ಕೇಂದ್ರ ಸರಕಾರವನ್ನು ಟೀಕಿಸಿ ಫೇಸ್ ಬುಕ್ ಪೋಸ್ಟ್ : ಮರಾಠಿ ಟಿವಿ ಷೋ ನಿಂದ ನಟ ಕಿರಣ್ ಮಾನೆ ಔಟ್

Update: 2022-01-15 13:49 GMT
Photo: Kiran mane/Facebook

ಮುಂಬೈ: ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ರಾಜಕೀಯ ವಿಚಾರಧಾರೆ ಹಂಚಿಕೊಂಡದ್ದಕ್ಕಾಗಿ ಮರಾಠಿಯ ಜನಪ್ರಿಯ ಕಿರುತೆರೆ ನಟ ಕಿರಣ್‌ ಮಾನೆ, ಇದುವರೆಗೆ ನಟಿಸುತ್ತಿದ್ದ ಷೋದಿಂದ ವಜಾಗೊಂಡಿದ್ದಾರೆ ಎಂದು ತಿಳಿದು ಬಂದಿದೆ.  ಅವರು ಇತ್ತೀಚೆಗೆ ಕೇಂದ್ರ ಸರಕಾರವನ್ನು ಟೀಕಿಸಿ ಸಾಮಾಜಿಕ ತಾಣದಲ್ಲಿ ವಿಡಂಬನಾತ್ಮಕ ಪೋಸ್ಟ್‌ ಮಾಡಿದ್ದರು ಎನ್ನಲಾಗಿದೆ.

ಮುಲ್ಗಿ ಝಲಿ ಹೋ (Mulgi Zali Ho) ಟಿವಿ ಷೋ ವಿಲಾಸ್‌ ಪಾಟಿಲ್‌ ಎಂಬ ಪಾತ್ರದಲ್ಲಿ ನಟಿಸುತ್ತಿದ್ದ ಮಾನೆ ಅವರನ್ನು ಷೋದಿಂದ ಟಿವಿ ಚಾನೆಲ್‌ ಹೊರ ಹಾಕಿದೆ. ಏಕಾಏಕಿ ವಾಹಿನಿ ಕೆಲಸದಿಂದ ವಜಾಗೊಳಿಸಿರುವುದು ತನಗೆ ಆಘಾತ ನೀಡಿದೆ ಎಂದು ಕಿರಣ್‌ ಮಾಣೆ ETimes TV ಜೊತೆಗೆ ತಮ್ಮ ನೋವು ಹಂಚಿಕೊಂಡಿದ್ದಾರೆ. 
 
“ನಾನು ಯಾವತ್ತೂ ಸಾಮಾಜಿಕ ಮಾಧ್ಯಮದಲ್ಲಿ ವಿಡಂಬನಾತ್ಮಕ ಪೋಸ್ಟ್‌ ಹಾಕುತ್ತಿರುತ್ತೇನೆ. ಕೆಲವು ಬಾರಿ ಅದು ನೇರ ಮತ್ತು ತೀಕ್ಷ್ಣವಾಗಿರುತ್ತದೆ. ನನ್ನ ದೃಷ್ಟಿಕೋನ ಮತ್ತು ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳುತ್ತೇನೆ. ನನಗನ್ನಿಸುತ್ತೆ, ಎಲ್ಲರಿಗೂ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುವ ಹಕ್ಕಿದೆ. ಆದರೆ, ಕೆಲವು ರಾಜಕೀಯ ಶಕ್ತಿಗಳು ನಾನು ಅವರನ್ನು ಗುರಿ ಮಾಡುತ್ತಿದ್ದೇನೆ ಎಂದು ಭಾವಿಸುತ್ತದೆ. ಆದರೆ ಯಾರನ್ನೂ ಗುರಿ ಮಾಡುವ ಉದ್ದೇಶ ನನಗಿಲ್ಲ. ಕೆಲವೊಂದು ಬಾರಿ ನನ್ನನ್ನೂ ಹಲವರು ಟ್ರಾಲ್‌ ಮಾಡುತ್ತಾರೆ. ನಾನು ಅದನ್ನು ಸಕರಾತ್ಮಕವಾಗಿ ಸ್ವೀಕರಿಸಿ ಮುಂದೆ ಹೋಗುತ್ತೇನೆ. ಆದರೆ ಈಗ ನನಗೆ ಏಕಾಏಕಿ ಷೋ ತಯಾರಕರಿಂದ ಕರೆ ಬಂದಿದೆ. ನಾನು ನಿರ್ವಹಿಸುತ್ತಿದ್ದ ಪಾತ್ರಕ್ಕೆ ಬೇರೆಯವರನ್ನು ಆಯ್ಕೆ ಮಾಡಲಾಗಿದೆ ಎಂದು ನನಗೆ ತಿಳಿಸಿದ್ದಾರೆ. 

"ಏಕಾಏಕಿ ನನ್ನನ್ನು ವಜಾಗೊಳಿಸಿರುವುದು ನನಗೆ ಆಘಾತ ತಂದಿದೆ. ತಕ್ಷಣವೇ ನಾನು ಚಾನೆಲ್‌ ಬ್ಯುಸಿನೆಸ್‌ ಹೆಡ್‌ ಅವರನ್ನು ಸಂಪರ್ಕಿಸಲು ಪ್ರಯತ್ನ ಪಟ್ಟೆನಾದರೂ ಅವರು ನನ್ನ ಕರೆಗೆ ಪ್ರತಿಕ್ರಿಯಿಸಿಲ್ಲ. ಬಳಿಕ ನನ್ನ ಸಹೋದ್ಯೋಗಿಗಳಿಗೆ ಕರೆ ಮಾಡಿ ವಿಚಾರಿಸಿದೆ. ಸಾಮಾಜಿಕ ಜಾಲತಾಣದಲ್ಲಿ ರಾಜಕೀಯ ಬರೆಯುವುದರಿಂದ ನನ್ನ ಪಾತ್ರವನ್ನು ಬೇರೆಯವರೊಂದಿಗೆ ಬದಲಾಯಿಸಲಾಗಿದೆ ಎಂದು ನನಗೆ ಅವರು ತಿಳಿಸಿದ್ದಾರೆ. ಇದು ನನಗೆ ಆಶ್ಚರ್ಯಕರವಾಗಿತ್ತು. ನಾವು ಏನು ಬರೆಯಬೇಕು? ಯಾವುದು ಹಂಚಬೇಕು   ಎನ್ನುವುದಕ್ಕೂ ಇವರಿಂದ ಅನುಮತಿ ಪಡೆಯಬೇಕೆ? ನಾನು ಮಹಾರಾಷ್ಟ್ರದಲ್ಲಿ ಬದುಕುತ್ತಿದ್ದೇನೆ. ಇಲ್ಲಿ ಎಲ್ಲರಿಗೂ ಅವರ ಯೋಚನೆಗಳನ್ನು ಹಂಚಿಕೊಳ್ಳುವ ಹಕ್ಕಿದೆ ಎಂದು ಭಾವಿಸಿದ್ದೆ. ಅಷ್ಟಕ್ಕೂ ಸೋಷಿಯಲ್‌ ಮೀಡಿಯಾದ ಪೋಸ್ಟ್‌ಗಳು ಒಬ್ಬರ ವೃತ್ತಿಜೀವನವನ್ನು ಹೇಗೆ ಮುಳುಗಿಸಬಹುದು ಎಂದು ನನಗೆ ಅರ್ಥವಾಗುತ್ತಿಲ್ಲ" ಎಂದು ಮಾನೆ ಹೇಳಿದ್ದಾರೆ. 

ಅವರು ಅಭಿನಯಿಸುತ್ತಿದ್ದ ಜನಪ್ರಿಯ ಪಾತ್ರ  ವಿಲಾಸ್ ಪಾಟೀಲ್ ಅನ್ನು ತೊರೆಯಬೇಕಾದ ಬಗ್ಗೆ ಪ್ರತಿಕ್ರಿಯಿಸಿದ ಕಿರಣ್, "ನಟನೊಬ್ಬ ತನ್ನ ಪಾತ್ರಕ್ಕೆ ಷೋ ನಡುವೆಯೇ ವಿದಾಯ ಹೇಳುವುದು ನೋವಿನ ಸಂಗತಿ. ವಿಲಾಸ್ ಪಾಟೀಲ್ ಪಾತ್ರದಲ್ಲಿ ಮತ್ತೆ ಅವಕಾಶ ಸಿಗುವುದಿಲ್ಲ ಎಂದು ನಾನು ಇನ್ನೂ ದುಖಿತನಾಗಿದ್ದೇನೆ" ಎಂದು ಹೇಳಿದ್ದಾರೆ. 

"ಶೂಟಿಂಗ್‌ ವೇಳೆ ಅನುಚಿತ ವರ್ತಿಸುವವರನ್ನೆಲ್ಲಾ ಪಾತ್ರದ ಮುಂದುವರಿಕೆಗಾಗಿ ನಿಲ್ಲಿಸುತ್ತಾರೆ. ಅರ್ಧಕ್ಕೆ ಬಿಡುತ್ತೇನೆ ಎಂದವರನ್ನು ತಯಾರಕರು ಮನವೊಲಿಸಿ ಪಾತ್ರದಲ್ಲಿ ಮುಂದುವರೆಯುವಂತೆ ಒಪ್ಪಿಸುತ್ತಾರೆ. ಆದರೆ, ಪಾತ್ರದಲ್ಲಿ ಮುಂದುವರೆಯಲು ಇಷ್ಟವಿದ್ದೂ ನನಗೆ ಈ ರೀತಿ ಆಗಿರುವುದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ" ಎಂದಿದ್ದಾರೆ.

ನ್ಯಾಯಕ್ಕಾಗಿ ಹೋರಾಟ ನಡೆಸುವುದಾಗಿ ಕಿರಣ್ ಹೇಳಿದ್ದಾರೆ. "ನನಗೆ ಏನಾಗಿದೆ, ಅದು ಖಂಡಿತವಾಗಿಯೂ ಸರಿಯಲ್ಲ ಎಂದು ನಾನು ಭಾವಿಸುವ ಕಾರಣ ನಾನು ನ್ಯಾಯಕ್ಕಾಗಿ ಹೋರಾಡಲು ನಿರ್ಧರಿಸಿದ್ದೇನೆ, ನಾನು ಈಗ ನಿಜ ಜೀವನದಲ್ಲಿ ನನ್ನ ರೀಲ್ ಪಾತ್ರದ ವಿಲಾಸ್ ಪಾಟೀಲ್ ಪಾತ್ರವನ್ನು ಮಾಡಬೇಕು" ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News