ಉಡುಪಿ: ಆಂಧ್ರ ಮೂಲದ ಐವರು ಪಿಕ್‌ಪಾಕೇಟ್ ಆರೋಪಿಗಳ ಬಂಧನ

Update: 2022-01-15 17:01 GMT

ಉಡುಪಿ, ಜ.15: ಶ್ರೀಕೃಷ್ಣ ಮಠದ ಭಕ್ತೆಯೊಬ್ಬರ ಪರ್ಸ್ ಕಳವಿಗೆ ಸಂಬಂಧಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು, ದೂರು ಬಂದ 45 ನಿಮಿಷಗಳಲ್ಲಿಯೇ ಆಂಧ್ರಪ್ರದೇಶ ಮೂಲದ ಮೂವರು ಮಹಿಳೆಯರು ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆಂಧ್ರಪ್ರದೇಶ ರಾಜ್ಯದ ನೆಲ್ಲೂರು ನಿವಾಸಿಗಳಾದ ತಮ್ಮಿ ಶೆಟ್ಟಿ ಮಣಿ, ಪ್ರೀಯಾಂಕ ಕಾಕಣಿ, ಇಟ್ಟಾ ಜಾನ್ಸಿ, ಇಟ್ಟಾ ಸಾಗರ, ಹರಿಬಾಬು ಬಂಧಿತ ಆರೋಪಿಗಳು. ಇವರು ಮುಂಬರುವ ಶ್ರೀಕೃಷ್ಣ ಮಠದ ಪರ್ಯಾಯೋತ್ಸವ ಸಮಯದಲ್ಲಿ ಪಿಕ್ ಪ್ಯಾಕೇಟ್ ಸೇರಿದಂತೆ ವಿವಿಧ ರೀತಿಯಲ್ಲಿ ಕಳವು ಮಾಡಲು ಸಂಚು ರೂಪಿಸಿದ್ದರೆಂದು ತನಿಖೆಯಿಂದ ತಿಳಿದುಬಂದಿದೆ.

ಸಂಕ್ರಾತಿ ಪ್ರಯುಕ್ತ ಜ.14ರಂದು ಉಡುಪಿ ಶ್ರೀಕೃಷ್ಣ ಮಠಕ್ಕೆ ಬಂದಿದ್ದ ಕುಂದಾ ಪುರದ ಲಕ್ಷ್ಮೀ(54) ಎಂಬವರು ಮಧ್ಯಾಹ್ನ 12:45ರ ಸುಮಾರಿಗೆ ಅನಂತೇಶ್ವರ ದೇವಸ್ಥಾನದಲ್ಲಿ ತೀರ್ಥ ಪಡೆಯುತ್ತಿದ್ದರು. ಈ ವೇಳೆ 3 ಜನ ಮಹಿಳೆಯರು ಸೇರಿದಂತೆ ಐವರು ಲಕ್ಷ್ಮೀ ಅವರ ಕೈ ಚೀಲವನ್ನು ಹರಿದು ಚೀಲದಲ್ಲಿದ್ದ 10ಸಾವಿರ ರೂ. ನಗದು, ಮನೆಯ ಬೀಗ ಇದ್ದ ಸಣ್ಣ ಪರ್ಸ್ ಕಳವು ಮಾಡಿ ಪರಾರಿಯಾಗಿದ್ದರು. ಈ ಬಗ್ಗೆ ಜ.15ರಂದು ಬೆಳಗ್ಗೆ 9ಗಂಟೆಗೆ ಲಕ್ಷ್ಮೀ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿತ್ತು.

ಅದರಂತೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಉಡುಪಿ ಪೊಲೀಸರು ಕೃಷ್ಣಮಠದ ರಥಬೀದಿಯಲ್ಲಿರುವ ಸಿಸಿಕ್ಯಾಮರಾ ಹಾಗೂ ಡ್ರೋನ್ ಕ್ಯಾಮರಾಗಳ ಪುಟೇಜ್ ಪರಿಶೀಲನೆ ನಡೆಸಿದರು. ಈ ಮೂಲಕ ಆರೋಪಿಗಳ ಚಲನವಲನದ ಬಗ್ಗೆ ಮಾಹಿತಿ ಕಲೆ ಹಾಕಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು. ಹೀಗೆ ಐವರು ಆರೋಪಿಗಳನ್ನು ಬೆಳಗ್ಗೆ 9.45ರ ಸುಮಾರಿಗೆ ಅಂದರೆ ಕೇವಲ 45 ನಿಮಿಷಗಳ ಅವಧಿಯಲ್ಲಿ ಬಂಧಿಸಲಾಯಿತು.

ಇವರಿಂದ ಕಳವು ಮಾಡಿದ್ದ 10,000ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ನಗರದ ಲಾಡ್ಜ್ವೊಂದರಲ್ಲಿ ತಂಗಿದ್ದರು. ಇವರು ಪ್ರವಾಸಿ ಕೇಂದ್ರ ಗಳಲ್ಲಿ ಪಿಕ್‌ಪಾಕೇಟ್, ಪರ್ಸ್, ಚಿನ್ನಾಭರಣ ಕಳವು ಮಾಡುವ ಪ್ರವೃತ್ತಿ ಹೊಂದಿ ದ್ದರೆಂದು ಪೊಲೀಸರು ತಿಳಿಸಿದ್ದಾರೆ.

ಎಸ್ಪಿ ವಿಷ್ಣುವರ್ಧನ್, ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಡಿವೈಎಸ್ಪಿ ಸುಧಾಕರ ನಾಯ್ಕ್ ಮಾರ್ಗದರ್ಶನದಲ್ಲಿ ಉಡುಪಿ ನಗರ ಠಾಣಾ ಪೊಲೀಸ್ ನಿರೀಕ್ಷಕ ಪ್ರಮೋದ ಕುಮಾರ್, ಎಸ್ಸೈ ವಾಸಪ್ಪ ನಾಯ್ಕ್, ಪ್ರೊಬೆಷನರಿ ಎಸ್ಸೈಗಳಾದ ಪ್ರಸಾದ, ಸುಹಾಸ್, ಎಎಸ್ಸೈ ವಿಜಯ್, ಸಿಬ್ಬಂದಿ ಜೀವನ್ ಕುಮಾರ್, ಸತೀಶ್, ಲೋಕೇಶ್, ಆಶಾಲತಾ, ರೂಪ, ಸಂತೋಷ್ ರಾಠೋಡ್, ಬಾಲಕೃಷ್ಣ, ಸುಷ್ಮ, ರಿಯಾಜ್ ಅಹ್ಮದ್, ಕಾರ್ತಿಕ್, ಗಂಗಾಧಪ್ಪ ಈ ಕಾರ್ಯಾಚರಣೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News