ಬಂಗಾಳ ಬಿಜೆಪಿಯಲ್ಲಿ ಮತ್ತೆ ಅಸಮಾಧಾನ ಸ್ಫೋಟ

Update: 2022-01-16 02:43 GMT
photo: bjp

ಕೊಲ್ಕತ್ತಾ: ಪುನರ್ರಚಿತ ರಾಜ್ಯ ಬಿಜೆಪಿ ಸಮಿತಿ ವಿರುದ್ಧ ಶನಿವಾರ ನಡೆದ ಸಮಿತಿಯ ಸಭೆಯಲ್ಲಿ ಕೇಂದ್ರ ಸಚಿವ ಸಂತನು ಠಾಕೂರ್ ನೇತೃತ್ವದಲ್ಲಿ ಪಕ್ಷದ ಬಂಡುಕೋರ ಮುಖಂಡರಿಂದ ತೀವ್ರ ಅಸಮಾಧಾನ ವ್ಯಕ್ತವಾಯಿತು.

ಹಲವು ಮಂದಿ ಬಿಜೆಪಿ ಮುಖಂಡರ ಜತೆ ಸಭೆ ನಡೆಸಿದ ಠಾಕೂರ್ ಸುದ್ದಿಗಾರರ ಜತೆ ಮಾತನಾಡಿ "ಹೊಸ ರಾಜ್ಯ ಮತ್ತು ಜಿಲ್ಲಾ ಸಮಿತಿಗಳು, ಪಶ್ಚಿಮ ಬಂಗಾಳದಲ್ಲಿ ಕೇಸರಿ ಪಕ್ಷ ಈ ಸ್ಥಿತಿಗೆ ಬರಲು ಮಾಡಿದ ತ್ಯಾಗ, ಅರ್ಪಣಾ ಮನೋಭಾವ ಮತ್ತು ನಿಷ್ಠಾವಂತ ನಾಯಕರನ್ನು ಕಡೆಗಣಿಸಿದೆ" ಎಂದು ಗಂಭೀರ ಆರೋಪ ಮಾಡಿದರು.

"ಬಿಜೆಪಿಯನ್ನು ಸದ್ಯದ ಅತ್ಯುನ್ನತ ಸ್ಥಿತಿಗೆ ಒಯ್ದ ನಾಯಕರನ್ನು ರಾಜ್ಯ ಸಮಿತಿಯಲ್ಲಿ ಕಡೆಗಣಿಸಲಾಗಿದೆ. ಇಂಥ ಶೇಕಡ 90ರಷ್ಟು ಮುಖಂಡರನ್ನು ಕೈಬಿಡಲಾಗಿದೆ. ಪ್ರಮುಖ ಮತುವಾ ಮತ್ತು ಇತರ ಹಿಂದುಳಿತ ವರ್ಗಗಳ ನಾಯಕರನ್ನು ಹೊರಗಿಡಲಾಗಿದೆ. ರಾಜ್ಯ ಹಾಗೂ ಜಿಲ್ಲಾಮಟ್ಟದ ಬಹುತೇಕ ಸಮಿತಿಗಳು ಇದೀಗ ಅನಾನುಭವಿ ನಾಯಕರಿಂದ ತುಂಬಿವೆ" ಎಂದು ಹೇಳಿದರು.

ಬಿಜೆಪಿ ರಾಜ್ಯದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗದು ಎನ್ನುವುದನ್ನು ಖಾತರಿಪಡಿಸಲು ಕೆಲವರು ಈ ರೀತಿ ಮಾಡಿದ್ದಾರೆಯೇ ಎಂದು ಮತುವಾ ಸಮುದಾಯದ ಮುಖಂಡರೂ ಆಗಿರುವ ಅವರು ಪ್ರಶ್ನಿಸಿದರು. ರಾಜ್ಯದಲ್ಲಿರುವ ಬಿಜೆಪಿ ಮುಖಂಡರು ಟಿಎಂಸಿಗೆ ನೆರವಾಗುವ ಸಲುವಾಗಿ ಸಂಘಟನೆಯನ್ನು ದುರ್ಬಲಗೊಳೀಸುತ್ತಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದರು. ಈ ವಿಷಯವನ್ನು ಕೇಂದ್ರ ನಾಯಕರ ಗಮನಕ್ಕೆ ತರುವುದಾಗಿ ಅವರು ಸ್ಪಷ್ಟಪಡಿಸಿದರು.

ಯಾವ ಮುಖಂಡರ ಜತೆ ಪರ್ಯಾಯ ಸಮಿತಿ ರಚಿಸುವ ಬಗ್ಗೆ ಚರ್ಚಿಸಲಾಗಿದೆ ಎಂಬ ಪ್ರಶ್ನೆಗೆ, "ಇನ್ನು ಸ್ವಲ್ಪಕಾಲ ಕಾಯಿರಿ. ನಿಮ್ಮ ಮುಂದೆ ಪ್ರತಿಯೊಂದನ್ನೂ ಘೋಷಿಸಲಿದ್ದೇವೆ. ನಾವು ನರೇಂದ್ರ ಮೋದಿಯವರ ಕೈ ಬಲಪಡಿಸಲು ಬಯಸಿದ್ದೇವೆ. ಬಂಗಾಳದಿಂದ ಟಿಎಂಸಿಯನ್ನು ಕಿತ್ತೊಗೆಯುವುದು ನಮ್ಮ ಉದ್ದೇಶ. ನಾವು ಬಿಜೆಪಿ ಬಿಡುವುದಿಲ್ಲ" ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News