ನನ್ನ ಒಪ್ಪಿಗೆಯಿಲ್ಲದೆ 25 ರಾಜ್ಯ ವಿವಿಗಳಿಗೆ ಕುಲಪತಿಗಳನ್ನು ನೇಮಕ ಮಾಡಲಾಗಿದೆ: ಪಶ್ಚಿಮಬಂಗಾಳ ರಾಜ್ಯಪಾಲ

Update: 2022-01-15 15:00 GMT
Photo: twitter.com/jdhankhar1

ಕೋಲ್ಕತಾ, ಜ.15: ಕುಲಾಧಿಪತಿಯಾಗಿ ತನ್ನ ಒಪ್ಪಿಗೆಯಿಲ್ಲದೆ ಈವರೆಗೆ ರಾಜ್ಯದ 25 ವಿವಿಗಳಿಗೆ ಕುಲಪತಿಗಳನ್ನು ನೇಮಕಗೊಳಿಸಲಾಗಿದೆ ಎಂದು ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧಂಕರ್ ಅವರು ಶನಿವಾರ ಆರೋಪಿಸಿದ್ದಾರೆ.

ಕುಲಾಧಿಪತಿಯಾಗಿ ಧಂಕರ್ ಅವರು ಕುಲಪತಿಗಳಾಗಿ ನೇಮಕಗೊಳಿಸಿದ್ದ ಆರ್ಟ್ಸ್ ಫ್ಯಾಕಲ್ಟಿಯ ಡೀನ್ ಪ್ರೊಫೆಸರ್ ತಪನ್ ಮಂಡಲ್ ಅವರು ವೈಯಕ್ತಿಕ ಕಾರಣಗಳಿಂದ ಹುದ್ದೆಯನ್ನು ಸ್ವೀಕರಿಸಲು ನಿರಾಕರಿಸಿದ ಬಳಿಕ ಮಮತಾ ಬ್ಯಾನರ್ಜಿ ಸರಕಾರವು ಪ್ರೊ.ಸೋಮ ಬಂದೋಪಾಧ್ಯಾಯ ಅವರನ್ನು ಡೈಮಂಡ್ ಹಾರ್ಬರ್ ಮಹಿಳಾ ವಿವಿಯ ನೂತನ ಕುಲಪತಿಗಳಾಗಿ ನೇಮಕಗೊಳಿಸಿದ 24 ಗಂಟೆಗಳಲ್ಲಿ ಈ ಆರೋಪ ಹೊರಬಿದ್ದಿದೆ.

ಶೋಧ ಸಮಿತಿಯು ಆಯ್ಕೆ ಮಾಡಿದ್ದ ಕುಲಪತಿಗಳ ಹೆಸರುಗಳನ್ನು ರಾಜ್ಯಪಾಲರು ಒಪ್ಪಿಕೊಳ್ಳಬೇಕಿತ್ತು ಮತ್ತು ಅವರು ತನ್ನ ಒಪ್ಪಿಗೆಯನ್ನು ನೀಡಲು ನಿರಾಕರಿಸಿದರೆ ಶಿಕ್ಷಣ ಇಲಾಖೆಗೆ ತನ್ನ ನಿರ್ಧಾರದೊಂದಿಗೆ ಮುಂದುವರಿಯುವ ಅಧಿಕಾರವಿದೆ ಎಂದು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಒತ್ತಿ ಹೇಳಿದೆ.

‘‘ಶೈಕ್ಷಣಿಕ ವಾತಾವರಣ-ಆಡಳಿತಗಾರರ ಕಾನೂನು,ಕಾನೂನಿನ ಆಡಳಿತವಲ್ಲ’. 24 (ಈಗ 25) ವಿವಿಗಳ ಕುಲಪತಿಗಳನ್ನು ಕುಲಾಧಿಪತಿಗಳ ಒಪ್ಪಿಗೆಯಿಲ್ಲದೆ ಕಾನೂನುಬಾಹಿರವಾಗಿ ನೇಮಕಗೊಳಿಸಲಾಗಿದೆ’ ಎಂದು ಧಂಕರ್ ಟ್ವೀಟಿಸಿದ್ದಾರೆ. ಎರಡನೇ ಅವಧಿಗೆ ಕೋಲ್ಕತಾ ವಿವಿಯ ಕುಲಪತಿಗಳಾಗಿ ಪ್ರೊ.ಸೋನಾಲಿ ಚಕ್ರವರ್ತಿ ಬ್ಯಾನರ್ಜಿ ಅವರ ಮುಂದುವರಿಕೆ ಕುರಿತು ತಾನು 2021, ಆ.17ರಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ಬರೆದಿದ್ದ ಪತ್ರವನ್ನು ಧಂಕರ್ ಶೇರ್ ಮಾಡಿಕೊಂಡಿದ್ದಾರೆ. 

‘ಸೋನಾಲಿಯವರನ್ನು ಯಾವುದೇ ಆಯ್ಕೆಯಿಲ್ಲದೆ ಎರಡನೇ ಅವಧಿಗೆ ಮುಂದುವರಿಸಲಾಗಿದೆ. ಆ.17ರ ಪತ್ರಕ್ಕೆ ಮುಖ್ಯಮಂತ್ರಿಗಳು ಉತ್ತರಿಸಿಲ್ಲ. ಸೋನಾಲಿಯವರ ನೇಮಕದ ಆ.28ರ ಅಧಿಸೂಚನೆಯನ್ನು ಹಿಂದೆಗೆದುಕೊಳ್ಳುವಂತೆ ಕುಲಾಧಿಪತಿಗಳು ಸೆ.16ರಂದು ನಿರ್ದೇಶ ನೀಡಿದ್ದರು. ಶಿಕ್ಷಣ ಸಚಿವ ಬೃತ್ಯ ಬಸು ಅವರು ಇದಕ್ಕೆ ಉತ್ತರಿಸಿಲ್ಲ’ ಎಂದು ಇನ್ನೊಂದು ಟ್ವಿಟರ್ ಪೋಸ್ಟ್ನಲ್ಲಿ ಅವರು ಹೇಳಿದ್ದಾರೆ.

ರಾಜ್ಯಪಾಲರ ಹೇಳಿಕೆಗಾಗಿ ಅವರನ್ನು ಟೀಕಿಸಿರುವ ಹಿರಿಯ ಟಿಎಂಸಿ ಸಂಸದ ಸೌಗತ ರಾಯ್ ಅವರು,ಇಂತಹ ಟ್ವೀಟ್ಗಳ ಮೂಲಕ ಗೌರವಾನ್ವಿತ ರಾಜ್ಯಪಾಲರು ತನ್ನ ಸಾಂವಿಧಾನಿಕ ಹುದ್ದೆಗೆ ನ್ಯಾಯವನ್ನು ಒದಗಿಸುತ್ತಿಲ್ಲ. ಅವರು ರಾಜ್ಯ ಸರಕಾರದ ಅಧಿಕಾರ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News