ಹಿಂದಿನ ಸರಕಾರವನ್ನು ಗುರಿಪಡಿಸಲು, ಯೋಗಿ ಅವಧಿಯಲ್ಲಿ ದುರವಸ್ಥೆಯಲ್ಲಿರುವ ಶಾಲೆಗಳ ಚಿತ್ರ ಟ್ವೀಟಿಸಿದ ಸಂಬಿತ್ ಪಾತ್ರ

Update: 2022-01-13 13:37 GMT

ಹೊಸದಿಲ್ಲಿ: ಮುಂದಿನ ತಿಂಗಳು ವಿಧಾನಸಭಾ ಚುನಾವಣೆ ಎದುರಿಸಲಿರುವ ಉತ್ತರ ಪ್ರದೇಶದಲ್ಲಿ ರಾಜಕೀಯ ಕೆಸರೆರಚಾಟ ತಾರಕಕ್ಕೇರಿದೆ.  ಇದಕ್ಕೆ  ಪೂರಕವೆಂಬಂತೆ ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಅವರು ಜನವರಿ 4ರಂದು ತಮ್ಮ ಟ್ವೀಟ್‍ನಲ್ಲಿ ಒಂದು ಇಮೇಜ್ ಶೇರ್ ಮಾಡಿದ್ದರು. ಇದರಲ್ಲಿ ಅವರು  "2017ಗಿಂತ ಹಿಂದೆ ಹಾಗೂ 2017ಗಿಂತ ನಂತರ" ಎಂಬ ಶೀರ್ಷಿಕೆಯಡಿಯಲ್ಲಿ ತಲಾ ಮೂರು ಚಿತ್ರಗಳನ್ನು ಶೇರ್ ಮಾಡಿದ್ದಾರೆ. 2017ಗಿಂತ ಹಿಂದೆ ವಿಭಾಗದಲ್ಲಿ ಶಾಲೆಗಳ ದುಸ್ಥಿತಿಯನ್ನು ವಿವರಿಸುವ ಮೂರು ಚಿತ್ರಗಳಿದ್ದರೆ ಇನ್ನೊಂದು ವಿಭಾಗದಲ್ಲಿ ಶಾಲೆಗಳು ಆದುನಿಕವಾಗಿವೆ ಎಂಬರ್ಥ ನೀಡುವ ಚಿತ್ರಗಳನ್ನು ಪೋಸ್ಟ್ ಮಾಡಲಾಗಿದೆ.

"ಉದಾತ್ತ ಧ್ಯೇಯ, ಪ್ರಬಲ ಕ್ರಮ" "ವ್ಯತ್ಯಾಸ ಸ್ಪಷ್ಟ'"ಎಂದು ಸಂಬಿತ್ ಪಾತ್ರ ಬರೆದಿದ್ದಾರೆ. ಫೇಸ್ಬುಕ್‍ನಲ್ಲಿಯೂ ಅವರು ಇಂತಹುದೇ ಪೋಸ್ಟ್ ಶೇರ್ ಮಾಡಿದ್ದಾರೆ ಹಾಗೂ ಸಮಾಜವಾದಿ ಪಕ್ಷ ಸರಕಾರದ ಅವಧಿಯಲ್ಲಿ ಶಾಲೆಗಳು ದುಸ್ಥಿತಿಯಲ್ಲಿದ್ದರೆ ಯೋಗಿ ಆಡಳಿತದಡಿಯಲ್ಲಿ ಆಧುನಿಕಗೊಂಡಿವೆ ಎಂದು ಬಿಂಬಿಸಲು ಪ್ರಯತ್ನಿಸಿದ್ದಾರೆ.

ಆದರೆ ಆಲ್ಟ್ ಮಾಧ್ಯಮವು ನ್ಯೂಸ್ ಸಂಬಿತ್ ಆವರು 2017ಗಿಂತ ಮುಂಚೆ ಎಂದು ಹೇಳಿಕೊಂಡು ಪೋಸ್ಟ್ ಮಾಡಿದ ಚಿತ್ರಗಳ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಈ ನಿರ್ದಿಷ್ಟ ಚಿತ್ರಗಳು ಹಿಂದಿನ ಸರಕಾರದ ಅವಧಿಯದ್ದಲ್ಲ ಬದಲು ಈಗಿನ ಯೋಗಿ ಆದಿತ್ಯನಾಥ್ ಸರಕಾರದ ಅವಧಿಯಲ್ಲಿಯೇ ತೆಗೆದಿದ್ದು ಎಂದು ತಿಳಿದು ಬಂದಿದೆ.

ಅಮರ್ ಉಜಾಲ ಜನವರಿ 7, 2021ರಲ್ಲಿ ಈ ಕುರಿತು ಒಂದು ಲೇಖನ ಬರೆದಿದ್ದು ಅದರಲ್ಲಿ ಉತ್ತರ ಪ್ರದೇಶದ ಜಬಲ್ಪುರ್ ಗ್ರಾಮದ ಶಾಲೆ ಎಂದು ಇದನ್ನು ಗುರುತಿಸಿದೆ. ರಾಜ್ಯದಲ್ಲಿ  ಹಲವಾರು ಶಾಲೆಗಳ ಕಟ್ಟಡಗಳು ದುರವಸ್ಥೆಯಲ್ಲಿವೆ ಹಾಗೂ ಈ ಶಾಲೆಯಿರುವ ಜಿಲ್ಲೆಯಲ್ಲಿ 111 ಶಾಲಾ ಕಟ್ಟಡಗಳು ದುರವಸ್ಥೆಯಲ್ಲಿವೆ ಎಂದು ಬರೆಯಲಾಗಿತ್ತು.

ಸಂಬಿತ್ ಪಾತ್ರ ಅವರು ಪೋಸ್ಟ್ ಮಾಡಿದ್ದ ಇನ್ನೊಂದು ಶಾಲೆಯ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದಲ್ಲಿ ಆಗಸ್ಟ್ 8,2018 ಎಂದು ಕೆಳಭಾಗದಲ್ಲಿ ಬರೆದಿರುವುದು ಕಾಣಿಸುತ್ತದೆ. ಈ ಶಾಲೆ ಉತ್ತರ ಪ್ರದೇಶದ ಚಿತ್ರಕೂಟ್‍ನಲ್ಲಿರುವ ಅಮನಪುರ್ ಪ್ರಾಥಮಿಕ ಶಾಲೆ ಎಂದು ಗುರುತಿಸಲಾಗಿದೆ.

ಮೂರನೇ ಚಿತ್ರವು  ಕುಶಿನಗರದ ಸುಕ್ರೌಲಿ ಎಂಬಲ್ಲಿರುವ ಶಾಲೆಯ ಚಿತ್ರವಾಗಿದ್ದು ಈ ಕುರಿತು ಡಿಸೆಂಬರ್ 17,2020ರಲ್ಲಿ ನ್ಯೂಸ್‍ಅಡ್ಡಾ ಒಂದು ಲೇಖನ ಪ್ರಕಟಿಸಿ ಶಾಲೆಯ ಆಡಿಟ್‍ಗೆಂದು ಬಂದ ಅಧಿಕಾರಿ ಶಾಲೆಗೆ ಬೀಗ ಹಾಕಲಾಗಿದೆ ಎಂದು ತಿಳಿದುಕೊಂಡಿದ್ದಾರೆ ಎಂದು ವಿವರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News