ಉ.ಪ್ರದೇಶ: ಯೋಗಿ ಸಂಪುಟದ ಮೂರನೇ ವಿಕೆಟ್ ಪತನಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಒಬಿಸಿ ನಾಯಕ ಸೈನಿ

Update: 2022-01-13 16:02 GMT
ಅಖಿಲೇಶ್ ಯಾದವ್ ಅವರೊಂದಿಗೆ ಧರಂ ಸಿಂಗ್ ಸೈನಿ, Photo: twitter

ಲಕ್ನೋ,ಜ.13: ಚುನಾವಣೆಯ ಹೊಸ್ತಿಲಲ್ಲಿರುವ ಉತ್ತರ ಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿಗೆ ಆಘಾತಗಳ ಸರಣಿ ಮುಂದುವರಿದಿದೆ. ಆದಿತ್ಯನಾಥ್ ಸರಕಾರವು ಮಂಗಳವಾರ ಮೂರನೇ ಸಚಿವ ಹಾಗೂ ಒಬಿಸಿ ನಾಯಕ ಧರಮ್ ಸಿಂಗ್ ಸೈನಿ ಅವರನ್ನು ಕಳೆದುಕೊಂಡಿದೆ. ಶಿಕೋಹಾಬಾದ್‌ನ ಬಿಜೆಪಿ ಶಾಸಕ ಮುಕೇಶ ವರ್ಮಾ ಕೂಡ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಇದರೊಂದಿಗೆ ಕಳೆದ ಮೂರು ದಿನಗಳಲ್ಲಿ ಬಿಜೆಪಿಯನ್ನು ತೊರೆದಿರುವ ಸಚಿವರು ಮತ್ತು ಶಾಸಕರ ಸಂಖ್ಯೆ ಎಂಟಕ್ಕೇರಿದೆ. ಈ ಎಲ್ಲ ನಾಯಕರು ಅಖಿಲೇಶ ಯಾದವರ ಸಮಾಜವಾದಿ ಪಕ್ಷ (ಎಸ್‌ಪಿ)ವನ್ನು ಸೇರಲಿದ್ದಾರೆ ಎನ್ನಲಾಗಿದೆ. ಸಹರಾನಪುರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಸೈನಿ ತಾನು ಬಿಜೆಪಿಯನ್ನು ತೊರೆಯಲಿದ್ದೇನೆ ಎನ್ನುವುದನ್ನು ಬುಧವಾರವಷ್ಟೇ ನಿರಾಕರಿಸಿದ್ದರು.

ಬಿಜೆಪಿಯಿಂದ ಸರಣಿ ನಿರ್ಗಮನಕ್ಕೆ ನಾಂದಿ ಹಾಡಿದ್ದ ಮಾಜಿ ಸಚಿವ ಸ್ವಾಮಿ ಪ್ರಸಾದ ಮೌರ್ಯ ಅವರನ್ನೂ ತರಾಟೆಗೆತ್ತಿಕೊಂಡಿದ್ದ ಅವರು,ಮೌರ್ಯ ಅವರ ಬಿಜೆಪಿಯನ್ನು ತೊರೆಯಲಿರುವ ಪಟ್ಟಿಯಲ್ಲಿ ತನ್ನ ಹೆಸರನ್ನು ತಪ್ಪಾಗಿ ಸೇರಿಸಲಾಗಿದೆ. ತಾನು ಬಿಜೆಪಿಯಲ್ಲಿದ್ದೇನೆ ಮತ್ತು ಬಿಜೆಪಿಯಲ್ಲಿಯೇ ಇರುತ್ತೇನೆ. ತಾನು ಪಕ್ಷವನ್ನು ತೊರೆಯುವುದಿಲ್ಲ ಎಂದು ವೀಡಿಯೊ ಸಂದೇಶದಲ್ಲಿ ಹೇಳಿಕೊಂಡಿದ್ದರು. ಆದರೆ ಬಳಿಕ ತನ್ನ ಸರಕಾರಿ ನಿವಾಸ ಮತ್ತು ಭದ್ರತೆಯನ್ನು ಮರಳಿಸುವ ಮೂಲಕ ತನ್ನ ನಿರ್ಗಮನದ ಸುಳಿವನ್ನು ನೀಡಿದ್ದರು.

ಪಕ್ಷವನ್ನು ತೊರೆಯದಂತೆ ಮನವೊಲಿಸಲು ಆದಿತ್ಯನಾಥ ಅವರೂ ಸೈನಿಯವರಿಗೆ ಕರೆ ಮಾಡಿದ್ದರು ಎಂದು ಬಲ್ಲ ಮೂಲಗಳು ತಿಳಿಸಿವೆ.

ಸೈನಿ ಅವರ ರಾಜೀನಾಮೆಯು ಈಗಾಗಲೇ ಬಿಜೆಪಿಯಿಂದ ಹೊರಬಿದ್ದಿರುವ ನಾಯಕರ ಮಾದರಿಯನ್ನೇ ಅನುಸರಿಸಿದ್ದು,ಅಖಿಲೇಶ್ ಅವರು ಸೈನಿ ಜೊತೆಯಲ್ಲಿರುವ ಚಿತ್ರವನ್ನು ಶೇರ್ ಮಾಡಿಕೊಂಡು ಅವರನ್ನು ತನ್ನ ಪಕ್ಷಕ್ಕೆ ಸ್ವಾಗತಿಸುವ ಮೂಲಕ ಪಕ್ಷಾಂತರದಲ್ಲಿ ತನ್ನ ಪಾತ್ರವನ್ನು ನಿರ್ವಹಿಸಿದ್ದಾರೆ.

ಮಂಗಳವಾರ ಬೆಳಿಗ್ಗೆ ಇನ್ನೋರ್ವ ಹಿಂದುಳಿದ ಜಾತಿಗಳ ನಾಯಕ ಮುಕೇಶ ವರ್ಮಾ ಅವರು ಬಿಜೆಪಿಯನ್ನು ತೊರೆದಿದ್ದು,ತನ್ನ ರಾಜೀನಾಮೆ ಪತ್ರವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದರು.

ಈ ವಾರ ಬಿಜೆಪಿ ತೊರೆದಿರುವ ಹೆಚ್ಚಿನ ನಾಯಕರೊಂದಿಗಿನ ತನ್ನ ಚಿತ್ರಗಳನ್ನು ಅಖಿಲೇಶ್ ಯಾದವ್ ಶೇರ್ ಮಾಡಿಕೊಂಡಿದ್ದಾರೆ. ರಾಜೀನಾಮೆ ಪತ್ರಗಳಲ್ಲಿ ಒಂದೇ ಬಗೆಯ ಪದಗುಚ್ಛಗಳು ಬಳಕೆಯಾಗಿರುವುದು ಇದೊಂದು ಯೋಜಿತ ಕಾರ್ಯತಂತ್ರವಾಗಿದೆ ಎಂದು ಬೆಟ್ಟು ಮಾಡಿದೆ.

ಹಿಂದುಳಿದ ವರ್ಗಗಳ ಈ ನಾಯಕರ ನಿರ್ಗಮನಗಳು ಫೆಬ್ರವರಿ-ಮಾರ್ಚ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಮುಖ್ಯ ಎದುರಾಳಿಯಾಗಿರುವ ಅಖಿಲೇಶ ಯಾದವ ಅವರ ಉತ್ಸಾಹವನ್ನು ಹೆಚ್ಚಿಸಿವೆ.

ಸೈನಿಯವರು 2016ರಲ್ಲಿ ಸ್ವಾಮಿ ಪ್ರಸಾದ ಮೌರ್ಯ ಮತ್ತು ಹಾಲಿ ಬಿಜೆಪಿಯಿಂದ ಎಸ್‌ಪಿಗೆ ಜಿಗಿಯುತ್ತಿರುವ ಹಲವಾರು ಇತರ ನಾಯಕರೊಂದಿಗೆ ಬಿಎಸ್‌ಪಿ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದರು.

2017ರ ಉ.ಪ್ರ.ಚುನಾವಣೆಯಲ್ಲಿ ಯಾದವರು ಮತ್ತು ಮುಸ್ಲಿಮರು ಅಖಿಲೇಶ್ ಯಾದವರ ಅತ್ಯಂತ ನಿಷ್ಠ ಮತದಾರರಾಗಿದ್ದ ಹಿನ್ನೆಲೆಯಲ್ಲಿ ಯಾದವೇತರ ಒಬಿಸಿ ಮತಗಳನ್ನು ಸೆಳೆಯುವುದು ಬಿಜೆಪಿಯ ಕಾರ್ಯತಂತ್ರವಾಗಿತ್ತು. ಈ ಸಲ ಯಾದವೇತರ ಒಬಿಸಿ ನಾಯಕರನ್ನು ಸೆಳೆಯುವ ಕಾರ್ಯತಂತ್ರ ಸಮಾಜವಾದಿ ಪಕ್ಷದ್ದಾಗಿದೆ.

‘ಪ್ರತಿದಿನವೂ ಒಬ್ಬರಲ್ಲೊಬ್ಬ ಬಿಜೆಪಿ ನಾಯಕರು ಪಕ್ಷದಿಂದ ನಿರ್ಗಮಿಸುತ್ತಿದ್ದಾರೆ. ಉದಾಹರಣೆಗೆ ಉ.ಪ್ರದೇಶದಲ್ಲಿ 13 ಶಾಸಕರು ಇನ್ನೊಂದು ಪಕ್ಷವನ್ನು ಸೇರಲು ಬಿಜೆಪಿಯನ್ನು ತೊರೆಯುತ್ತಿದ್ದಾರೆ. ಇಂದು ಇನ್ನೂ ನಾಲ್ವರು ಬಿಜೆಪಿ ಶಾಸಕರು ಪಕ್ಷದಿಂದ ಹೊರಬೀಳಲಿದ್ದಾರೆ ಎಂಬ ಮಾಹಿತಿ ನನಗೆ ಲಭಿಸಿದೆ’ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News