ಚೀನಾದಲ್ಲಿ ಕೋವಿಡ್ ನೆಪದಲ್ಲಿ ಲಕ್ಷಾಂತರ ಮಂದಿಯನ್ನು 'ಪೆಟ್ಟಿಗೆ ಮನೆ'ಗಳಿಗೆ ಸ್ಥಳಾಂತರಿಸುತ್ತಿರುವ ಸರಕಾರ

Update: 2022-01-13 06:29 GMT

ಬೀಜಿಂಗ್: ಚೀನಾದಲ್ಲಿ ಕೋವಿಡ್-19 ಶಂಕಿತರನ್ನು ಲೋಹದಿಂದ ತಯಾರಿಸಲಾದ ಪೆಟ್ಟಿಗೆಗಳಂತಹ ಸಾಲು ಮನೆಗಳಲ್ಲಿ ಇರಿಸಲಾಗುತ್ತಿದೆ ಎಂಬ ಅಂಶ ಬಯಲಾಗಿದೆ. ಈ ಸಾಲು ಮನೆಗಳು ಕ್ವಾರಂಟೈನ್ ಕೇಂದ್ರಗಳಿಗಾಗಿ ಸಿದ್ಧಪಡಿಸಲಾಗಿದ್ದು ಹಲವಾರು ಬಸ್ಸುಗಳಲ್ಲಿ ಜನರನ್ನು ಇಲ್ಲಿಗೆ ಕರೆತರಲಾಗುತ್ತಿರುವ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಕೋವಿಡ್-19 ಸೋಂಕು ತಡೆಗಟ್ಟುವ ಉದ್ದೇಶದಿಂದ ಚೀನಾ ಇಂತಹ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿದು ಬಂದಿದೆ,

ತನ್ನ ಝೀರೋ ಕೋವಿಡ್ ನೀತಿಯಂಗವಾಗಿ ಚೀನಾ ಇಂತಹ ಹತ್ತು ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಬೀಜಿಂಗ್ ನಗರವು ವಿಂಟರ್ ಒಲಿಂಪಿಕ್ಸ್ ಗೆ ಸಿದ್ಧತೆ ನಡೆಸಿರುವಂತೆಯೇ ಸರಕಾರ ಲಕ್ಷಾಂತರ ಜನರನ್ನು ಕ್ವಾರಂಟೈನಿಗೊಳಪಡಿಸಿದೆ.

ಈ ಸಣ್ಣ ಲೋಹದ ಪೆಟ್ಟಿಗೆಗಳ ಮನೆಗಳಲ್ಲಿ ಗರ್ಭಿಣಿಯರು, ಮಕ್ಕಳು, ವೃದ್ಧರು ಸೇರಿದಂತೆ ಎಲ್ಲರನ್ನೂ ಬಲವಂತವಾಗಿ ಇರಿಸಲಾಗುತ್ತಿದೆ. ಒಂದು ಪ್ರದೇಶದಲ್ಲಿ ಒಂದೇ ಒಂದು ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆಯಾದರೂ  ಒಂದು ಮರದ ಮಂಚ ಮತ್ತು ಶೌಚಾಲಯವಿರುವ ಪೆಟ್ಟಿಗೆ ಮನೆಗಳಲ್ಲಿ ಜನರನ್ನು ಎರಡು ವಾರಗಳ ಕಾಲ ಇರಿಸಲಾಗುತ್ತದೆ. ಕೆಲವು ಕಡೆಗಳಲ್ಲಂತೂ  ಈ ಕ್ವಾರಂಟೈನ್ ಕೇಂದ್ರಗಳಿಗೆ ತೆರಳುವಂತೆ ನಡುರಾತ್ರಿ ಜನರಿಗೆ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.

ಚೀನಾದಲ್ಲಿ ಟ್ರ್ಯಾಕ್ ಎಂಡ್ ಟ್ರೇಸ್ ಆ್ಯಪ್ ಕಡ್ಡಾಯವಾಗಿರುವುದರಿಂದ  ಸೋಂಕಿತರ ಪ್ರಾಥಮಿಕ ಸಂಪರ್ಕಿತರು ಶೀಘ್ರ ಪತ್ತೆಯಾಗುತ್ತಾರೆ ಹಾಗೂ  ಅವರನ್ನು ತಕ್ಷಣ ಕ್ವಾರಂಟೈನಿಗೊಳಪಡಿಸಲಾಗುತ್ತದೆ.

ಸುಮಾರು 2 ಕೋಟಿ ಜನರು  ಈಗ ಚೀನಾದಲ್ಲಿ ಕೋವಿಡ್ ನೆಪದಲ್ಲಿ ತಮ್ಮ ಮನೆಗಳಲ್ಲಿಯೇ ಬಂಧಿಯಾಗಿದ್ದು ಅವರಿಗೆ ಮನೆಗಳಿಂದ ಆಹಾರ ಖರೀದಿಸಲೂ ಹೊರಬರಲು ಸಾಧ್ಯವಿಲ್ಲ ಎಂದು ಒಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News