ಉಡುಪಿ: ಮಾಜಿ ಸಚಿವ ಸೊರಕೆ ಸಹಿತ 22 ಕಾಂಗ್ರೆಸ್ ಮುಖಂಡರ ವಿರುದ್ಧ ಪ್ರಕರಣ ದಾಖಲು

Update: 2022-01-14 14:06 GMT
ಕೊರಗ ಸಮುದಾಯದವರ ಮೇಲಿನ ಪೊಲೀಸ್ ದೌರ್ಜನ್ಯ ಖಂಡಿಸಿ ಜ.12ರಂದು ಉಡುಪಿ ಡಿಸಿ ಕಚೇರಿ ಎದುರು ಕಾಂಗ್ರೆಸ್ ಪ್ರತಿಭಟನೆ ನಡೆಸಿತ್ತು. (File Photo)

ಮಣಿಪಾಲ, ಜ.14: ಕೊರಗ ಸಮುದಾಯದವರ ಮೇಲಿನ ಪೊಲೀಸ್ ದೌರ್ಜನ್ಯ ವಿರೋಧಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಜ.12ರಂದು ಪ್ರತಿಭಟನೆ ನಡೆಸಿದ ಸೊರಕೆ, ಗೋಪಾಲ ಪೂಜಾರಿ ಸಹಿತ ಹಲವು ಮಂದಿ ಕಾಂಗ್ರೆಸ್ ಮುಖಂಡರ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಗೋಪಾಲ ಪೂಜಾರಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಸೇರಿದಂತೆ ಒಟ್ಟು 22 ಮಂದಿ ಕಾಂಗ್ರೆಸ್ ಮುಖಂಡರು ಸಕ್ಷಮ ಪ್ರಾಧಿಕಾರದಿಂದ ಯಾವುದೇ ಅನುಮತಿಯನ್ನು ಪಡೆದುಕೊಳ್ಳದೇ ವಿಧಿ ಬದ್ಧವಾಗಿ ಮಾಡಿದ ಆದೇಶವನ್ನು ಉಲ್ಲಂಘಿಸಿ, ಸಾಮಾಜಿಕ ಅಂತರದ ಕಾಪಾಡದೆ ಮಣಿಪಾಲ ಸಿಂಡಿಕೇಟ್ ಸರ್ಕಲ್‌ನಿಂದ ಡಿಸಿ ಕಚೇರಿವರೆಗೆ ಮೆರವಣಿಗೆ ನಡೆಸಿದ್ದಾರೆ.

ನಂತರ ಜಿಲ್ಲಾಧಿಕಾರಿ ಕಚೇರಿ ಬಳಿ ಗುಂಪುಗೂಡಿ ಭಾಷಣ ನಡೆಸಿ ಕೋವಿಡ್ ನಿಯಮಾವಳಿಗಳನ್ನು ಮತ್ತು ಕೋವಿಡ್ -19 ತಡೆಯಲು ಸರಕಾರ ಹೊರಡಿಸಿರುವ ಆದೇಶವನ್ನು ಉಲ್ಲಂಘಿಸಿ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವ ಇರುವ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ಯಶವಂತ್ ಪ್ರಭು ದೂರಿನಲ್ಲಿ ತಿಳಿಸಿದ್ದಾರೆ. ಅದರಂತೆ ಆರೋಪಿಗಳ ವಿರುದ್ಧ ಕಲಂ 188, 269 ಜೊತೆಗೆ 149 ಐಪಿಸಿ ಹಾಗೂ ಕಲಂ 5(1), 5(4) ಕರ್ನಾಟಕ ಎಪಿಡೆಮಿಕ್ ಡಿಸೀಸಸ್ ಆ್ಯಕ್ಟ್ ನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

‘ಕಾಂಗ್ರೆಸ್- ಬಿಜೆಪಿಗೆ ಪ್ರತ್ಯೇಕ ಕೋವಿಡ್ ರೂಲ್ಸ್ ಏಕೆ?’
ಕಾಂಗ್ರೆಸ್ ಪಕ್ಷದ ಪ್ರತಿಭಟನೆಯಲ್ಲಿ ಪಾಲ್ಗೊಂಡವರ ವಿರುದ್ದ ಪ್ರಕರಣ ದಾಖಲಿಸಿರುವ ಕ್ರಮವನ್ನು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಖಂಡಿಸಿದ್ದಾರೆ.

ಕೋವಿಡ್ ನಿಯಮಾವಳಿಗಳನ್ನು ಪಾಲಿಸಿ ನಡೆಸಿದ ಪ್ರತಿಭಟನಾ ಮೆರವಣಿಗೆ ಯಲ್ಲಿ ಭಾಗವಹಿಸಿದ ಕಾಂಗ್ರೆಸ್ ನಾಯಕರ ಸಹಿತ 22 ಮಂದಿ ವಿರುದ್ಧ ಜಿಲ್ಲಾಡಳಿತ ಸುಳ್ಳು ಪ್ರಕರಣ ದಾಖಲಿಸಿದೆ. ಆದರೆ ಜಿಲ್ಲೆಯಲ್ಲಿ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಬಿಜೆಪಿ ಪಕ್ಷದಿಂದ ಅನೇಕ ಕಾರ್ಯಕ್ರಮಗಳು ನಡೆಯುತ್ತಿದ್ದರೂ, ಅವರ ಮೇಲೆ ಯಾವುದೇ ಕೇಸನ್ನು ದಾಖಲಿಸಿಲ್ಲ. ಇವರ ಕಾರ್ಯಕ್ರಮಕ್ಕೆ ಯಾವುದೇ ರೀತಿಯಲ್ಲಿ ಕೇಸು ದಾಖಲಿಸದೆ ಜಿಲ್ಲಾಡಳಿತ ಕಣ್ಣು ಮುಚ್ಚಿ ಕುಳಿತಿದೆ. ಸಮಾಜದಲ್ಲಿ ತುಳಿತಕ್ಕೆ ಒಳಗಾದ ಜನಾಂಗದ ಪರವಾಗಿ ಮಾಡಿದ ಪ್ರತಿಭಟನೆಗೆ ಮಾತ್ರ ಕೇಸನ್ನು ದಾಖಲಿಸಿದ್ದಾರೆ ಎಂದು ರಮೇಶ್ ಕಾಂಚನ್ ಪ್ರಕಟಣೆಯಲ್ಲಿ ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News