ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚನ್ನಿ ಸಹೋದರನಿಗೆ ಚುನಾವಣೆ ಟಿಕೆಟ್ ನಿರಾಕರಿಸಿದ ಕಾಂಗ್ರೆಸ್

Update: 2022-01-16 19:12 GMT

ಚಂಡಿಗಡ,ಜ.16: ಪಂಜಾಬ್ ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್ ಟಿಕೆಟ್ ನಿರಾಕರಿಸಲ್ಪಟ್ಟಿರುವ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿಯವರ ಸೋದರ ಡಾ.ಮನೋಹರ್ ಸಿಂಗ್ ಬಂಡಾಯವೆದ್ದಿದ್ದು, ಬಸ್ಸಿ ಪಠಾಣಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ.

ಪಕ್ಷದ ‘ಒಂದು ಕುಟುಂಬ ಒಂದು ಟಿಕೆಟ್’ ನೀತಿಯಂತೆ ಮನೋಹರ್ಗೆ ಟಿಕೆಟ್ ನಿರಾಕರಿಸಲಾಗಿದೆ ಎನ್ನಲಾಗಿದೆ. ಈ ಬೆಳವಣಿಗೆಗೆ ಚನ್ನಿ ತಕ್ಷಣಕ್ಕೆ ಪ್ರತಿಕ್ರಿಯಿಸಿಲ್ಲ. ಫತೇಗಡ ಸಾಹಿಬ್ ಜಿಲ್ಲೆಯ ಬಸ್ಸಿ ಪಠಾಣಾ ಕ್ಷೇತ್ರವನ್ನು ಚನ್ನಿ ಮತ್ತು ಅವರ ಕುಟುಂಬದ ತವರು ಕ್ಷೇತ್ರವೆಂದೇ ಪರಿಗಣಿಸಲಾಗುತ್ತಿದೆ.

 ಕಾಂಗ್ರೆಸ್ ತನ್ನ ಮೊದಲ ಪಟ್ಟಿಯಲ್ಲಿ ಬಸ್ಸಿ ಪಠಾಣಾದಿಂದ ಹಾಲಿ ಶಾಸಕ ಗುರ್ಪೀತ್ ಸಿಂಗ್ ಅವರನ್ನೇ ತನ್ನ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಈ ಕ್ಷೇತ್ರವು ಪರಿಶಿಷ್ಟ ಜಾತಿಗಳಿಗೆ ಮೀಸಲಾಗಿದೆ. ಹಿರಿಯ ವೈದ್ಯಾಧಿಕಾರಿಯಾಗಿ ಸರಕಾರಿ ಸೇವೆಯಲ್ಲಿದ್ದ ಮನೋಹರ ರಾಜಕೀಯ ಪ್ರವೇಶಕ್ಕಾಗಿಯೇ ಹುದ್ದೆಗೆ ರಾಜೀನಾಮೆ ನೀಡಿದ್ದರು.
 
‘ಒಂದು ಕುಟುಂಬ ಒಂದು ಟಿಕೆಟ್’ ನೀತಿಯ ಜೊತೆಗೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರ ಬೆಂಬಲವನ್ನೂ ಮನೋಹರ ಹೊಂದಿಲ್ಲ. ಅವರು ಟಿಕೆಟ್ ಗೆ ಕೋರಿಕೆ ಸಲ್ಲಿಸುವ ಮುನ್ನವೇ ಸಿಧು ಗುರ್ಪೀತ್ ಸಿಂಗ್ ಅವರನ್ನು ಬೆಂಬಲಿಸಿ ರ್ಯಾಲಿಯನ್ನು ನಡೆಸಿದ್ದರು.

ಮನೋಹರ್ ಅವರನ್ನು ಭೇಟಿಯಾಗಿ ಸಮಾಧಾನ ಹೇಳುವುದಾಗಿ ಸಿಧು ತಿಳಿಸಿದ್ದರು. ಆದರೆ ತಮ್ಮಿಬ್ಬರ ನಡುವೆ ಭೇಟಿ ನಡೆದಿಲ್ಲ ಎಂದು ಮನೋಹರ್ ಹೇಳಿದ್ದಾರೆ. ಹೀಗಾಗಿ ಮನೋಹರ್ ಉಮೇದುವಾರಿಕೆಯನ್ನು ಪಕ್ಷಕ್ಕೆ ಮತ್ತು ಚನ್ನಿಯವರಿಗೆ ಮುಜುಗರ ಎಂದು ಮಾತ್ರವಲ್ಲ, ಅದು ಚನ್ನಿ ಪಾಳಯದಿಂದ ಸಿಧು ವಿರುದ್ಧದ ಸಂಭಾವ್ಯ ದಾಳಿ ಎಂದು ಭಾವಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News