ಕೆನಡಾದಲ್ಲಿ ತುರ್ತು ಬಳಕೆಯ ಲಸಿಕೆಯಾಗಿ ಕೊವ್ಯಾಕ್ಸಿನ್ಗೆ ಇನ್ನೂ ಅನುಮೋದನೆ ಲಭಿಸಿಲ್ಲ: ಆರೋಗ್ಯ ಪ್ರಾಧಿಕಾರದ ಸ್ಪಷ್ಟನೆ

Update: 2022-01-14 17:59 GMT

ಟೊರಂಟೊ, ಜ.14: ಭಾರತ್ ಬಯೊಟೆಕ್ ಸಂಸ್ಥೆಯ ಉತ್ತರ ಅಮೆರಿಕ ಸಹಭಾಗಿ ಸಂಸ್ಥೆ ಕೊವ್ಯಾಕ್ಸಿನ್ ಲಸಿಕೆಯನ್ನು ತುರ್ತು ಬಳಕೆಯ ಲಸಿಕೆಯಾಗಿ ಅನುಮೋದಿಸುವ ಪ್ರಸ್ತಾವನೆಯನ್ನು 6 ತಿಂಗಳ ಹಿಂದೆಯೇ ಸಲ್ಲಿಸಿದ್ದರೂ ಈ ಬಗ್ಗೆ ಕೆನಡಾದ ಆರೋಗ್ಯ ಇಲಾಖೆಯ ಪ್ರಾಧಿಕಾರ ‘ಹೆಲ್ತ್ ಕೆನಡಾ’  ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಈ ಪ್ರಸ್ತಾವನೆ ಈಗಲೂ ಪರಿಶೀಲನೆ ಹಂತದಲ್ಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಯೊಟೆಕ್ ಸಂಸ್ಥೆಯ ಕೆನಡಾದ ಅಧೀನ ಸಂಸ್ಥೆ ವ್ಯಾಕ್ಸಿಜೆನ್ 2021ರ ಜೂನ್ 30ರಂದು ಕೆನಡಾದ ಆರೋಗ್ಯ ಇಲಾಖೆ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಕೊವ್ಯಾಕ್ಸಿನ್ ಲಸಿಕೆಯನ್ನು ಕೆನಡಾದಲ್ಲಿ ತುರ್ತು ಬಳಕೆಗೆ ಅನುಮೋದಿಸಲಾಗುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅಗತ್ಯದ ಎಲ್ಲಾ ಮಾಹಿತಿಗಳನ್ನು ಕೂಲಂಕುಷವಾಗಿ ಪರಿಶೀಲಿಸಿದ ಬಳಿಕ ನಿರ್ಧಾರಕ್ಕೆ ಬರಲಾಗುವುದು. ಈಗಲೂ ಪರಿಶೀಲನೆ ಮುಂದುವರಿದಿರುವುದರಿಂದ ಯಾವಾಗ ನಿರ್ಧಾರ ಕೈಗೊಳ್ಳಲಾಗುವುದು ಎಂದು ಈಗಲೇ ಊಹಿಸಲು ಸಾಧ್ಯವಿಲ್ಲ ಎಂದು ಪ್ರಾಧಿಕಾರ ಟ್ವೀಟ್ ಮಾಡಿದೆ.

ಲಸಿಕೆಯ ಅನುಮೋದನೆ ಕೋರಿ ಸಲ್ಲಿಸಿದ ಅರ್ಜಿಗಳನ್ನು ಸ್ವತಂತ್ರ ಪ್ರಕ್ರಿಯೆಯ ಮೂಲಕ ಪರಿಶೀಲಿಸಲಾಗುವುದು ಹಾಗೂ ವೈಜ್ಞಾನಿಕ ನಿಖರತೆ ಮತ್ತು ವೈದ್ಯಕೀಯ ಪುರಾವೆಯನ್ನು ಆಧರಿಸಿ ದೃಢೀಕರಣ ಮಾಡಲಾಗುತ್ತದೆ. ಹೆಚ್ಚುವರಿ ಅಂಕಿಅಂಶದ ಅಗತ್ಯತೆ, ಪ್ರಾಯೋಜಕರೊಂದಿಗೆ ಚರ್ಚೆ, ಸುರಕ್ಷತೆಯ ಕುರಿತ ಮಾಹಿತಿ ಇತ್ಯಾದಿ ಹಲವು ವಿಷಯಗಳನ್ನು ಆಧರಿಸಿ ಪರಿಷ್ಕರಣೆ ಮುಕ್ತಾಯಗೊಳ್ಳಲಿದೆ ಎಂದು ಪ್ರಾಧಿಕಾರ ಹೇಳಿದೆ.

2021ರ ನವೆಂಬರ್ ನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಕೊವ್ಯಾಕ್ಸಿನ್ ಲಸಿಕೆಯನ್ನು ತುರ್ತು ಬಳಕೆಯ ಲಸಿಕೆಯ ಪಟ್ಟಿಗೆ ಸೇರ್ಪಡೆಗೊಳಿಸಿತ್ತು. ಕೆನಡಾದಲ್ಲಿ ಪ್ರಯಾಣದ ಉದ್ದೇಶಕ್ಕೆ ಈ ಲಸಿಕೆಯನ್ನು ಮಾನ್ಯತೆ ಮಾಡಲಾಗಿದ್ದು ಕೊವ್ಯಾಕ್ಸಿನ್ ನ 2 ಲಸಿಕೆ ಪಡೆದವರನ್ನು ಪೂರ್ಣ ಪ್ರಮಾಣದ ಲಸಿಕೆ ಪಡೆದವರೆಂದು ಪರಿಗಣಿಸಲಾಗುತ್ತಿದೆ.

ಕೆನಡಾದಲ್ಲಿ ಇದುವರೆಗೆ 72 ಮಿಲಿಯನ್ ಡೋಸ್ ಲಸಿಕೆ ನೀಡಲಾಗಿದ್ದು ಇದರಲ್ಲಿ ಪೈಝರ್ ಮತ್ತು ಮೊಡೆರ್ನಾ ಲಸಿಕೆಯ ಪ್ರಮಾಣ ಸುಮಾರು 66 ಮಿಲಿಯನ್ ಆಗಿದ್ದರೆ, ಅಸ್ಟ್ರಾಝೆನೆಕ ಮತ್ತು ಜಾನ್ಸನ್ ಆ್ಯಂಡ್ ಜಾನ್ಸನ್ ಲಸಿಕೆಗೆ ಅನುಮೋದನೆ ದೊರೆತಿದ್ದರೂ ಇದರ ಬಳಕೆ ಸೀಮಿತವಾಗಿದೆ.
  
ಈ ಮಧ್ಯೆ, ಕೋವಿಡ್-19 ರೋಗಾಣು ವಿರುದ್ಧದ ಚಿಕಿತ್ಸೆಯಲ್ಲಿ ಪೈಝರ್ ಸಂಸ್ಥೆಯ ಔಷಧವನ್ನು ಬಳಸುವ ಕುರಿತ ಪ್ರಸ್ತಾವನೆಯನ್ನು ಆದ್ಯತೆಯ ಮೇರೆಗೆ ಪರಿಶೀಲಿಸಿ 10 ದಿನದೊಳಗೆ ನಿರ್ಧಾರಕ್ಕೆ ಬರಲಾಗುವುದು ಎಂದು ಕೆನಡಾದ ಆರೋಗ್ಯ ಪ್ರಾಧಿಕಾರದ ಮುಖ್ಯ ವೈದ್ಯಕೀಯ ಸಲಹೆಗಾರರಾದ ಡಾ. ಸುಪ್ರಿಯಾ ಶರ್ಮ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News