ಅರುಣಾಚಲ ಪ್ರದೇಶ: ಸಿಎಂ ಖಂಡು ರಾಜೀನಾಮೆಗೆ ಆಗ್ರಹ, ನೂರಕ್ಕೂ ಅಧಿಕ ಪ್ರತಿಭಟನಾಕಾರರು ವಶಕ್ಕೆ

Update: 2022-01-15 16:49 GMT

ಇಟಾನಗರ, ಜ.15: ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಅವರ ರಾಜೀನಾಮೆಗಾಗಿ ಒತ್ತಡ ಹೇರಲು ಬುಡಕಟ್ಟು ಯುವಕರ ಸಂಘಟನೆಯು ಕರೆ ನೀಡಿದ್ದ ಮುಷ್ಕರಕ್ಕೆ ಸಂಬಂಧಿಸಿದಂತೆ ನೂರಕ್ಕೂ ಅಧಿಕ ಜನರನ್ನು ಮುಂಜಾಗ್ರತಾ ಕ್ರಮವಾಗಿ ಶುಕ್ರವಾರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಮುಖ್ಯಮಂತ್ರಿಗಳು ಭಾರೀ ಪ್ರಮಾಣದ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ನಿಯಿಷಿ ಬುಡಕಟ್ಟು ಜನಾಂಗವನ್ನು ಪ್ರತಿನಿಧಿಸುವ ದಿ ಆಲ್ ನಿಯಿಷಿ ಯೂತ್ ಅಸೋಸಿಯೇಷನ್ ಆರೋಪಿಸಿದೆ. ಆರೋಪಗಳನ್ನು ರಾಜಕೀಯ ಪ್ರೇರಿತ ಎಂದು ತಳ್ಳಿಹಾಕಿರುವ ಖಂಡು,ಸಾಕ್ಷಾಧಾರವಿದ್ದರೆ ನ್ಯಾಯಾಲಯಕ್ಕೆ ಹೋಗುವಂತೆ ಅಸೋಸಿಯೇಷನ್ಗೆ ಸವಾಲು ಹಾಕಿದ್ದಾರೆ.

ಮುಷ್ಕರವನ್ನು ಆಯೋಜಿಸಿದ್ದ ಗುಂಪಿನ ಕನಿಷ್ಠ 25 ಜನರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು,ಅವರಿಗೆ 12 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದೆ. ರಾಜ್ಯದಲ್ಲಿ ಪರಿಸ್ಥಿತಿ ಶಾಂತಿಯುತವಾಗಿದೆ ಎಂದು ಇಟಾನಗರ ರಾಜಧಾನಿ ಪ್ರದೇಶದ ಜಿಲ್ಲಾಧಿಕಾರಿಗಳು ತಿಳಿಸಿದರು.
 
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳನ್ನು ಸೃಷ್ಟಿಸಲು ಮುಷ್ಕರದ ಸಂಘಟಕರು ಹೊರಗಿನಿಂದ ಬಾಡಿಗೆ ಗೂಂಡಾಗಳನ್ನು ಕರೆಸಿದ್ದರು. ಬಂದ್ಗೆ ಕರೆ ನೀಡಿದವರಿಗೆ ಅವರ ನಿರ್ವಾಹಕರು ನೀಡಿದ್ದ 10 ಲ.ರೂ.ಗಳ ಪೈಕಿ ಮೂರು ಲ.ರೂ.ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಇಟಾನಗರ ಸಿಟಿ ಐಜಿಪಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಆರೋಪಗಳನ್ನು ನಿರಾಕರಿಸಿದ ಅಸೋಸಿಯೇಷನ್ ಅಧ್ಯಕ್ಷ ಬ್ಯಾಬಂಗ್ ಜೋರಾಂ ಅವರು,ಪೊಲೀಸರು ಸಂಘಟನೆಯ ಹೆಸರು ಕೆಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News