ಕೋವಿಡ್ ಪ್ರಕರಣಗಳು ಇಳಿಕೆಯಾಗುತ್ತಿರುವುದನ್ನು ದತ್ತಾಂಶಗಳು ತೋರಿಸುತ್ತಿವೆ: ದಿಲ್ಲಿ ಆರೋಗ್ಯ ಸಚಿವ

Update: 2022-01-13 17:32 GMT
PHOTO : PTI

ಹೊಸದಿಲ್ಲಿ, ಜ. 13: ಕೋವಿಡ್ ರೋಗಿಗಳು ಆಸ್ಪತ್ರೆಗೆ ದಾಖಲಾಗುತ್ತಿರುವ ದರ ಸ್ಥಿರವಾಗಿರುವುದು ಉತ್ತಮ ಸೂಚನೆ ಎಂದು ಗುರುವಾರ ಪ್ರತಿಪಾದಿಸಿರುವ ದಿಲ್ಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್, ಕೋವಿಡ್ ಪ್ರಕರಣಗಳು ಶೀಘ್ರದಲ್ಲಿ ಇಳಿಕೆಯಾಲಿದೆ ಎಂಬುದನ್ನು ದತ್ತಾಂಶ ಪ್ರತಿಪಾದಿಸಿದೆ ಎಂದಿದ್ದಾರೆ.

ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಸತ್ಯೇಂದ್ರ ಜೈನ್, ಆಸ್ಪತ್ರೆಗೆ ದಾಖಲಾಗುತ್ತಿರುವ ಕೋವಿಡ್ ರೋಗಿಗಳ ದರ ಕಳೆದ ನಾಲ್ಕು ದಿನಗಳಿಂದ ಸ್ಥಿರವಾಗಿದೆ ಎಂದು ಅವರು ಹೇಳಿದರು.

‘‘ಜನವರಿ 13ರಂದು ದಿಲ್ಲಿಯಲ್ಲಿ ಸುಮಾರು 27,000 ಕೋವಿಡ್ ಪ್ರಕರಣಗಳು ವರದಿಯಾಗುವ ನಿರೀಕ್ಷೆ ಇದ್ದರೂ ಯಾವುದೇ ಲಾಕ್‌ಡೌನ್ ಜಾರಿಗೊಳಿಸುವ ಬಗ್ಗೆ ಪರಿಶೀಲನೆ ನಡೆಸುವುದಿಲ್ಲ’’ ಎಂದು ಜೈನ್ ಹೇಳಿದ್ದಾರೆ.

   ದಿಲ್ಲಿಯಲ್ಲಿ ಬುಧವಾರ 27,561 ಪ್ರಕರಣಗಳು ವರದಿಯಾಗಿವೆ. ಪಾಸಿಟಿವಿಟಿ ದರ ಶೇ. 26.22 ದಾಖಲಾಗಿದೆ. 40 ಮಂದಿ ಸಾವನ್ನಪ್ಪಿದ್ದಾರೆ. ಜನವರಿ 11ರಂದು ಪಾಸಿಟಿವಿಟಿ ದರ ಶೇ. 25.65 ಹಾಗೂ ಜನವರಿ 10ರಂದು ಪಾಸಿಟಿವಿಟಿ ದರ ಶೇ. 25 ದಾಖಲಾಗಿದೆ. ‘‘ದಿಲ್ಲಿಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನಂಪ್ರತಿ 20 ಸಾವಿರಕ್ಕಿಂತ ಅಧಿಕ ದಾಖಲಾಗುತ್ತಿದೆ. ಆದರೆ, ಪಾಸಿಟಿವಿಟಿ ದರ ಹಾಗೂ ಆಸ್ಪತ್ರೆಗೆ ದಾಖಲಾಗುತ್ತಿರುವ ಕೋವಿಡ್ ಪ್ರಕರಣಗಳ ಸಂಖ್ಯೆ ಸ್ಥಿರವಾಗಿದೆ. ಇದು ಉತ್ತಮ ಸೂಚನೆ’’ ಎಂದು ಜೈನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News