ಇಂಡಿಯಾ ಓಪನ್: ಲಕ್ಷ್ಯ ಸೇನ್ ಫೈನಲ್‌ಗೆ ಲಗ್ಗೆ

Update: 2022-01-16 13:04 GMT

ಹೊಸದಿಲ್ಲಿ, ಜ.15: ಮಲೇಶ್ಯದ ಝಿ ಯಂಗ್‌ರನ್ನು ಸೋಲಿಸಿದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ವಿಜೇತ ಲಕ್ಷ್ಯ ಸೇನ್ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಫೈನಲ್‌ಗೆ ತಲುಪಿದ್ದಾರೆ. ಇದರೊಂದಿಗೆ ಮೊದಲ ಬಾರಿ ವರ್ಲ್ಡ್ ಟೂರ್ ಸೂಪರ್ 500 ಟೂರ್ನಿಯಲ್ಲಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.

ಅಲ್ಮೋರಾದ 20ರ ಹರೆಯದ ಆಟಗಾರ ಸೇನ್ ಕಳೆದ ತಿಂಗಳು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆಲ್ಲುವುದರೊಂದಿಗೆ ತನ್ನ ಸಲಹೆಗಾರ ಪ್ರಕಾಶ್ ಪಡುಕೋಣೆ ಹಾಗೂ ಬಿ.ಸಾಯಿ ಪ್ರಣೀತ್ ಅವರನ್ನೊಳಗೊಂಡ ಕ್ಲಬ್‌ಗೆ ಸೇರಿದ್ದರು.

ಶನಿವಾರ ರೋಚಕವಾಗಿ ನಡೆದ ಪುರುಷರ ಸಿಂಗಲ್ಸ್‌ನ ಸೆಮಿ ಫೈನಲ್ ಪಂದ್ಯದಲ್ಲಿ ಸೇನ್ ವಿಶ್ವದ ನಂ.60ನೇ ಆಟಗಾರ ಯಂಗ್‌ರನ್ನು 19-21, 21-16, 21-12 ಗೇಮ್‌ಗಳ ಅಂತರದಿಂದ ಸೋಲಿಸಿದರು.

ವಿಶ್ವದ ನಂ.17ನೇ ಆಟಗಾರ ಸೇನ್ ರವಿವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಸಿಂಗಾಪುರದ ವಿಶ್ವ ಚಾಂಪಿಯನ್ ಲೊಹ್ ಕೀನ್ ಯೀವ್‌ರನ್ನು ಎದುರಿಸಲಿದ್ದಾರೆ. ಕಳೆದ ವರ್ಷ ಡಚ್ ಓಪನ್ ಫೈನಲ್‌ನಲ್ಲಿ ಈ ಇಬ್ಬರು ಆಟಗಾರರು ಮುಖಾಮುಖಿಯಾಗಿದ್ದರು.

ಮತ್ತೊಂದು ಸೆಮಿ ಫೈನಲ್‌ನಲ್ಲಿ ಕೆನಡಾದ ಬ್ರಿಯನ್ ಯಂಗ್ ಗಂಟಲು ನೋವು ಹಾಗೂ ತಲೆನೋವಿನ ಕಾರಣದಿಂದ ಸೆಮಿ ಫೈನಲ್‌ನಿಂದ ಹಿಂದೆ ಸರಿದಿದ್ದಾರೆ ಇದರಿಂದ ಐದನೇ ಶ್ರೇಯಾಂಕದ ಲೋಹ್ ವಾಕ್ ಓವರ್ ಪಡೆದರು.

ಡಚ್ ಓಪನ್ ಫೈನಲ್‌ನಲ್ಲಿ ಸೇನ್ ಅವರು ಲೊಹ್ ಕೀನ್ ಯೀವ್ ವಿರುದ್ಧ ಸೋತಿದ್ದರು.ಒಟ್ಟಾರೆ ಉಭಯ ಆಟಗಾರರು 2-2 ಹೆಡ್-ಟು-ಹೆಡ್ ದಾಖಲೆ ಹೊಂದಿದ್ದು, ಕಳೆದ ಮೂರು ಪಂದ್ಯಗಳಲ್ಲಿ ಸೇನ್ ಎರಡು ಬಾರಿ ಸೋತಿದ್ದಾರೆ. ಎರಡು ಸೂಪರ್-100 ಪ್ರಶಸ್ತಿಗಳಾದ ಡಚ್ ಓಪನ್ ಹಾಗೂ ಸಾರ್‌ಲೋರ್‌ಲಕ್ಸ್ ಓಪನ್ ಜಯಿಸಿರುವ ಸೇನ್ ಬೆಲ್ಜಿಯಂ ನಲ್ಲಿ ಮೂರು ಅಂತರ್‌ರಾಷ್ಟ್ರೀಯ ಚಾಲೆಂಜ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು.

ಸೆಮಿ ಫೈನಲ್‌ನಲ್ಲಿ ಸೋತ ಸಿಂಧು

ಇಂಡಿಯಾ ಓಪನ್ ಮಹಿಳೆಯರ ಸಿಂಗಲ್ಸ್ ಸೆಮಿ ಫೈನಲ್‌ನಲ್ಲಿ ಭಾರತದ ಹಿರಿಯ ಆಟಗಾರ್ತಿ ಪಿ.ವಿ. ಸಿಂಧು ಥಾಯ್ಲೆಂಡ್‌ನ ಸುಪನಿದಾ ಕಟೆಥೊಂಗ್ ವಿರುದ್ಧ 14-21, 21-13 ಹಾಗೂ 10-21 ಗೇಮ್‌ಗಳ ಅಂತರದಿಂದ ಸೋತಿದ್ದಾರೆ. ಶನಿವಾರ 59 ನಿಮಿಷಗಳ ಕಾಲ ನಡೆದ ಹಣಾಹಣಿಯಲ್ಲಿ ಮೊದಲ ಗೇಮ್ ಅನ್ನು 14-21 ಅಂತರದಿಂದ ಸೋತಿದ್ದ ಸಿಂಧು ಎರಡನೇ ಗೇಮ್‌ನ್ನು 21-13 ಅಂತರದಿಂದ ಗೆದ್ದುಕೊಂಡು ಪ್ರತಿರೋಧ ಒಡ್ಡಿದರು. ಆದರೆ ಮೂರನೇ ಹಾಗೂ ನಿರ್ಣಾಯಕ ಗೇಮ್‌ನಲ್ಲಿ ತಾನ್ನೋರ್ವ ಉತ್ತಮ ಆಟಗಾರ್ತಿಯೆಂದು ಸಾಬೀತುಪಡಿಸಿದ ಸುಪನಿದಾ 21-10 ಅಂತರದಿಂದ ಗೆದ್ದುಕೊಂಡರು. ಸುಪನಿದಾ ಫೈನಲ್‌ನಲ್ಲಿ ತಮ್ಮದೇ ದೇಶದ ಬುಸನನ್‌ರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News