ಜೊಕೊವಿಕ್ ಇರಲಿ, ಇಲ್ಲದಿರಲಿ ಆಸ್ಟ್ರೇಲಿಯ ಓಪನ್ ಶ್ರೇಷ್ಠ ಟೂರ್ನಮೆಂಟ್: ನಡಾಲ್

Update: 2022-01-15 18:22 GMT

ಮೆಲ್ಬೋರ್ನ್, ಜ.15: ಕೋವಿಡ್-19 ವಿರುದ್ಧ ಲಸಿಕೆ ಸ್ವೀಕರಿಸದೆ ಆಸ್ಟ್ರೇಲಿಯಕ್ಕೆ ಆಗಮಿಸಿ ಗಡಿಪಾರಾಗುವ ಭೀತಿಯಲ್ಲಿರುವ ಪ್ರತಿಸ್ಪರ್ಧಿ ನೊವಾಕ್ ಜೊಕೊವಿಕ್ ವಿರುದ್ಧ ಸ್ಪೇನ್ ಆಟಗಾರ ರಫೆಲ್ ನಡಾಲ್ ಶನಿವಾರ ವಾಗ್ದಾಳಿ ನಡೆಸಿದರು. ‘‘ಆಸ್ಟ್ರೇಲಿಯನ್ ಓಪನ್ ಯಾವುದೇ ಆಟಗಾರರಿಗಿಂತಲೂ ಹೆಚ್ಚು ಮುಖ್ಯವಾಗಿದೆ. ಜೊಕೊವಿಕ್ ಇರಲಿ, ಇಲ್ಲದೇ ಇರಲಿ ಆಸ್ಟ್ರೇಲಿಯನ್ ಓಪನ್ ಶ್ರೇಷ್ಠ ಟೂರ್ನಮೆಂಟ್ ಆಗಲಿದೆ’’ ಎಂದು ನಡಾಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಈ ವರ್ಷದ ಮೊದಲ ಗ್ರಾನ್‌ಸ್ಲಾಮ್ ಟೂರ್ನಿಯು ಸೋಮವಾರದಿಂದ ಆರಂಭವಾಗಲಿದೆ.

ಜೊಕೊವಿಕ್ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳಲು ಬಯಸಿದ್ದರೂ ಆಸ್ಟ್ರೇಲಿಯ ಸರಕಾರವು ಎರಡನೇ ಬಾರಿ ಜೊಕೊವಿಕ್ ಅವರ ವೀಸಾವನ್ನು ರದ್ದುಪಡಿಸಿದೆ. ಹೀಗಾಗಿ ಅವರು ದೇಶದಿಂದ ಗಡಿಪಾರಾಗುವ ಭೀತಿ ಎದುರಿಸುತ್ತಿದ್ದಾರೆ. ಜೊಕೊವಿಕ್ ಸಾರ್ವಜನಿಕ ಸುವ್ಯವಸ್ಥೆಗೆ ಬೆದರಿಕೆಯಾಗಿದ್ದಾರೆ ಎಂದು ಆಸ್ಟ್ರೇಲಿಯ ಸರಕಾರ ಹೇಳಿದೆ.

ಈ ತನಕ ಲಸಿಕೆ ಸ್ವೀಕರಿಸದ ಜೊಕೊವಿಕ್ ಆಸ್ಟ್ರೇಲಿಯದಲ್ಲಿ ಉಳಿಯಬಹುದೆ ಎಂಬ ಪ್ರಶ್ನೆ ಹಲವು ದಿನಗಳಿಂದ ಎಲ್ಲರನ್ನು ಕಾಡುತ್ತಿದೆ. ಜೊಕೊವಿಕ್ ಹಾಗೂ ನಡಾಲ್ 21ನೇ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದ ಮೊದಲ ಆಟಗಾರನಾಗುವ ಪೈಪೋಟಿಯಲ್ಲಿದ್ದಾರೆ.

‘‘ಜೊಕೊವಿಕ್‌ರನ್ನು ನಾನು ವೈಯಕ್ತಿಕವಾಗಿ ಹಾಗೂ ಕ್ರೀಡಾಪಟುವಾಗಿ ನಿಸ್ಸಂದೇಹವಾಗಿ ಗೌರವಿಸುತ್ತೇನೆ. ಆದರೆ ಕಳೆದ ಎರಡು ವಾರಗಳಲ್ಲಿ ಅವರ ಕುರಿತು ಹಲವು ಸಂಗತಿಗಳನ್ನು ನಾನು ಒಪ್ಪದಿದ್ದರೂ ನಾನು ಅವರನ್ನು ನಿಜವಾಗಿಯೂ ಗೌರವಿಸುತ್ತೇನೆ. ವಿವಾದವು ತುಂಬಾ ದೀರ್ಘವಾಗುತ್ತಿದೆ’’ಎಂದು ನಡಾಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News