ಡ್ರೈವಿಂಗ್‌ ನಡುವೆ ಕುಸಿದುಬಿದ್ದ ಚಾಲಕ: ಬಸ್‌ ನಿಯಂತ್ರಣಕ್ಕೆ ಪಡೆದು ಹಲವರ ಜೀವ ಉಳಿಸಿದ ಮಹಿಳೆ !

Update: 2022-01-15 12:09 GMT
Photo: Twitter screengrab/Pune mirror

ಪುಣೆ,ಜ.15: ಮಕ್ಕಳು, ಮಹಿಳೆಯರನ್ನು ಹೊತ್ತೊಯ್ಯುತ್ತಿದ್ದ ಮಿನಿ ಬಸ್ಸೊಂದರ ಚಾಲಕ ಚಾಲನೆ ಮಾಡುತ್ತಿದ್ದಂತೆ ಅನಾರೋಗ್ಯದಿಂದ ಕುಸಿದಿದ್ದು, ತಕ್ಷಣವೇ ಅದೇ ಬಸ್ಸಿನಲ್ಲಿದ್ದ ಮಹಿಳೆಯೋರ್ವರು ಸಮಯಪ್ರಜ್ಞೆಯಿಂದ ಬಸ್ಸನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ಮೆಚ್ಚುಗೆಗೆ ಪಾತ್ರವಾಗಿದ್ದಾರೆ. 

ಜನವರಿ 7 ರಂದು ನಡೆದಿದೆ ಎನ್ನಲಾದ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. 

ಸಮಯಪ್ರಜ್ಞೆ ಮೆರೆದ ಮಹಿಳೆಯನ್ನು ಯೋಗಿತಾ ಸತವ್ ಎಂದು ಗುರುತಿಸಲಾಗಿದ್ದು,  ಇತರ ಮಹಿಳೆಯರು ಮತ್ತು ಮಕ್ಕಳೊಂದಿಗೆ ಯೋಗಿತಾ ಮಹಾರಾಷ್ಟ್ರದ ಪುಣೆ ಸಮೀಪದ ಶಿರೂರಿನಲ್ಲಿರುವ ಕೃಷಿ ಪ್ರವಾಸೋದ್ಯಮ ಕೇಂದ್ರದಲ್ಲಿ ಪಿಕ್ನಿಕ್ ಮುಗಿಸಿ ಪ್ರಯಾಣಿಸುತ್ತಿದ್ದರು. ಪ್ರಯಾಣದ ನಡುವೆ ಚಾಲಕ ಅನಾರೋಗ್ಯ ಪೀಡಿತರಾದ ಚಾಲಕ ನಿರ್ಜನ ಪ್ರದೇಶವೊಂದರಲ್ಲಿ ಬಸ್‌ ನಿಲ್ಲಿಸಿದ್ದಾರೆ. ಇದರಿಂದ ಮಕ್ಕಳು ಹಾಗೂ ಮಹಿಳೆಯರು ಭಯಭೀತಿಗೊಂಡಿದ್ದಾರೆ. 

ತಕ್ಷಣವೇ ಯೋಗಿತಾ ಬಸ್‌ ತನ್ನ ನಿಯಂತ್ರಣಕ್ಕೆ ಪಡೆದಿದ್ದು, ಸ್ಥಳೀಯ ಆಸ್ಪತ್ರೆಯೊಂದಕ್ಕೆ ಬಸ್‌ ಚಲಾಯಿಸಿದ್ದಾರೆ. ಇದರಿಂದ ಸರಿಯಾದ ಸಮಯಕ್ಕೆ ಚಾಲಕನಿಗೆ ಚಿಕಿತ್ಸೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. 
 
ನನಗೆ ಕಾರು ಚಲಾಯಿಸಲು ಗೊತ್ತಿತ್ತು. ಚಾಲಕ ಅನಾರೋಗ್ಯ ಪೀಡಿತರಾದ್ದರಿಂದ ಅವರಿಗೆ ತಕ್ಷಣ ಚಿಕಿತ್ಸೆ ನೀಡುವುದು ಆದ್ಯತೆಯಾಗಿತ್ತು. ಹಾಗಾಗಿ ಬಸ್‌ ಚಲಾಯಿಸಿಕೊಂಡು ಬಂದು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದೇನೆ ಎಂದು ಯೋಗಿತಾ ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News