ಸರಕಾರ ಉದ್ಯೋಗ ಸೃಷ್ಟಿಸುವ ಬದಲು, ಇದ್ದ ಕೆಲಸ ಕಿತ್ತುಕೊಂಡಿದೆ: ಆಕ್ರೋಶ ವ್ಯಕ್ತಪಡಿಸಿದ ಅತಿಥಿ ಉಪನ್ಯಾಸಕರು

Update: 2022-01-15 14:31 GMT

ಉಡುಪಿ, ಜ.15: ರಾಜ್ಯ ಸರಕಾರದ ಅವೈಜ್ಞಾನಿಕ ಆದೇಶದಿಂದ ರಾಜ್ಯದ 14,500 ಅತಿಥಿ ಉಪನ್ಯಾಸಕರ ಪೈಕಿ 7,250 ಮಂದಿ ನಿರುದ್ಯೋಗಿಗಳಾಗಿದ್ದಾರೆ. ಸರಕಾರ ಉದ್ಯೋಗ ಸೃಷ್ಠಿ ಮಾಡುವ ಬದಲು ಇದ್ದ ಉದ್ಯೋಗವನ್ನು ಕಿತ್ತುಕೊಂಡು ನಮ್ಮನ್ನು ಬೀದಿಪಾಲು ಮಾಡಿದೆ ಎಂದು ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಹಿತರಕ್ಷಣಾ ಸಮಿತಿಯ ಜಿಲ್ಲಾ ಘಟಕ ಅಧ್ಯಕ್ಷೆ ಡಾ.ಶಾಹಿದಾ ಜಹಾನ್ ಆರೋಪಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇಡಿಕೆ ಈಡೇರಿಸುವಂತೆ ಕಳೆದ ಒಂದು ತಿಂಗಳಿನಿಂದ ನಾವು ಹೋರಾಟ ಮಾಡುತ್ತಿದ್ದೇವೆ. ಇದರ ಫಲವಾಗಿ ಸರಕಾರ ಹೊಸ ಆದೇಶವನ್ನು ಹೊರಡಿಸಿತು. ಅತಿಥಿ ಉಪನ್ಯಾಸಕರ ಸಂಭಾವನೆ ಹೆಚ್ಚಿಸುವುದಕ್ಕಾಗಿ 14,500 ಮಂದಿಯ ಬದಲಿಗೆ 7,250 ಮಂದಿಗೆ ಮಾತ್ರ ಅವಕಾಶ ನೀಡಿ, ಎಂಟು ಗಂಟೆಗಳ ಕಾರ್ಯ ಭಾರವನ್ನು 15ಗಂಟೆಗಳಿಗೆ ಹೆಚ್ಚಿಸಲಾಗಿದೆ. ಮೂರು ದಿನದ ಬದಲಿಗೆ ಆರು ದಿನಗಳ ಕಾಲ ಕಾರ್ಯನಿರ್ವಹಿಸುವಂತೆ ಆದೇಶ ಹೊರಡಿಸಲಾಗಿದೆ ಎಂದರು.

ಇದರಿಂದ ವಾರದಲ್ಲಿ ಮೊದಲ ಮೂರು ದಿನ ಕಾರ್ಯನಿರ್ವಹಿಸುತ್ತಿದ್ದ ಅತಿಥಿ ಉಪನ್ಯಾಸಕರಿಗೆ ಕೆಲಸ ಸಿಕ್ಕಿದರೆ, ನಂತರದ ಮೂರು ದಿನ ಕಾರ್ಯ ನಿರ್ವಹಿಸುತ್ತಿದ್ದವರು ಕೆಲಸ ಕಳೆದುಕೊಳ್ಳಲಿದ್ದಾರೆ. ಮೊದಲು ಪಾವತಿಸುತ್ತಿದ್ದ 13,500ರೂ. ವೇತನವನ್ನು ದುಪ್ಪಟ್ಟುಗೊಳಿಸಿ 28,000-32,000 ರೂ.ಗೆ ಹೆಚ್ಚಿಸಲಾಗಿದೆ. ಅಂದರೆ ಇಬ್ಬರ ಕೆಲಸ ಒಬ್ಬರಿಂದಲೇ ಮಾಡಿಸಿ, ಇಬ್ಬರ ಸಂಬಳ ಒಬ್ಬರಿಗೆ ನೀಡಲಾಗುತ್ತಿದೆ. ಇದು ಹಣ ಹೆಚ್ಚಿಸಿರುವುದಲ್ಲ, ಬದಲು ಒಬ್ಬರ ಹಣ ಕಸಿದು ಇನ್ನೊಬ್ಬರಿಗೆ ನೀಡುತ್ತಿರುವುದಾಗಿದೆ. ಸರಕಾರದ ಹಿಡನ್ ಅಜೆಂಡಾವನ್ನು ನಾವು ಅರ್ಥ ಮಾಡಬೇಕಾಗಿದೆ ಎಂದು ಅವರು ದೂರಿದರು.

ಕುಂದಾಪುರ ತಾಲೂಕು ಅಧ್ಯಕ್ಷ ಮಣಿಕಂಠ ಮಾತನಾಡಿ, ಹೊಸ ಆದೇಶ ದಂತೆ ಜ.17ರಿಂದ ಐದು ದಿನಗಳ ಕಾಲ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ನಾವು ವರ್ಷದ 12 ತಿಂಗಳೂ ಕಾರ್ಯಭಾರದೊಂದಿಗೆ ಸೇವಾ ಭದ್ರತೆ ಒದಗಿಸಬೇಕೆಂದು ಹೋರಾಟದ ಮಾಡಿರುವುದು. ಆದರೆ ಸರಕಾರ ಇದಕ್ಕೆ ಒಪ್ಪದೆ ಕೇವಲ 10 ತಿಂಗಳಿಗೆ ಸಂಭಾವನೆ ನೀಡಿ ಪ್ರತಿವರ್ಷ ಮರು ನೇಮಕಾತಿ ಮಾಡಬೇಕೆಂದು ಆದೇಶ ನೀಡಿದೆ. ನಮ್ಮನ್ನು ಖಾಯಮಾತಿ ಮಾಡಿಲ್ಲ. ಆದುದರಿಂದ ನಾವು ಯಾರು ಕೂಡ ಈ ಕೆಲಸಕ್ಕೆ ಅರ್ಜಿ ಸಲ್ಲಿಸುವು ದಿಲ್ಲ. ಎಲ್ಲ 14,500 ಮಂದಿಗೂ ನ್ಯಾಯ ಸಿಗುವವರೆಗೆ ಹೋರಾಟ ಮುಂದು ವರೆಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಅತಿಥಿ ಉಪನ್ಯಾಸಕರಾದ ಸುಜಾತ, ಗುರುರಾಜ್, ವಿನಯಚಂದ್ರ, ವೇದ ಉಪಸ್ಥಿತರಿದ್ದರು.

ಈಗಾಗಲೇ ಸರಕಾರದ ನೀತಿಯಿಂದ ಹಲವು ಮಂದಿ ಅತಿಥಿ ಉಪನ್ಯಾಸಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರಕಾರ ಅತಿಥಿ ಉಪನ್ಯಾಸಕರಿಗೆ ಈ ಆದೇಶದ ಮೂಲಕ ಸಿಹಿ ನೀಡಿರುವುದಲ್ಲ, ಬದಲು ವಿಷ ನೀಡಿದೆ. 7,250 ಮಂದಿ ಉದ್ಯೋಗ ಕಳೆದುಕೊಂಡ ಭೀತಿಯಲ್ಲಿ ಮಾನಸಿಕ ಖಿನ್ನತೆ ಒಳಗಾಗಿದ್ದಾರೆ. ಇದು ನಮ್ಮ ಹೋರಾಟವನ್ನು ಹತ್ತಿಕ್ಕುವ ಯತ್ನ ಮತ್ತು ಒಡೆದು ಆಳುವ ನೀತಿಯಾಗಿದೆ.
-ವಿನಯಚಂದ್ರ, ಅತಿಥಿ ಉಪನ್ಯಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News