ಅಮೆಝಾನ್‌, ಫೆಡೆಕ್ಸ್‌ ಸಂಸ್ಥೆಗಳ ಪಾರ್ಸೆಲ್‌ ಇರುವ ಟ್ರೈನ್‌ ಗೆ ನುಗ್ಗಿ ಕಳ್ಳತನ: ಹಳಿಯಲ್ಲಿ ಖಾಲಿಪೆಟ್ಟಿಗೆಗಳ ರಾಶಿ !

Update: 2022-01-15 06:32 GMT
Photo: Asianet newsable

ಲಾಸ್ ಏಂಜಲಿಸ್: ಲಾಸ್ ಏಂಜಲಿಸ್ ನಗರದ ರೈಲ್ವೆ ಹಳಿಗಳಲ್ಲಿ ಪ್ರತಿದಿನವೆಂಬಂತೆ ತೆರೆದು ಬಿಸಾಡಿದ ರಟ್ಟಿನ ಪೆಟ್ಟಿಗೆಗಳ ರಾಶಿ ಕಾಣುತ್ತದೆ. ಈ ಹಾದಿಯಲ್ಲಿ ಹಾದುಹೋಗುವ ಡಜನ್‍ಗಟ್ಟಲೆ ಗೂಡ್ಸ್ ರೈಲುಗಳಿಗೆ ಪ್ರತಿನಿತ್ಯವೆಂಬಂತೆ ಕನ್ನ ಹಾಕಲಾಗುತ್ತಿರುವುದೇ ಇದಕ್ಕೆ ಕಾರಣ.

ನಗರದ ಹೃದಯಭಾಗದಲ್ಲಿರುವ ರೈಲ್ವೆ ಹಳಿಯ ಮೂಲಕ ಹಾದು ಹೋಗುವ ಗೂಡ್ಸ್ ರೈಲುಗಳಿಂದ ನಡೆಯುವ ಈ ಕಳ್ಳತನಗಳಿಂದ ಅಮೆಝಾನ್, ಟಾರ್ಗೆಟ್, ಯುಪಿಎಸ್, ಫೆಡ್‍ಎಕ್ಸ್ ಸೇರಿದಂತೆ ಹಲವು ಕಂಪೆನಿಗಳು ಇತ್ತೀಚೆಗೆ ಬಹಳಷ್ಟು ಬಾಧಿತವಾಗಿವೆ.

ಈ ರೈಲುಗಳು ನಿಲುಗಡೆಯಾಗುತ್ತಿದ್ದಂತೆಯೇ ಕಳ್ಳರು ರೈಲು ಹತ್ತಿ ಸುಲಭವಾಗಿ ಬೀಗಗಳನ್ನು ಬೋಲ್ಟ್ ಕಟ್ಟರ್‍ಗಳನ್ನು ಬಳಸಿ ಒಡೆದು ನಂತರ ತಮಗೆ ಬೇಕೆನಿಸಿದ ವಸ್ತುಗಳನ್ನು ಕದ್ದು ಅನಗತ್ಯ ಹಾಗೂ ಅಗ್ಗದ ವಸ್ತುಗಳನ್ನು ಅಲ್ಲಿಯೇ ಬಿಸಾಕಿ ತೆರಳುತ್ತಾರೆ.

ಡಿಸೆಂಬರ್ 2020ರಿಂದ ಲಾಸ್ ಏಂಜಲಿಸ್ ಪ್ರದೇಶದಲ್ಲಿ ಕಳ್ಳತನಗಳ ಸಂಖ್ಯೆ ಶೇ 160ರಷ್ಟು ಹೆಚ್ಚಾಗಿದೆ.  ಅಕ್ಟೋಬರ್ 2020ಗೆ ಹೋಲಿಸಿದಾಗ ಅಕ್ಟೋಬರ್ 2021ರಲ್ಲಿ ಶೇ 356ಗೂ ಅಧಿಕ ಕಳ್ಳತನಗಳಾಗಿವೆ ಎಂದು ತಿಳಿದು ಬಂದಿದೆ.

ಈ ಸಮಸ್ಯೆ ಸಾಲದೆಂಬಂತೆ ಈ ಸರಕು ರೈಲುಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯೂ ಹಲವು ಬಾರಿ ದಾಳಿಗೊಳಗಾಗುತ್ತಾರೆ. 2021ರ ಕೊನೆಯ ತ್ರೈಮಾಸಿಕದಲ್ಲಿ ಪ್ರತಿದಿನ ಕನಿಷ್ಠ 90 ಕಂಟೇನರ್‍ಗಳಲ್ಲಿ ದಾಂಧಲೆಗ್ಯದು ಕಳ್ಳತನ ನಡೆಸಲಾಗಿದೆ.

ಯೂನಿಯನ್ ಪೆಸಿಫಿಕ್ ರೈಲುಗಳಲ್ಲಿ ಭದ್ರತೆ ಹೆಚ್ಚಿಸಲು ಕ್ರಮಕೈಗೊಳ್ಳಲಾಗಿದೆ ಹಾಗೂ ಹೆಚ್ಚುವರಿ ಸಿಬ್ಬಂದಿಗಳ ನೇಮಕಾತಿಯೂ ನಡೆದಿದೆ ಎಂದು ಅಧಿಕಾರಿಗಳು  ಹೇಳಿದ್ದಾರೆ.

ಕಳೆದ ವರ್ಷ 100ಕ್ಕೂ ಅಧಿಕ ಮಂದಿಯನ್ನು ಕಳ್ಳತನ ಪ್ರಕರಣಗಳಲ್ಲಿ ಬಂಧಿಸಲಾಗಿದೆ. ಆದರೆ ಬಂಧನಕ್ಕೊಳಗಾದವರು ಸುಲಭವಾಗಿ ಬಿಡುಗೆಗೊಳ್ಳುವುದರಿಂದ ಮತ್ತೆ ಅದೇ ಕಾಯಕದಲ್ಲಿ ತೊಡಗುತ್ತಾರೆ.

ಒಂದು ಅಂದಾಜಿನ ಪ್ರಕಾರ ಕಳೆದ ವರ್ಷ 50 ಲಕ್ಷ ಡಾಲರ್ ಮೌಲ್ಯದ ವಸ್ತುಗಳು ರೈಲುಗಳಿಂದ ಕಳವುಗೈಯ್ಯಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News