ಐ.ಎಸ್‍.ಪಿ.ಆರ್.ಎಲ್. ಯೋಜನೆ: ಸಮಸ್ಯೆ ಬಗೆಹರಿಸಲು ಮನವಿ

Update: 2022-01-11 15:49 GMT

ಕಾಪು:ಕಾಪುವಿನ ಮಜೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾದೂರಿನಲ್ಲಿ ಕಾರ್ಯಾಚರಿಸುತ್ತಿರುವ ಐಎಸ್‍ಪಿಆರ್‍ಎಲ್ ಯೋಜನೆಯ ಸಮಸ್ಯೆಗಳನ್ನು ಬಗೆಹರಿಸುವಂತೆ ಭೂಸಂತ್ರಸ್ತರ ಪರವಾಗಿ ಕಾಪು ಶಾಸಕ ಲಾಲಾಜಿ ಮೆಂಂಡನ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಅವರಿಗೆ ಮನವಿ ಸಲ್ಲಿಸಲಾಯಿತು. 

ಮಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾದೂರು ಗ್ರಾಮದ ಐಎಸ್‍ಪಿಆರ್‍ಎಲ್ 2 ನೇ ಹಂತದ ಯೋಜನೆಯಲ್ಲಿ 210 ಎಕ್ರೆ ಭೂಸ್ವಾಧೀನ ಪ್ರಕ್ರಿಯೆ ಆರಂಭಗೊಂಡಿದ್ದು, ಕಳೆದ ಕೆಳ ದಿನಗಳ ಹಿಂದೆ ಕೆಐಎಡಿಬಿ ಅಧಿಕಾರಿಗಳು ಸ್ಥಳೀಯ ಆಡಳಿತದ ಗಮನಕ್ಕೆ ತಾರದೆ ಭೂ ಸಂತ್ರಸ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಾಏಕಿ ಜೆಎಮ್‍ಸಿ ಸರ್ವೆಗೆ ಮುಂದಾಗಿದೆ. ಇದನ್ನು ಸ್ಥಳೀಯರು ಸರ್ವೆಗೆ ತಡೆಯೊಡ್ಡಿ ಶಾಸಕ ಲಾಲಾಜಿ ಆರ್ ಮೆಂಡನ್ ರವರ ಗಮನಕ್ಕೆ ತಂದಿದ್ದರು.

ಈ ಬಗ್ಗೆ ಸ್ಥಳೀಯ ಗ್ರಾಮಸ್ಥರನ್ನು ಗ್ರಾಮ ಪಂಚಾಯತ್ ಸದಸ್ಯರುಗಳನ್ನು ಹಾಗೂ ಹೋರಾಟ ಸಮಿತಿಗೆ ಪದಾಧಿಕಾರಿಗಳನ್ನು ಒಗ್ಗೂಡಿಸಿಕೊಂಡು  ಜಿಲ್ಲಾಧಿಕಾರಿ ಕಛೇರಿಯಲ್ಲಿ ಭೂಮಿಯ ದರ ನಿಗದಿಯಾಗದೆ ಮತ್ತು ಪುನರ್ವಸತಿ ಮತ್ತು ಪುನರ್ ನಿರ್ಮಾಣದ ಬಗ್ಗೆ ಹಾಗೂ ಉದ್ಯೋಗಾವಕಾಶದ ಬಗ್ಗೆ  ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಂಬಂಧಪಟ್ಟ ಇಲಾಖೆಯ ಉಪಸ್ಥಿತಿಯಲ್ಲಿ ಭೂಸಂತ್ರಸ್ತರನ್ನು ವಿಶ್ವಾಸಕ್ಕೆ ಪಡೆದು ನ್ಯಾಯಯುತ ಪರ್ಯಾಯ ಘೋಷಣೆ ಮಾಡದೆ ಯಾವುದೇ ಸರ್ವೆ ನಡೆಸಬಾರದೆಂದು  ಜಿಲ್ಲಾಧಿಕಾರಿಗಳಿಗೆ ಆಗ್ರಹಿಸಿ ಮನವಿ ಪತ್ರ ನೀಡಲಾಯಿತು.

ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಧುಸೂಧನ್ ಸಾಲ್ಯಾನ್ , ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಶಿಲ್ಪಾ ಜಿ ಸುವರ್ಣ, ಕಾಪು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಶಶಿಪ್ರಭಾ ಶೆಟ್ಟಿ, ಜನಜಾಗೃತಿ ಸಮಿತಿ ಅಧ್ಯಕ್ಷರಾದ ಅರುಣ್ ಶೆಟ್ಟಿ ಪಾದೂರು, ಜನಹಿತ ಸಮಿತಿಯ ಅಧ್ಯಕ್ಷ ಸುರೇಂದ್ರ ಕುಮಾರ್ ಜೈನ್, ಪದಾಧಿಕಾರಿಗಳು, ಮತ್ತು ಭೂಸಂತ್ರಸ್ತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News