ಬಿಜೆಪಿ ನಾಗರ ಹಾವಿನಂತಾದರೆ, ನಾನು ಮುಂಗುಸಿಯಂತೆ: ಪಕ್ಷ ತ್ಯಜಿಸಿದ ಸ್ವಾಮಿಪ್ರಸಾದ್ ಮೌರ್ಯ ಹೇಳಿಕೆ

Update: 2022-01-13 17:59 GMT
Photo : PTI

ಹೊಸದಿಲ್ಲಿ, ಜ. 13:  ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರಕಾರದ ಸಂಪುಟಕ್ಕೆ ರಾಜೀನಾಮೆ ನೀಡಿರುವ ಹಾಗೂ ಬಿಜೆಪಿಯಿಂದ ಹಿಂದುಳಿದ ಜಾತಿಗಳ ನಾಯಕರ ವಲಸೆಯ ನೇತೃತ್ವ ವಹಿಸಿರುವ ಸ್ವಾಮಿ ಪ್ರಸಾದ್ ಮೌರ್ಯ ಅವರು ತನ್ನ ರಾಜಕೀಯ ನಡೆಯನ್ನು ನಾಗರ ಹಾವು ಹಾಗೂ ಮುಂಗುಸಿಯ ಸಾದೃಶ್ಯದ ಮೂಲಕ ಮುಂದಿಟ್ಟಿದ್ದಾರೆ. 

‘‘ಆರೆಸ್ಸೆಸ್ ಕಾಳಿಂಗ ಸರ್ಪದಂತೆ, ಬಿಜೆಪಿ ನಾಗರಹಾವಿನಂತೆ. ಸ್ವಾಮಿ ಪ್ರಸಾದ್ ಮೌರ್ಯ ಅವರು ಮುಂಗುಸಿಯಂತೆ. ಕಾಳಿಂಗ ಸರ್ಪ ಹಾಗೂ ನಾಗರಹಾವು ನಾಶವಾಗುವ ವರೆಗೆ ಬಿಡುವುದಿಲ್ಲ’’ ಎಂದು ಸ್ವಾಮಿ ಪ್ರಸಾದ್ ಮೌರ್ಯ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಸುದ್ದಿವಾಹಿನಿಯೊಂದಕ್ಕೆ ಬುಧವಾರ ನೀಡಿದ ಸಂದರ್ಶನದಲ್ಲಿ ಮೌರ್ಯ ಅವರು, ಬಿಜೆಪಿಯ ಕೊನೆಯ ಆಟ ಶುರುವಾಗಿದೆ ಎಂದರು. ಅಲ್ಲದೆ, ಬಿಜೆಪಿಯನ್ನು ಹೆಬ್ಬಾವಿಗೆ ಹೋಲಿಸಿ ಅದು ದಲಿತರ, ನಿರುದ್ಯೋಗಿಗಳ, ರೈತರ ಹಾಗೂ ಇತರರ ಹಕ್ಕುಗಳನ್ನು ನುಂಗುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು. 

ಉತ್ತರಪ್ರದೇಶದ ಬಿಜೆಪಿ ಸರಕಾರದ ಸಂಪುಟಕ್ಕೆ ಮೌರ್ಯ ಅವರು ಮಂಗಳವಾರ ರಾಜೀನಾಮೆ ನೀಡಿದ್ದಾರೆ. ಆದರೆ, ಔಪಚಾರಿಕವಾಗಿ ಬಿಜೆಪಿ ತ್ಯಜಿಸಿಲ್ಲ. ಅವರು ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ ಸೇರುವ ಬಗ್ಗೆ ದೃಢಪಡಿಸಿಲ್ಲ. ಮೌರ್ಯ ಅವರು ರಾಜೀನಾಮೆ ನೀಡಿದ ನಂತರ ಇಬ್ಬರು ಸಚಿವರು ಸೇರಿದಂತೆ 7ಕ್ಕೂ ಅಧಿಕ ನಾಯಕರು ಉತ್ತರಪ್ರದೇಶದಲ್ಲಿ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News