ಹತ್ಯಾಕಾಂಡಕ್ಕೆ ಪರೋಕ್ಷ ಕರೆ ನೀಡಿದ ಬ್ಯಾಂಕ್ ಅಧಿಕಾರಿ ವಿಷ್ಣು ಪ್ರಸಾದ್ ನಿಡ್ಡಾಜೆ

Update: 2022-01-12 16:51 GMT

ಮಂಗಳೂರು, ಜ.12: ಫೇಸ್ ಬುಕ್ ಪೋಸ್ಟ್ ಮೂಲಕ ಮಂಗಳೂರಿನಲ್ಲಿ ಮುಸ್ಲಿಮರ ನರಮೇಧಕ್ಕೆ ತನ್ನ ಸಂಸ್ಥೆಯ ಅಧಿಕಾರಿಯೊಬ್ಬ ಪರೋಕ್ಷ  ಕರೆ ನೀಡಿದ ಪ್ರಕರಣದಲ್ಲಿ ಸೂಕ್ತ  ಕ್ರಮಕೈಗೊಳ್ಳುವುದಾಗಿ ಫೆಡರಲ್ ಬ್ಯಾಂಕ್  ಟ್ವೀಟ್ ಮಾಡಿದೆ. 

ಸಾಲೆತ್ತೂರಿನಲ್ಲಿ ಮದುಮಗನೊಬ್ಬ ವೇಷ ಧರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆಡರಲ್ ಬ್ಯಾಂಕ್‌ನಲ್ಲಿ ಅಧಿಕಾರಿ ಎಂದು ತನ್ನ ಫೇಸ್ ಬುಕ್ ಪ್ರೊಫೈಲ್ ನಲ್ಲಿ ಹೇಳಿಕೊಂಡಿರುವ  ವಿಷ್ಣು ಪ್ರಸಾದ್ ನಿಡ್ಡಾಜೆ ಪ್ರಚೋದನಕಾರಿ ಪೋಸ್ಟ್ ಗಳನ್ನು ಹಾಕಿದ್ದರು. 

ತನ್ನ ಫೇಸ್‌ಬುಕ್ ಖಾತೆಯಲ್ಲಿ "ನಮ್ಮದು ಕೃಷ್ಣನ ತತ್ವ, ಶಿಶುಪಾಲನ ನೂರು ಪೆಟ್ಟುಗಳನ್ನು ಸಹಿಸೋದು,  ನೂರ ಒಂದನೇ ಪೆಟ್ಟಿಗೆ ಢಿಮ್ ... ಬಾಂಧವರ ಸಾವಿರ ಪೆಟ್ಟು ಸಹಿಸೋದು , ನಂತರ ಗೋಧ್ರಾ ತರದ ಒಂದು ಪೆಟ್ಟಿನಲ್ಲಿ 20 ವರ್ಷ ಗಪ್ ಚುಪ್... ಗುಜರಾತಿನ ಕೊನೆಯ ಕೋಮು ಗಲಭೆ ಯಾವಾಗ ಎಲ್ಲಿ ಹೇಗೆ ನಡೆಯಿತು ಅನ್ನೋದನ್ನ ಸ್ವಲ್ಪ ಯೋಚಿಸಿ ನೋಡಿದರೆ ಇದು ಅರ್ಥವಾದೀತು ... ಬಹುಶಃ ವಿಟ್ಲ, ಮಂಗಳೂರು ಕಡೆ ಇನ್ನೂ ಅವುಗಳ ಕೌನ್ಟ್ ಪೂರ್ತಿ ಆಗಿಲ್ಲ ಅನ್ಸುತ್ತೆ... ಬಂದೂ ಬಂದೂ ಕೆಣಕುತ್ತಿವೆ ..." ಎಂದು  ಪೋಸ್ಟ್ ಮಾಡಿದ್ದ. ಇನ್ನೊಂದು ಪೋಸ್ಟ್ ನಲ್ಲಿ " ಮದುಮಗನ ಕಾರು, ಅಂಗಡಿ, ಮನೆ ಇತ್ಯಾದಿಗಳಿಗೆ ಹಾನಿ ಮಾಡಬೇಕು ಎಂಬರ್ಥದಲ್ಲಿ ಬರೆದಿದ್ದ.

ಇದರ ವಿರುದ್ಧ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ಆರೋಪಿಯ ವಿರುದ್ಧ ಸೂಕ್ತ ಕ್ರಮ ಜರಗಿಸಬೇಕು ಎಂದು ಪಿಎಫ್‌ಐ ವಿಟ್ಲ ಠಾಣೆಗೆ ದೂರು ನೀಡಿತ್ತು.

ಈ ಮಧ್ಯೆ ಟ್ವಿಟ್ಟರ್ ಬಳಕೆದಾರರೊಬ್ಬರು ಘಟನೆಯ ಕುರಿತು ಫೆಡರಲ್ ಬ್ಯಾಂಕನ್ನು ಉಲ್ಲೇಖಿಸಿ ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಫೆಡರಲ್ ಬ್ಯಾಂಕ್‌ನ ಮುಖ್ಯಸ್ಥರು ಆರೋಪಿಯ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.

ಫೆಡರಲ್ ಬ್ಯಾಂಕ್‌ನಲ್ಲಿ ವ್ಯಾವಹಾರಿಕ ಮುಖಸ್ಥನಾಗಿದ್ದ ವಿಷ್ಣು ಪ್ರಸಾದ್‌ನ ಫೇಸ್‌ಬುಕ್ ಪೋಸ್ಟನ್ನು ಜಾಲತಾಣಿಗರು ಟ್ವಿಟ್ಟರಿನಲ್ಲಿ ಬ್ಯಾಂಕ್ ಗಮನಕ್ಕೆ ತಂದು ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಫೆಡರಲ್ ಬ್ಯಾಂಕ್  " ಒಂದು ಜವಾಬ್ದಾರಿಯುತ ಸಂಸ್ಥೆಯಾಗಿ ನಮ್ಮ ಉದ್ಯೋಗಿಗಳ ಕಡೆಯಿಂದ ಯಾವುದೇ ಅಸಭ್ಯ, ಅನಪೇಕ್ಷಿತ ಅಥವಾ ಹಿಂಸಾತ್ಮಕ, ಪ್ರಶ್ನಾರ್ಹ ಕೃತ್ಯಗಳನ್ನು ಎಂದಿಗೂ ಪ್ರೋತ್ಸಾಹಿಸುವುದಿಲ್ಲ. ಅಂತಹ ವರ್ತನೆಯನ್ನು ಸಂಸ್ಥೆ ಎಂದೂ ಸಹಿಸುವುದಿಲ್ಲ. ಇಂತಹ ಯಾವುದೇ ಪ್ರಚೋದನೆಗೂ ಸಂಸ್ಥೆಗೂ ಸಂಬಂಧವಿಲ್ಲ ಹಾಗು ಈ ಬಗ್ಗೆ ಸೂಕ್ತ ಕ್ರಮಕ್ಕಾಗಿ ವಿಚಾರಣೆ ಪ್ರಾರಂಭಿಸಲಾಗಿದೆ " ಎಂದು ತಿಳಿಸಿದೆ.

ಸದ್ಯ ವಿಷ್ಣು ಪ್ರಸಾದ್ ನಿಡ್ಡಾಜೆಯ ಫೇಸ್ ಬುಕ್ ಖಾತೆ ಡಿಲೀಟ್ ಆಗಿದೆ. ಇದನ್ನು ಯಾರು ಮಾಡಿದ್ದಾರೆ ಎಂದು ತಿಳಿದುಬಂದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News