ಕೋವಿಡ್ ನಿರ್ಬಂಧದ ವೇಳೆ ಜನಸಾಮಾನ್ಯರ ಬದುಕು, ಆರ್ಥಿಕತೆ ಮುಖ್ಯ: ಪ್ರಧಾನಿ

Update: 2022-01-13 18:03 GMT

ಹೊಸದಿಲ್ಲಿ, ಜ. 13 : ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ದೇಶದ ಕೋವಿಡ್ ಪರಿಸ್ಥಿತಿಯ ಕುರಿತು ಮುಖ್ಯಮಂತ್ರಿಗಳೊಂದಿಗೆ ಸಂವಹನ ನಡೆಸಿದರು. ವೈರಸ್ ಹರಡುವುದನ್ನು ತಡೆಯಲು ಸ್ಥಳೀಯ ಕಂಟೈನ್ಮೆಂಟ್ ಕ್ರಮಗಳು ಹಾಗೂ ಒಮೈಕ್ರಾನ್‌ನಿಂದ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವುದನ್ನು ನಿಯಂತ್ರಿಸಲು ಕಾರ್ಯತಂತ್ರವನ್ನೂ ರೂಪಿಸುವಾಗ ಜೀವನೋಪಾಯಕ್ಕೆ ಕನಿಷ್ಠ ಹಾನಿಯ ಖಾತರಿ ನೀಡುವ ಬಗ್ಗೆ ಅವರು ಒತ್ತಿ ಹೇಳಿದ್ದಾರೆ. ‌

ಸಭೆಯಲ್ಲಿ ಪ್ರಧಾನಿ ಅವರು ಲಸಿಕೀಕರಣದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು. ಶೇ. 100 ಲಸೀಕೀಕರಣ ಸಾಧಿಸಲು ‘ಹರ್ ಘರ್ ದಸ್ತಕ್’ ಕಾರ್ಯಕ್ರಮವನ್ನು ಇನ್ನಷ್ಟು ತೀವ್ರಗೊಳಿಸುವ ಅಗತ್ಯವನ್ನು ಅವರು ಮರು ಉಚ್ಚರಿಸಿದರು. ‘‘ನಾವು 10 ದಿನಗಳಲ್ಲಿ ಸುಮಾರು 3 ಕೋಟಿ ಹದಿಹರೆಯದವರಿಗೆ ಲಸಿಕೆ ನೀಡಿದ್ದೇವೆ. ಇದು ಭಾರತದ ಸಾಮರ್ಥ್ಯ ಹಾಗೂ ಈ ಸವಾಲನ್ನು ಎದುರಿಸಲು ನಮ್ಮ ಸಿದ್ಧತೆಯನ್ನು ಪ್ರದರ್ಶಿಸಿದೆ’’ ಎಂದು ಅವರು ಹೇಳಿದರು. ಭಾರತದಲ್ಲಿ ತಯಾರಿಸಲಾದ ಲಸಿಕೆಗಳು ಪ್ರಪಂಚದಾದ್ಯಂತ ತಮ್ಮ ಸಾಬೀತುಪಡಿಸುತ್ತಿವೆ ಎಂದು ಅವರು ತಿಳಿದರು. 

ಇಂದು ಭಾರತ ಸುಮಾರು ಶೇ. 92ರಷ್ಟು ವಯಸ್ಕರಿಗೆ ಲಸಿಕೆಯ ಮೊದಲ ಡೋಸ್ ನೀಡಿದೆ ಎಂಬುದು ಪ್ರತಿಯೊಬ್ಬ ಭಾರತೀಯನು ಹೆಮ್ಮೆಪಟ್ಟುಕೊಳ್ಳುವ ವಿಚಾರ. ದೇಶದಲ್ಲಿ ಎರಡನೇ ಡೋಸ್ ಅನ್ನು ಸುಮಾರು ಶೇ. 70 ಜನರಿಗೆ ನೀಡಲಾಗಿದೆ ಎಂದು ಅವರು ಹೇಳಿದರು. ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಇದುವರೆಗೆ ಅನುಸರಿಸಿದ ಪೂರ್ವಭಾವಿ ಹಾಗೂ ಸಕ್ರಿಯ ಕ್ರಮಗಳನ್ನು ಮುಂದುವರಿಸಬೇಕು ಎಂದು ಅವರು ತಿಳಿಸಿದರು. 

‘‘ಮುಂಚೂಣಿ ಕಾರ್ಯಕರ್ತರಿಗೆ ಹಾಗೂ ಹಿರಿಯ ನಾಗರಿಕರಿಗೆ ನಾವು ಎಷ್ಟು ಬೇಗ ಬೂಸ್ಟರ್ ಡೋಸ್ ಅನ್ನು ಕೊಡುತ್ತೇವೆಯೋ ಅಷ್ಟು ಬೇಗ ನಮ್ಮ ಆರೋಗ್ಯ ವ್ಯವಸ್ಥೆ ಬಲಗೊಳ್ಳುತ್ತದೆ’’ ಎಂದು ಅವರು ಹೇಳಿದರು. ಕೋವಿಡ್ ನಿಯಂತ್ರಣಕ್ಕೆ ಕಾರ್ಯತಂತ್ರಗಳನ್ನು ರೂಪಿಸುವಾಗ ಆರ್ಥಿಕತೆ ಹಾಗೂ ಜನಸಾಮಾನ್ಯರ ಜೀವನೋಪಾಯವನ್ನು ಸುರಕ್ಷಿತಗೊಳಿಸುವುದು ತುಂಬಾ ಮುಖ್ಯ ಎಂದು ಅವರು ಪ್ರತಿಪಾದಿಸಿದರು. 

‘‘ಸಾಮಾನ್ಯ ಜನರ ಜೀವನೋಪಯಕ್ಕೆ ಕನಿಷ್ಠ ಹಾನಿಯಾಗಬೇಕು, ಆರ್ಥಿಕ ಚಟುವಟಿಕೆಗಳು ಹಾಗೂ ಆರ್ಥಿಕತೆಯ ವೇಗ ಕಾಪಾಡಿಕೊಳ್ಳಬೇಕು. ಯಾವುದೇ ಕಾರ್ಯತಂತ್ರ (ಕಂಟೈನ್ಮೆಂಟ್ ) ವನ್ನು ರೂಪಿಸುವಾಗ ಈ ವಿಷಯಗಳನ್ನು ಗಮನದಲ್ಲಿ ಇರಿಸಿಕೊಳ್ಳುವುದು ತುಂಬಾ ಮುಖ್ಯ’’ ಎಂದು ಅವರು ಹೇಳಿದರು. ‘‘ಆದುದರಿಂದ ಸ್ಥಳೀಯ ಕಂಟೈನ್ಮೆಂಟ್ ಬಗ್ಗೆ ಗಮನ ಕೇಂದ್ರೀಕರಿಸುವುದು ಉತ್ತಮ’’ ಎಂದು ಅವರು ತಿಳಿಸಿದರು. ಭಾರತದ 130 ಕೋಟಿ ಜನರು ತಮ್ಮ ಸಾಮೂಹಿಕ ಪ್ರಯತ್ನದ ಫಲವಾಗಿ ಕೋರೋನ ಸಾಂಕ್ರಾಮಿಕ ರೋಗದ ವಿರುದ್ಧ ಖಂಡಿತವಾಗಿ ಜಯಶಾಲಿಯಾಗುತ್ತಾರೆ ಎಂದು ಅವರು ಹೇಳಿದರು. ಒಮೈಕ್ರಾನ್ ರೂಪಾಂತರಿ ಈ ಹಿಂದಿನ ರೂಪಾಂತರಿಗಿಂತ ಹಲವು ಪಟ್ಟು ತೀವ್ರವಾಗಿ ಹರಡುತ್ತದೆ ಎಂದು ಪ್ರಧಾನಿ ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News