮೊದಲ ಎರಡು ಡೋಸ್‌ಗಳಲ್ಲಿ ಕೋವಿಶೀಲ್ಡ್ ಪಡೆದಿದ್ದರೆ ಮೂರನೇ ಡೋಸ್ ಕೂಡಾ ಅದೇ ಆಗಿರುತ್ತದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News