ತಾಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲು ಸಚಿವ ಅಂಗಾರ ಸೂಚನೆ

Update: 2022-01-12 16:19 GMT

ಮಂಗಳೂರು, ಜ.12: ಕೋವಿಡ್ ಹಾಗೂ ಅದರ ರೂಪಾಂತರಿ ಒಮೈಕ್ರಾನ್ ಸೋಂಕಿನ ಚಿಕಿತ್ಸೆಗೆ ಜಿಲ್ಲೆಯ ತಾಲೂಕು ಆಸ್ಪತ್ರೆಗಳು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳನ್ನು ಸನ್ನದ್ದ ಸ್ಥಿತಿಯಲ್ಲಿಟ್ಟುಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಸೂಚಿಸಿದರು.

ಕೋವಿಡ್ -19 ಸೋಂಕು ಮತ್ತಿತರ ವಿಷಯಗಳಿಗೆ ಸಂಬಂಧಿಸಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತಾಲೂಕು ಆಸ್ಪತ್ರೆಗಳು ಸನ್ನದ್ದ ಸ್ಥಿತಿಯಲ್ಲಿಡದಿದ್ದರೆ ಚಿಕಿತ್ಸೆಗೆ ವೆನ್ಲಾಕ್ ಆಸ್ಪತ್ರೆಗೆ ಹೆಚ್ಚಿನ ರೋಗಿಗಳು ಬರುವ ಸಾಧ್ಯತೆ ಇದೆ. ಇದರಿಂದ ವೆನ್ಲಾಕ್ ಆಸ್ಪತ್ರೆಯಲ್ಲಿ ಹೆಚ್ಚಿನ ಒತ್ತಡ ಬೀಳುತ್ತದೆ, ಆದ್ದರಿಂದ ತಾಲೂಕು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು, ಆರೋಗ್ಯ ಕಾರ್ಯಕರ್ತರು, ಬೆಡ್, ವೆಂಟಿಲೇಟರ್‌ಗಳು, ಆಕ್ಸಿಜನ್, ಲಿಕ್ವಿಡ್ ಆಕ್ಸಿಜನ್ ಸಹಿತ ಚಿಕಿತ್ಸೆಗೆ ಅಗತ್ಯವಿರುವ ಸಿದ್ದತೆಗಳನ್ನು ಮಾಡಿಕೊಂಡರೆ ಕೋವಿಡ್ ಹಾಗೂ ಒಮೈಕ್ರಾನ್‌ನ ಪರಿಸ್ಥಿತಿ ಎದುರಿಸಲು ಸಾಧ್ಯವಿದೆ ಎಂದು ಅಂಗಾರ ತಿಳಿಸಿದರು.

ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಮಾತನಾಡಿ ಜಿಲ್ಲೆಯಲ್ಲಿ 16 ಆಕ್ಸಿಜನ್ ಘಟಕಗಳ ಪೈಕಿ 15 ಕಾರ್ಯನಿರ್ವಹಿಸುತ್ತಿವೆ. ಅವುಗಳ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ. ಅದೇ ರೀತಿ ಖಾಸಗಿ ಆಸ್ಪತ್ರೆಗಳೂ ಚಿಕಿತ್ಸೆಗೆ ಸಿದ್ಧಗೊಂಡಿವೆ ಎಂದರು.

ಜಿಲ್ಲೆಯಲ್ಲಿ ರಿಕ್ರಿಯೇಶನ್ ಕ್ಲಬ್ಗಳನ್ನು ಬಂದ್ ಮಾಡಲಾಗುವುದು. ಅಲ್ಲಿ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ಸೇರಿದಂತೆ ಎಚ್ಚರ ವಹಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಜಿಲ್ಲೆಯ ಗ್ರಾಮಗಳಲ್ಲಿ ಡಿಸಿ ಮನ್ನಾ ಸ್ಥಳ ಲಭ್ಯವಿರುವ ಬಗ್ಗೆ ವರದಿ ನೀಡಬೇಕು ಹಾಗೂ ಆಯಾ ಗ್ರಾಮದಲ್ಲಿರುವ ಅರ್ಹ ಫಲಾನುಭವಿಗಳ ಮಾಹಿತಿಯನ್ನು ಸಿದ್ಧಪಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಅಂಗಾರ ತಿಳಿಸಿದರು.

ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಜಿಲ್ಲೆಯಲ್ಲಿ ಡಿಸಿ ಮನ್ನಾ ಸ್ಥಳಕ್ಕೆ ಅರ್ಹರಿರುವ ಪರಿಶಿಷ್ಟ ಜಾಾತಿ ಹಾಗೂ ಪರಿಶಿಷ್ಟ ಪಂಗಡದ ಫಲಾನುಭವಿಗಳನ್ನು ಗುರುತಿಸಬೇಕು, ಅವರಿಗೆ ಅಗತ್ಯವಿರುವ ಭೂಮಿಯನ್ನು ಮಂಜೂರು ಮಾಡುವ ಕ್ರಮವನ್ನು ಸಂಬಂಧಿಸಿದ ಕಂದಾಯ ಇಲಾಖೆ ಅಧಿಕಾರಿಗಳು ವಹಿಸುವಂತೆ ಸೂಚಿಸಿದರು.

ಸಭೆಯಲ್ಲಿ ಶಾಸಕ ಯು.ಟಿ.ಖಾದರ್, ಜಿಲ್ಲಾ ಎಸ್ಪಿ ಋಷಿಕೇಶ್ ಭಗವಾನ್ ಸೋನಾವಣೆ, ಮಂಗಳೂರು ಮನಪಾ ಆಯುಕ್ತ ಅಕ್ಷಿ ಶ್ರೀಧರ್, ಜಿಪಂ ಕಾರ್ಯದರ್ಶಿ ಆನಂದ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲೆಯಲ್ಲಿ ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ಇಲ್ಲ: ಡಿಸಿ

ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚು ಕಂಡುಬಂದ ಶಾಲೆಗಳನ್ನು ಮಾತ್ರ ತಾತ್ಕಾಲಿಕವಾಗಿ ಮುಚ್ಚಲಾಗುವುದು, ಸದ್ಯ ಶಾಲೆಗಳನ್ನು ಮುಚ್ಚುವ ಸಂದಿಗ್ಧ ಪರಿಸ್ಥಿತಿ ಉದ್ಭವಿಸಿಲ್ಲ, ಲಘು ಪರಿಣಾಮ ಬೀರುವ ಪ್ರಕರಣಗಳ ಅಷ್ಟೇ ಕೆಲವೆಡೆ ವರದಿಯಾಗಿವೆ, ತಾಲೂಕು ಮಟ್ಟದಲ್ಲಿ ತಹಶಿಲ್ದಾರ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆಯಾ ಪ್ರದೇಶದ ವ್ಯಾಪ್ತಿಯ ಶಾಲೆಗಳ ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ಕಂಡು ಬಂದಲ್ಲಿ ತಕ್ಷಣ ವರದಿ ಮಾಡುವಂತೆ ಜಿಲ್ಲಾಧಿಕಾರಿ ತಾಕೀತು ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News