ಉತ್ತರಪ್ರದೇಶ ವಿಧಾನ ಸಭೆ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

Update: 2022-01-13 19:08 GMT
PHOTO : PTI

ಹೊಸದಿಲ್ಲಿ, ಜ. 13: ಮುಂಬರುವ ಉತ್ತರಪ್ರದೇಶ ವಿಧಾನ ಸಭೆ ಚುನಾವಣೆಗೆ 50 ಮಹಿಳೆಯರು ಸೇರಿದಂತೆ 125 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಗುರುವಾರ ಬಿಡುಗಡೆ ಮಾಡಿದ್ದಾರೆ.

ಉನ್ನಾವೊ ಅತ್ಯಾಚಾರ ಸಂತ್ರಸ್ತೆಯ ತಾಯಿ ಆಶಾ ಸಿಂಗ್ ಅವರನ್ನು ಪಕ್ಷ ಉನ್ನಾವೊ ವಿಧಾನ ಸಭಾ ಕ್ಷೇತ್ರದಿಂದ ಕಣಕ್ಕಿಳಿಸಲಿದೆ.

ಮಾತನಾಡಿದ ಪ್ರಿಯಾಂಕಾ ಗಾಂಧಿ ವಾದ್ರಾ, ಕಾಂಗ್ರೆಸ್‌ನ ಶೇ. 40 ಅಭ್ಯರ್ಥಿಗಳು ಮಹಿಳೆಯರು ಹಾಗೂ ಇನ್ನುಳಿದ ಶೇ. 40 ಅಭ್ಯರ್ಥಿಗಳು ಯುವಕರು. ಹೀಗೆ ಮಾಡುವ ಮೂಲಕ ಪಕ್ಷ ಹೊಸ ಹಾಗೂ ಚಾರಿತ್ರಿಕ ಹೆಜ್ಜೆ ಇರಿಸಲಿದೆ ಎಂದರು.

ಉತ್ತರಪ್ರದೇಶದಲ್ಲಿ ನ್ಯಾಯಕ್ಕಾಗಿ ಹೋರಾಡಿದವರನ್ನು ಪಕ್ಷ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ. ಅವರು ಮುಂದೆ ಬಂದು ರಾಜ್ಯದಲ್ಲಿ ಅಧಿಕಾರದ ಭಾಗವಾಗಬೇಕೆಂದು ಪಕ್ಷ ಬಯಸುತ್ತದೆ ಎಂದು ಅವರು ಹೇಳಿದರು.

‘‘ನಮ್ಮ ಅಭ್ಯರ್ಥಿಗಳಲ್ಲಿ ಶೇ. 40 ಮಹಿಳೆಯರು ಹಾಗೂ ಶೇ. 40 ಯುವಕರು. ಈ ಮೂಲಕ ಉತ್ತರಪ್ರದೇಶದಲ್ಲಿ ಹೊಸ ರೀತಿಯ ರಾಜಕೀಯ ಆರಂಭಿಸುವ ಬಗ್ಗೆ ನಾವು ನಿರೀಕ್ಷಿಸುತ್ತಿದ್ದೇವೆ’’ ಎಂದು ಅವರು ತಿಳಿಸಿದರು.

‘‘ನಮ್ಮ ಅಭ್ಯರ್ಥಿಗಳ ಪಟ್ಟಿ ಹೊಸ ಸಂದೇಶ ನೀಡಿದೆ. ಈ ಹಿಂದೆ ನ್ಯಾಯ ಕೋರಿದ್ದ ಹಾಗೂ ತಮ್ಮ ಹಕ್ಕುಗಳಿಗೆ ಹೋರಾಟ ಮಾಡಿದವರಿಗೆ ನಾವು ಕೆಲವು ವಿಷಯಗಳನ್ನು ಹೇಳಲು ಬಯಸುತ್ತೇವೆ. ತಮ್ಮ ಹಕ್ಕುಗಳಿಗೆ ಹೋರಾಡಲು ಅವರು ಅಧಿಕಾರಕ್ಕೆ ಬರಬೇಕು. ರಾಜ್ಯದ ಅಧಿಕಾರದ ಒಂದು ಭಾಗವಾಗಲು ಕಾಂಗ್ರೆಸ್ ಅವರಿಗೆ ಅವಕಾಶ ನೀಡಲಿದೆ’’ ಎಂದು ವಾದ್ರಾ ಹೇಳಿದರು.

ಈ ಚುನಾವಣೆಯಲ್ಲಿ ಪಕ್ಷ ಋಣಾತ್ಮಕ ಪ್ರಚಾರ ನಡೆಸುವುದಿಲ್ಲ. ಬದಲಾಗಿ ಉತ್ತರಪ್ರದೇಶದ ಉಜ್ವಲ ಭವಿಷ್ಯಕ್ಕಾಗಿ ಧನಾತ್ಮಕ ಪ್ರಚಾರ ನಡೆಸುತ್ತದೆ. ಅಲ್ಲದೆ, ಮಹಿಳೆಯರು ಹಾಗೂ ಜನರ ಅಭಿವೃದ್ಧಿಗೆ ಸಂಬಂಧಿಸಿದ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲಲಿದೆ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News