ಬಿಜೆಪಿ ತ್ಯಜಿಸಿರುವ ಮೂರನೇ ಸಚಿವ ದಾರಾ ಸಿಂಗ್ ಚೌಹಾಣ್ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆ

Update: 2022-01-16 19:07 GMT
Photo: ANI

ಲಕ್ನೋ,ಜ.16: ಆದಿತ್ಯನಾಥ್ ಸಂಪುಟದ ಮಾಜಿ ಸಚಿವ ದಾರಾಸಿಂಗ್ ಚೌಹಾಣ್ ಅವರು ರವಿವಾರ ಅಖಿಲೇಶ್ ಯಾದವರ ಉಪಸ್ಥಿತಿಯಲ್ಲಿ ಅವರ ನೇತೃತ್ವದ ಸಮಾಜವಾದಿ ಪಕ್ಷ (ಎಸ್ಪಿ)ಕ್ಕೆ ಸೇರ್ಪಡೆಯಾದರು.

ಚೌಹಾಣ್ ಅವರು ಸ್ವಾಮಿ ಪ್ರಸಾದ್ ಮೌರ್ಯ ಮತ್ತು ಧರಂ ಸಿಂಗ್ ಸೈನಿ ಬಳಿಕ ಬಿಜೆಪಿಯನ್ನು ತೊರೆದು ಎಸ್ಪಿಗೆ ಸೇರ್ಪಡೆಗೊಂಡಿರುವ ಮೂರನೇ ಸಚಿವರಾಗಿದ್ದಾರೆ.
ಎಸ್ಪಿಗೆ ಸೇರ್ಪಡೆಗೊಂಡ ಬಳಿಕ ಮಾತನಾಡಿದ ಚೌಹಾಣ,2017ರಲ್ಲಿ ಬಿಜೆಪಿ ಸರಕಾರವು ‘ಸಬ್ ಕಾ ಸಾಥ್,ಸಬ್ ಕಾ ವಿಕಾಸ್’ ಘೋಷಣೆಯನ್ನು ನೀಡಿತ್ತು. ಪಕ್ಷವು ಪ್ರತಿಯೊಬ್ಬರಿಂದಲೂ ಬೆಂಬಲವನ್ನು ಪಡೆದುಕೊಂಡಿತ್ತು,ಆದರೆ ಕೆಲವೇ ಜನರು ಮಾತ್ರ ಅಭಿವೃದ್ಧಿಯ ಲಾಭವನ್ನು ಪಡೆದಿದ್ದಾರೆ ಎಂದು ಹೇಳಿದರು.

ಹಿಂದಿನ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ನಲ್ಲಿ ಮಧುಬನಿ ಕ್ಷೇತ್ರದಿಂದ ಆಯ್ಕೆಯಾಗಿದ್ದ ಚೌಹಾಣ್, ರಾಜ್ಯ ಸರಕಾರದ ಬಗ್ಗೆ ಹಿಂದುಳಿದ ವರ್ಗಗಳು ಮತ್ತು ದಲಿತರು ಮಾತ್ರ ಅಸಮಾಧಾನಗೊಂಡಿಲ್ಲ, ಬ್ರಾಹ್ಮಣರಿಗೂ ಈ ಸರಕಾರ ತೃಪ್ತಿಯನ್ನು ನೀಡಿಲ್ಲ. ಸಂವಿಧಾನವನ್ನೇ ಬದಲಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದರು.
ಚೌಹಾಣ ಮತ್ತು ಬೆಂಬಲಿಗರನ್ನು ಅಖಿಲೇಶ್ ತನ್ನ ಪಕ್ಷಕ್ಕೆ ಸ್ವಾಗತಿಸಿದರು.
ಮೌರ್ಯ ಮತ್ತು ಸೈನಿ ಜ.14ರಂದು ಎಸ್ಪಿಗೆ ಸೇರ್ಪಡೆಗೊಂಡಿದ್ದರು. ಅವರೊಂದಿಗೆ ಐವರು ಬಿಜೆಪಿ ಶಾಸಕರೂ ಎಸ್ಪಿಗೆ ಸೇರಿದ್ದರು.

ಅಪ್ನಾ ದಳದ ಶಾಸಕ ಚೌಧರಿ ಅಮರ್ ಸಿಂಗ್, ಮಾಜಿ ಬಿಎಸ್ಪಿ ಶಾಸಕರಾದ ನೀರಜ್ ಕುಶ್ವಾಹ ಮೌರ್ಯ ಮತ್ತು ಬಲರಾಮ ಸೈನಿ, ಮಾಜಿ ಬಿಜೆಪಿ ಎಂಎಲ್ಸಿ ಹರಿಪಾಲ್ ಸೈನಿ, ಮಾಜಿ ಬಿಜೆಪಿ ಶಾಸಕ ರಾಜೇಂದ್ರ ಪ್ರತಾಪ್ ಸಿಂಗ್, ರಾಜ್ಯದ ಮಾಜಿ ಸಚಿವ ವಿದ್ರೋಹಿ ಮೌರ್ಯ,ಮಾಜಿ ಮುಖ್ಯ ಭದ್ರತಾ ಅಧಿಕಾರಿ ಪದಂ ಸಿಂಗ್ ಮತ್ತು ಮಾಜಿ ಕಾಂಗ್ರೆಸ್ ಶಾಸಕ ಬನ್ಸಿ ಸಿಂಗ್ ಪಹಾಡಿಯಾ ಅವರೂ ಎಸ್ಪಿಗೆ ಸೇರಿದ್ದಾರೆ.

ಉ.ಪ್ರದೇಶ ವಿಧಾನಸಭಾ ಚುನಾವಣೆಯು ಫೆ.10ರಿಂದ ಮಾ.7ರವರೆಗೆ ಏಳು ಹಂತಗಳಲ್ಲಿ ನಡೆಯಲಿದೆ. ಮಾ.10ರಂದು ಫಲಿತಾಂಶ ಪ್ರಕಟವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News