ಸರಕಾರವನ್ನು ಹೊಗಳುವ ಬಿಜೆಪಿಗರನ್ನು ʼಸಾಮಾನ್ಯ ಪ್ರಜೆಗಳುʼ ಎಂದು ಬಿಂಬಿಸಿ ಉ.ಪ್ರ ʼದೂರದರ್ಶನʼದಿಂದ ಜನರಿಗೆ ಮೋಸ !

Update: 2022-01-16 10:19 GMT
Photo: Newslaundry.com

ಫೆ.10ರಿಂದ ಏಳು ಹಂತಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ರಾಜಕೀಯವಾಗಿ ನಿರ್ಣಾಯಕವಾಗಿರುವ ಉತ್ತರ ಪ್ರದೇಶ ಕುರಿತು ಸರಕಾರಿ ಸ್ವಾಮ್ಯದ ದೂರದರ್ಶನವು ‘ಕ್ಯಾ ಬೋಲೆ ಯುಪಿ (ಉ.ಪ್ರ.ಏನು ಹೇಳುತ್ತದೆ)’ ಹೆಸರಿನ ಚುನಾವಣಾ ವಿಶೇಷ ಕಾರ್ಯಕ್ರಮವೊಂದನ್ನು ಪ್ರಸಾರಿಸುತ್ತಿದೆ. ಕಾರ್ಯಕ್ರಮಕ್ಕಾಗಿ ನಿರೂಪಕಿ ರೀಮಾ ಪರಾಶರ ಅವರು ಉತ್ತರ ಪ್ರದೇಶದ ನಿವಾಸಿಗಳನ್ನು ಸಂದರ್ಶಿಸಿ ಅವರ ಅಭಿಪ್ರಾಯಗಳನ್ನು ಪ್ರಸಾರಿಸುತ್ತಿದ್ದಾರೆ. ಈವರೆಗೆ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿರುವ ಪ್ರತಿಯೊಬ್ಬರೂ ಬಿಜೆಪಿ,ಕೇಂದ್ರ ಮತ್ತು ಉ.ಪ್ರ.ಸರಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಹಾಡಿ ಹೊಗಳುತ್ತಿದ್ದಾರೆ ಮತ್ತು ಇವರೆಲ್ಲ ಸಾಮಾನ್ಯ ಪ್ರಜೆಗಳು ಎಂಬಂತೆ ಬಿಂಬಿಸಲಾಗಿತ್ತು. ಆದರೆ ಬಿಜೆಪಿಯೊಂದಿಗೆ ನಂಟು ಹೊಂದಿರುವವರನ್ನು ಬಳಸಿಕೊಂಡು ಸರಕಾರದ ಪರ ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂದು ಬಸಂತ್ ಕುಮಾರ್ ಮತ್ತು ಅಶ್ವಿನಿ ಕುಮಾರ್ ಸಿಂಗ್ Newslaundry.com ತನ್ನ ವಿಶ್ಲೇಷಣಾ ವರದಿಯಲ್ಲಿ ಸಾಕ್ಷ್ಯ ಸಮೇತ ಉಲ್ಲೇಖಿಸಿದೆ.

 ಉತ್ತರಪ್ರದೇಶ ಚುನಾವಣೆಯ ಕಾರ್ಯಕ್ರಮದ ಹೋರ್ಡಿಂಗ್‌ಗಳು ನಿರ್ದಿಷ್ಟವಾಗಿ ರಾಜ್ಯ ಸರ್ಕಾರದ ಜಾಹೀರಾತುಗಳನ್ನು ಏಕೆ ಒಳಗೊಂಡಿರುತ್ತವೆ? ಇತರ ರಾಜಕೀಯ ಪಕ್ಷಗಳ ಬಗ್ಗೆ ಏಕಿಲ್ಲ? ಎಂದು ಕೇಳಿದಾಗ, ರೀಮಾ ಪರಾಶರ್ ನ್ಯೂಸ್‌ಲಾಂಡ್ರಿಗೆ ಹೇಳಿದ್ದು “ಇದು ಮಾರ್ಕೆಟಿಂಗ್ ತಂಡದ ಕೆಲಸ. ನಾನು ನಿಮಗೆ ಅವರ ಸಂಖ್ಯೆಯನ್ನು ನೀಡುತ್ತೇನೆ. ನೀವು ಅವರ ಜೊತೆ ಮಾತಾನಾಡಿ" ಎಂದಾಗಿತ್ತು. ಆದರೆ ಆ ಬಳಿಕ ಅವರು ನಮಗೆ ನಂಬರ್‌ ಅನ್ನೂ ನೀಡಿಲ್ಲ, ನಮ್ಮ ಕರೆಯನ್ನು ಸ್ವೀಕರಿಸಲೂ ಇಲ್ಲ ಎಂದು newslaundry ತಿಳಿಸಿದೆ. ನ್ಯೂಸ್‌ಲಾಂಡ್ರಿ ಹಿಂದಿಯಲ್ಲಿ ಈ ವರದಿ ಪ್ರಕಟವಾದ ಕೆಲವು ದಿನಗಳ ನಂತರ, ದೂರದರ್ಶನ ಕಚೇರಿಯ ಹೊರಗಿನ ಹೋರ್ಡಿಂಗ್‌ಗಳನ್ನು ತೆಗೆದುಹಾಕಲಾಗಿದೆ.

ಆದರೆ ಇದಕ್ಕಿಂತಲೂ ಆಸಕ್ತಿಕರವಾದ ವಿಚಾರವೇನೆಂದರೆ ಇವರು ಈ ಕಾರ್ಯಕ್ರಮದಲ್ಲಿ ಎಲ್ಲರೂ ಜನಸಾಮಾನ್ಯರು ಎಂಬಂತೆ ಬಿಂಬಿಸುತ್ತಾರೆ. ಅವರ ಬಳಿ ತೆರಳಿ ಉತ್ತರಪ್ರದೇಶ ಚುನಾವಣೆಯ ಕುರಿತು ಪ್ರಶ್ನೆಗಳನ್ನು ಕೇಳುತ್ತಾರೆ. ಅವರು ಆದಿತ್ಯನಾಥ ಮತ್ತು ಮೋದಿಯನ್ನು ಹೊಗಳುತ್ತಾರೆ. ಆದರೆ ಬ್ಯುಸಿನೆಸ್‌ ಮ್ಯಾನ್‌ ನಂತೆ, ಅಂಗಡಿಯಾಳಿನಂತೆ, ಕೂಲಿ ಕಾರ್ಮಿಕರಂತೆ ಕಾಣಿಸಿಕೊಳ್ಳುವ ಎಲ್ಲರೂ ಒಂದೋ ಬಿಜೆಪಿಯ ಅಥವಾ ವಿಶ್ವ ಹಿಂದೂ ಪರಿಷದ್‌ ನ ಕಾರ್ಯಕರ್ತರಾಗಿರುತ್ತಾರೆ ಎಂದು ವರದಿ ಉಲ್ಲೇಖಿಸಿದೆ.

ʼಕ್ಯಾ ಬೋಲೆ ಯುಪಿʼ ಯ ಒಟ್ಟು 17 ಎಪಿಸೋಡ್‌ ಗಳು ಜನವರಿ ೮ರ ವೇಳೆಗೆ ಪ್ರಸಾರವಾಗಿತ್ತು. ಆದರೆ ಒಂದು ಕಾರ್ಯಕ್ರಮದಲ್ಲೂ ವಿರೋಧ ಪಕ್ಷದ ನಾಯಕರನ್ನು ಮಾತನಾಡಿಸಿದ್ದಾಗಲೀ, ಅವ ಫೋಟೊ ಪ್ರಸಾರ ಮಾಡಿದ್ದಾಗಲೀ ಇಲ್ಲ. ಎಲ್ಲಾ ಎಪಿಸೋಡ್‌ ಗಳಲ್ಲೂ ರಾಜ್ಯ ಮತ್ತು ಕೇಂದ್ರ ಸರಕಾರವನ್ನು ಹೊಗಳಲಾಗಿದೆ. ಕಾನ್ಪುರದಲ್ಲಿನ ಎಪಿಸೋಡ್‌ ನಲ್ಲಿ ಮೂರು ಪ್ರಮುಖ ವಿಚಾರಗಳಾದ ನಮಮಿ ಗಂಗೆ, ಸ್ವಚ್ಛ ಭಾರತ ಅಭಿಯಾನ ಹಾಗೂ ಆತ್ಮನಿರ್ಭರ ಭಾರತ ವನ್ನೇ ಹೈಲೈಟ್‌ ಮಾಡಲಾಗಿದೆ.

ಈ ವೇಳೆ ʼಜನಸಾಮಾನ್ಯʼ ವ್ಯಕ್ತಿಯೋರ್ವರೊಂದಿಗೆ ಮಾತನಾಡಿದ್ದ ಪರಾಶರ್‌, ಆತನನ್ನು ನಿರ್ಮಲ್‌ ತ್ರಿಪಾಠಿ ಧಾನ್ಯ ವ್ಯಾಪಾರಿ ಎಂದು ಪರಿಚಯಿಸಲಾಗಿತ್ತು. ಆತನೂ ರಾಜ್ಯ ಸರಕಾರವನ್ನು ಸಿಕ್ಕಾಪಟ್ಟೆ ಹೊಗಳಿದ್ದ. ಇಂತಹಾ ಸರಕಾರ ನಾನು ನೋಡೇ ಇಲ್ಲ ಎಂದಿದ್ದ. ಆದರೆ ಈತ ಕಳೆದ ನಲ್ವತ್ತು ವರ್ಷಗಳಿಂದಲೂ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದಾನೆ ಎಂದು ವರದಿ ತಿಳಿಸಿದೆ. 

ಆತನನ್ನು ನ್ಯೂಸ್‌ ಲಾಂಡ್ರಿ ಸಂಪರ್ಕಿಸಿದಾಗ, ನಾನು ಗೋವಿಂದ ನಗರ ಕ್ಷೇತ್ರದ ವ್ಯಾಪಾರ ಮಂಡಲದ ಅಧ್ಯಕ್ಷನಾಗಿ 21 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ. ನಾನು ಕಿದ್ವಾಯಿ ನಗರದ ವಿಧಾನಸಭಾ ಚುನಾವಣೆಯ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದೇನೆ. ನನಗೆ ಟಿಕೆಟ್‌ ಸಿಕ್ಕಿದರೂ ಸಿಗದಿದ್ದರೂ ನಾನು ಬಿಜೆಪಿಯೊಂದಿಗೇ ಇರುತ್ತೇನೆ" ಎಂದಿದ್ದಾರೆ. ಡಿಡಿಯಲ್ಲಿನ ಸಂದರ್ಶನದ ಕುರಿತು ಅವರೊದಿಗೆ ಮಾತನಾಡಿದಾಗ, "ಆಕೆಯೇ ನನ್ನನ್ನು ಹುಡುಕಿಕೊಂಡು ಬಂದರು, ನಿಮ್ಮ ಇಂಟರ್‌ ವ್ಯೂ ಬೇಕೆಂದು ನನಗೆ ಕರೆ ಮಾಡಿ ತಿಳಿಸಿದರು. ಅವರಿಗೆ ನಾನು ಬಿಜೆಪಿ ಕಾರ್ಯಕರ್ತ ಎನ್ನುವುದು ತಿಳಿದಿತ್ತು" ಎಂದಿದ್ದಾರೆ.

ಇನ್ನೋರ್ವ ವ್ಯಕ್ತಿ ವೇಷ ಬದಲಿಸುವ ಮೂಲಕ ಎರಡು ಅಭಿಪ್ರಾಯಗಳನ್ನು ಹೇಳಿದ್ದಾಗಿಯೂ ವರದಿ ಬೆಟ್ಟು ಮಾಡಿದೆ. ಇಂತಹಾ ಟಿವಿ ಕಾರ್ಯಕ್ರಮಗಳಲ್ಲಿ ಬಿಜೆಪಿ ಮತ್ತು ಆದಿತ್ಯನಾಥ್‌ ಸರಕಾರದ ಪರ ಕಾರ್ಯಕ್ರಮಗಳನ್ನು ಬಿತ್ತರಿಸುವುದರ ನಡುವಿನ ಜಾಲಗಳನ್ನು ನ್ಯೂಸ್‌ ಲಾಂಡ್ರಿ ಬಯಲಿಗೆಳೆದಿದೆ. 

ಬಿಜೆಪಿ ಪಕ್ಷದೊಂದಿಗೆ ಗುರುತಿಸಿಕೊಂಡವನ್ನು ಮಾತ್ರ ಆಯ್ಕೆ ಮಾಡಿ ಸಂದರ್ಶನ ನಡೆಸಿರುವ ಸಂಪೂರ್ಣ ವಿಚಾರಗಳನ್ನು ಈ ವರದಿಯಲ್ಲಿ ಬಯಲಿಗೆಳೆಯಲಾಗಿದೆ. ಕೇವಲ ಕಾನ್ಪುರದಲ್ಲಿ ಮಾತ್ರವಲ್ಲದೇ ಮೀರತ್‌, ಜುನುಪುರ, ಅಯೋಧ್ಯಾಯದಲ್ಲಿಯೂ ಇಂತಹಾ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಮೂಲಕ ಸರಕಾರದ ಋಣಾತ್ಮಕ ಕಾರ್ಯಗಳನ್ನು ಮುಚ್ಚಿಡಲು ಪ್ರಯತ್ನಿಸಲಾಗಿತ್ತು ಎಂದು ವರದಿ ಉಲ್ಲೇಖಿಸಿದೆ.

ಎಲ್ಲಾ ಕ್ಷೇತ್ರಗಳ ಜನರೂ ರಾಜ್ಯ ಮತ್ತು ಕೇಂದ್ರ ಸರಕಾರವನ್ನು ಹೊಗಳುತ್ತಿದ್ದಾರೆ. ಸರಕಾರಗಳ ಕೆಲಸದಿಂದ ಜನರು ತೃಪ್ತರಾಗಿದ್ದಾರೆ ಎಂಬಂತೆ ಬಿಂಬಿಸಲಾಗಿತ್ತು. ಕೆಲವರನ್ನು ರೈತರೆಂದು ಪರಿಚಯಿಸಿ, "ಕೆಲವರು ಹೇಳುತ್ತಿದ್ದಾರೆ ಸರಕಾರದಿಂದ ರೈತರಿಗೆ ತೊಂದರೆಯಾಗುತ್ತಿದೆ ಎಂದು. ಆದರೆ ಇಲ್ಲಿ ಪರಿಸ್ಥಿತಿ ಬೇರೆಯೇ ಇದೆ. ರೈತರಿಗೆ ಈ ಹಿಂದಿನ ಸರಕಾರ ನೀಡಿದ್ದಕ್ಕಿಂತ ಹೆಚ್ಚಿನ ಸೌಕರ್ಯಗಳನ್ನು ಯೋಗಿ ಸರಕಾರ ನೀಡುತ್ತಿದೆ. ರಸಗೊಬ್ಬರಗಳು ಇನ್ನಿತರ ಸಮಸ್ಯೆಗಳನ್ನೂ ನೀಗಿಸಲಾಗಿದೆ" ಎಂದು ಸರಕಾರವನ್ನು ನಿರೂಪಕಿ ಹೊಗಳುವುದೂ ವೀಡಿಯೋದಲ್ಲಿ ದಾಖಲಾಗಿದೆ.

ವರದಿ ಕೃಪೆ: Newslaundry.com

Full View Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News