ಗಣರಾಜ್ಯೋತ್ಸವ ಪರೇಡ್‌ ಗೆ ಕೇರಳದ ʼನಾರಾಯಣಗುರುʼ ಸ್ತಬ್ಧಚಿತ್ರವನ್ನು ತಿರಸ್ಕರಿಸಿದ ಕೇಂದ್ರ

Update: 2022-01-13 10:20 GMT
Photo: Twitter

ಹೊಸದಿಲ್ಲಿ: ಪ್ರತಿವರ್ಷದಂತೆ ಗಣರಾಜ್ಯೋತ್ಸವ ಪರೇಡ್‌ ಸಂದರ್ಭದಲ್ಲಿ ರಾಜ್ಯವಾರು ಸ್ತಬ್ಧಚಿತ್ರಗಳನ್ನು ಪ್ರದರ್ಶಿಸುವ  ಹಿನ್ನೆಲೆಯಲ್ಲಿ ಕೇರಳ ಸರಕಾರ ಕಳಿಸಿದ್ದ ಪ್ರಸ್ತಾವವನ್ನು ಕೇಂದ್ರ ಸರಕಾರ ತಿರಸ್ಕರಿಸಿದೆ ಎಂದು mathrubhumi ವರದಿ ಮಾಡಿದೆ. ಕೇರಳ ಕಳಿಸಿದ್ದ  ʼಶ್ರೀ ನಾರಾಯಣ ಗುರುʼ ಹಾಗೂ ʼಜಟಾಯುಪ್ಪಾರʼದ ಪ್ರತಿಕೃತಿಗಳನ್ನು ಕೇಂದ್ರ ಸರಕಾರವು ತಿರಸ್ಕರಿಸಿ, ಆದಿ ಶಂಕರಾಚಾರ್ಯರ ಪ್ರತಿಮೆ ಇಡಬೇಕೆಂದು ಸೂಚಿಸಿದ್ದಾಗಿ ವರದಿ ಉಲ್ಲೇಖಿಸಿದೆ.

ಕೇರಳ ಸರಕಾರವು ಜಟಾಯುಪ್ಪಾರದ ಹಿನ್ನೆಲೆಯುಳ್ಳ, ಮಹಿಳಾ ಸಬಲೀಕರಣವನ್ನು ಮತ್ತು ಪ್ರವಾಸೋದ್ಯಮವನ್ನು ಬಿಂಬಿಸುವ ಸ್ತಬ್ಧಚಿತ್ರವನ್ನು ಗಣರಾಜ್ಯೋತ್ಸವದ ಪರೇಡ್‌ ನಲ್ಲಿ ಪ್ರದರ್ಶಿಸಲು ಉದ್ದೇಶಿಸಿತ್ತು. ಇದರೊಂದಿಗೆ ಅದರ ಮುಂಭಾಗದಲ್ಲಿ ಮಹಾನ್  ಧಾರ್ಮಿಕ ಸುಧಾರಕರಾದ ಶ್ರೀ ನಾರಾಯಣ ಗುರುಗಳ ಪ್ರತಿಮೆಯನ್ನು ಇರಿಸುವುದಾಗಿ ಕೇಂದ್ರ ಸರಕಾರಕ್ಕೆ ಕಳಿಸಿದ್ದ ಪ್ರಸ್ತಾವನೆಯಲ್ಲಿ ಉಲ್ಲೇಖಿಸಿತ್ತು.

"ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿನ ಸಾಧನೆಗಳು" ಎಂಬ ವಿಷಯವನ್ನು ಇದು ಆಧರಿಸಿದೆ. ಈ ಸ್ತಬ್ಧ ಚಿತ್ರಗಳನ್ನು ಮೌಲ್ಯಮಾಪನ ಮಾಡಲು ಮತ್ತು ಶಿಫಾರಸು ಮಾಡಲು ರಕ್ಷಣಾ ಸಚಿವಾಲಯವು ನೇಮಿಸಿದ ತೀರ್ಪುಗಾರರು ಎಲ್ಲಾ ಐದು ಸುತ್ತಿನ ಚರ್ಚೆಗಳಲ್ಲಿ ಸಕಾರಾತ್ಮಕ ಪ್ರತಿಕ್ರಿಯೆಯನ್ನು ನೀಡಿದ್ದರು. ಡಿಸೆಂಬರ್ 18 ರಂದು ನಡೆದ ಅಂತಿಮ ಸುತ್ತಿನಲ್ಲಿ ತೀರ್ಪುಗಾರರು ಈ ಸ್ಕೆಚ್ ಅನ್ನು ಅನುಮೋದಿಸಿದರು ಮತ್ತು ಸಂಗೀತ ಸಂಯೋಜಿಸಲು ನಿರ್ದೇಶಿಸಿದ್ದರು.

ಈ ಸ್ತಬ್ಧ ಚಿತ್ರವನ್ನು ಅನುಮೋದಿಸಲಾಗಿದೆ ಎಂಬ ಪತ್ರ ಬರದಿದ್ದ ಕಾರಣ ಕೇರಳ ಸರಕಾರವು ಈ ಕುರಿತು ವಿಚಾರಿಸಿದಾಗ, ಅನುಮೋದನೆಗೊಂಡ ೧೨ ರಾಜ್ಯಗಳ ಪಟ್ಟಿಯಲ್ಲಿ ಕೇರಳ ರಾಜ್ಯದ ಹೆಸರಿರಲಿಲ್ಲ ಎಂದು ತಿಳಿದು ಬಂದಿದೆ. ಅರುಣಾಚಲ ಪ್ರದೇಶ, ಹರಿಯಾಣ, ಛತ್ತೀಸ್‌ಗಢ, ಗೋವಾ, ಗುಜರಾತ್, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಮಹಾರಾಷ್ಟ್ರ, ಮೇಘಾಲಯ, ಪಂಜಾಬ್, ಉತ್ತರ ಪ್ರದೇಶ ಮತ್ತು ಉತ್ತರಾಖಂಡದಿಂದ ಸ್ತಬ್ಧಚಿತ್ರಗಳನ್ನು ಆಯ್ಕೆ ಮಾಡಲಾಗಿದೆ. ಈ ಪೈಕಿ ಪಂಜಾಬ್, ಮಹಾರಾಷ್ಟ್ರ ಮತ್ತು ಛತ್ತೀಸ್ ಗಢ ಹೊರತುಪಡಿಸಿ ಉಳಿದೆಲ್ಲ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಕೇರಳದ ಸ್ತಬ್ಧ ಚಿತ್ರವು ಈ ಹಿಂದೆ ಐದು ಬಾರಿ ಪ್ರಶಸ್ತಿ ಗೆದ್ದಿದೆ.

ಮೊದಲು ತೇರಿನ ಮುಂಭಾಗದಲ್ಲಿ ಜಟಾಯುಪ್ಪಾರದ ದ್ವಾರದ ಮಾದರಿಯನ್ನು ಇಡಲು ತೀರ್ಮಾನಿಸಲಾಗಿತ್ತು. ಆದರೆ ಮುಂಭಾಗದಲಲಿ ಶಂಕರಾಚಾರ್ಯರ ಪ್ರತಿಮೆ ಇಡಬೇಕು ಎಂದು ರಕ್ಷಣಾ ಸಚಿವಾಯ ಸೂಚಿಸಿತ್ತು. ಆದರೆ ಪ್ರತಿಮೆ ಬದಲಾವಣೆ ಅನಿವಾರ್ಯವಾಗಿದ್ದರೆ ಅದರ ಬದಲಿಗೆ ಧಾರ್ಮಿಕ ಪುನರುಜ್ಜೀವನ ರೂವಾರಿ ಶ್ರೀನಾರಾಯಣ ಗುರುಗಳ ಪ್ರತಿಮೆ ಇಡುವುದಾಗಿ ಕೇರಳ ಸರಕಾರ ಹೇಳಿದೆ ಎಂದು ವರದಿ ತಿಳಿಸಿದೆ.

ಶಂಕರಾಚಾರ್ಯರ ಪ್ರತಿಮೆ ಇರಿಸಿದರೆ ಇದೊಂದು ತೀರ್ಥಕ್ಷೇತ್ರದ ಸ್ತಬ್ಧಚಿತ್ರ ಎಂದು ಜನರು ಭಾವಿಸಬಹುದು. ಜಟಾಯುಪ್ಪಾರ ಇರುವ ಚಡಯಮಂಗಲಂ, ವರ್ಕಳ ಮತ್ತು ಚೆಂಬಜಂತಿಗೆ ಸಮೀಪದಲ್ಲಿರುವುದರಿಂದ ಗುರುದೇವನ ಪ್ರತಿಮೆಯು ಉತ್ತಮವಾಗಿರುತ್ತದೆ ಎಂದು ರಾಜ್ಯವು ವಿವರಿಸಿದೆ. ಜೊತೆಗೆ ತೀರ್ಪುಗಾರರ ಕೋರಿಕೆಯ ಮೇರೆಗೆ ಆದಿಶಂಕರರ ಪ್ರತಿಮೆ ಇರುವ ರೇಖಾಚಿತ್ರವನ್ನೂ ಸಲ್ಲಿಸಲಾಗಿದೆ ಎಂದು ವರದಿ ಉಲ್ಲೇಖಿಸಿದೆ.

ನಾರಾಯಣಗುರುಗಳ ಪ್ರತಿಮೆಯ ಸ್ಥಬ್ಧಚಿತ್ರವನ್ನು ತಿರಸ್ಕರಿಸಿರುವುದು ಈಗ ಭಾರೀ ಚರ್ಚೆಗೆ ಕಾರಣವಾಗಿದೆ. ಒಕ್ಕೂಟ ಸರಕಾರದ ಈ ನಿಲುವನ್ನು ಜನರು ಖಂಡಿಸುತ್ತಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಕಾರವನ್ ನಿಯತ ಕಾಲಿಕದ ಸಂಪಾದಕ ವಿನೋದ್ ಜೋಸ್ " ದಿಲ್ಲಿಯವರಿಗೆ ಬ್ರಾಹ್ಮಣ ಮಹಾತ್ಮ ಬೇಕಿತ್ತು, ಕೇರಳದವರು ಒಬಿಸಿಯ ಮಹಾತ್ಮ ರನ್ನ ಕಳಿಸಿದರು. ಅದನ್ನು ದಿಲ್ಲಿಯವರು ತಿರಸ್ಕರಿಸಿದರು. ಇಷ್ಟಾಗಿ ನಾವು ಇಲ್ಲಿ ಜಾತಿ ಸಮಸ್ಯೆ ಇಲ್ಲ ಎನ್ನುತ್ತೇವೆ " ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News