ಹೈದರಾಬಾದ್‌ ನಲ್ಲಿ ಬ್ರಿಟಿಷ್‌ ಕಾಲದ ಕ್ಲಬ್‌ ನಲ್ಲಿ ಅಗ್ನಿ ಅನಾಹುತ: ಅಂದಾಜು 35ರಿಂದ 40 ಕೋಟಿ ರೂ. ನಷ್ಟ !

Update: 2022-01-16 19:11 GMT

ಹೈದರಾಬಾದ್,ಜ.16: ರವಿವಾರ ಬೆಳ್ಳಂಬೆಳಿಗ್ಗೆ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಹೈದರಾಬಾದ್ ತನ್ನ ಇತಿಹಾಸದ ಭಾಗವೊಂದನ್ನು ಕಳೆದುಕೊಂಡಿದೆ. ಭಾರತದ ಐದು ಅತ್ಯಂತ ಹಳೆಯ ಕ್ಲಬ್‌ಗಳಲ್ಲೊಂದಾಗಿದ್ದ ಸಿಕಂದರಾಬಾದ್ ಕ್ಲಬ್ ಬೆಂಕಿಯ ಜ್ವಾಲೆಗಳಿಗೆ ಸಿಲುಕಿ ಭಸ್ಮಗೊಂಡಿದೆ.

1878ರಲ್ಲಿ ಬ್ರಿಟಿಷರಿಂದ ಸ್ಥಾಪನೆಗೊಂಡಿದ್ದ ಸಿಕಂದರಾಬಾದ್ ಕ್ಲಬ್ 22 ಎಕರೆಗಳ ಹಸಿರು ಕ್ಯಾಂಪಸ್‌ನಲ್ಲಿ ತಲೆಯೆತ್ತಿ ನಿಂತಿತ್ತು.

ನಸುಕಿನ 2:30ರ ಸುಮಾರಿಗೆ ಬೆಂಕಿ ಆರಂಭಗೊಂಡಿದ್ದು,ಬೆಳಗಿನ ಆರು ಗಂಟೆಗೆ ಆರಿಸಲಾಗಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಈ ಅವಘಡಕ್ಕೆ ಕಾರಣವಾಗಿರಬಹುದು. ಘಟನೆಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ಅಗ್ನಿಶಾಮಕ ಇಲಾಖೆಯು ತಿಳಿಸಿದೆ. ಅಘಡದಿಂದಾಗಿ ಸುಮಾರು 35ರಿಂದ 40 ಕೋ.ರೂ.ನಷ್ಟವುಂಟಾಗಿದೆ ಎಂದು ಅಂದಾಜಿಸಲಾಗಿದೆ.
  
50,000 ಚದುರಡಿ ಬಿಲ್ಟಪ್ ಏರಿಯಾ ಹೊಂದಿದ್ದ ಕಟ್ಟಡದ ಹೆಚ್ಚಿನ ಭಾಗ ಕಟ್ಟಿಗೆಯಿಂದ ನಿರ್ಮಾಣಗೊಂಡಿತ್ತು. ಹೀಗಾಗಿ ಅಗ್ನಿಶಾಮಕ ದಳ ಮತ್ತು ಪೊಲೀಸರ ರಕ್ಷಣಾ ಕಾರ್ಯಾಚರಣೆಗಳಿಗೆ ಅದನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದು ಹೈದರಾಬಾದ್ನ ಪೊಲೀಸ್ ಆಯುಕ್ತ ಸಿ.ವಿ.ಆನಂದ ತಿಳಿಸಿದರು. ಕ್ಲಬ್ ನ ಪದಾಧಿಕಾರಿಗಳು ಯಾವುದೇ ಶಂಕೆಯನ್ನು ವ್ಯಕ್ತಪಡಿಸಿಲ್ಲ. ಅಗ್ನಿಶಾಮಕ ದಳ ಮತ್ತು ಪೊಲೀಸ್ ಇಲಾಖೆ ತನಿಖೆ ನಡೆಸಲಿವೆ ಎಂದರು.

ಕ್ಲಬ್ ಅನ್ನು ಬೆಂಕಿಯ ಜ್ವಾಲೆಗಳು ಆವರಿಸಿಕೊಳ್ಳುತ್ತಿದ್ದಂತೆ ಕಟ್ಟಡದ ಭಾಗಗಳು ಕುಸಿದು ಬೀಳುತ್ತಿರುವುದನ್ನು ವೀಡಿಯೊ ಫೂಟೇಜ್ ತೋರಿಸಿದೆ.
 
8,000 ಸದಸ್ಯರನ್ನು ಹೊಂದಿರುವ ಸಿಕಂದರಾಬಾದ್ ಕ್ಲಬ್ ಹೈದರಾಬಾದ ನಗರಾಭಿವೃದ್ಧಿ ಪ್ರಾಧಿಕಾರದಿಂದ ಪರಂಪರಾ ಸ್ಥಾನಮಾನವನ್ನು ಪಡೆದಿತ್ತು. ಕ್ರಿಕೆಟ್ ಮೈದಾನ,ಈಜುಕೊಳ ಮತ್ತು ಇತರ ಹಲವಾರು ಹೊರಾಂಗಣ ಕ್ರೀಡಾ ಸೌಲಭ್ಯಗಳನ್ನು ಕ್ಲಬ್ ಹೊಂದಿತ್ತು.
ಹಳೆಯ ಬ್ರಿಟಿಷ್ ಶೈಲಿಯಲ್ಲಿ ನಿರ್ಮಾಣಗೊಂಡಿದ್ದ ಕ್ಲಬ್ ವಿಶಾಲ ಬಾಲ್ ರೂಮ್,ಓಪನ್ ಏರ್ ಥಿಯೇಟರ್ ಇತ್ಯಾದಿ ಸೌಲಭ್ಯಗಳನ್ನೂ ಒಳಗೊಂಡಿತ್ತು. ಪಂಚತಾರಾ ವಸತಿ ಸೌಲಭ್ಯವೂ ಇಲ್ಲಿತ್ತು. ವಾತಾನುಕೂಲಿತ ಬಾರ್‌ಗಳು,ಡೈನಿಂಗ್ ಹಾಲ್‌ಗಳು,ಬಾಂಕ್ವೆಟ್ ಹಾಲ್‌ಗಳು,ದೊಡ್ಡ ಸಮಾವೇಶಗಳಿಗಾಗಿ ಹಲವಾರು ಹುಲ್ಲುಹಾಸುಗಳನ್ನೂ ಕ್ಲಬ್ ಹೊಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News